ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಸಂದಿರುವುದು ಅತ್ಯಂತ ಅರ್ಹ ವ್ಯಕ್ತಿಗೆ ಸಿಕ್ಕ ಗೌರವ' ಎಂದ ನಟ ರಮೇಶ್ ಅರವಿಂದ್

Ananth Nag: ಕನ್ನಡ ಚಿತ್ರರಂಗದ ಹಿರಿಯ ನಟ ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಭಾಜನವಾಗಿರುವುದು ಭಾರತೀಯ ಚಿತ್ರರಂಗದ ಅತ್ಯಂತ ಅರ್ಹ ವ್ಯಕ್ತಿಗೆ ಸಂದ ಗೌರವ ಎಂದು ನಟ-ನಿರ್ದೇಶಕ ರಮೇಶ್ ಅರವಿಂದ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ನಟನೆ, ಜ್ಞಾನ ಮತ್ತು ಪಾತ್ರಗಳ ಆಯ್ಕೆ ಇಂದಿನ ಪೀಳಿಗೆಗೆ ಮಾದರಿ ಎಂದಿದ್ದಾರೆ ರಮೇಶ್‌.

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಕನ್ನಡದ ಹಿರಿಯ ಮೇರು ನಟ ಅನಂತ್ ನಾಗ್ ಭಾಜನವಾಗಿರುವುದಕ್ಕೆ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ್ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ವಿಶ್ವವಾಣಿ ಟಿವಿ’ ಜೊತೆ ವಿಶೇಷವಾಗಿ ಮಾತನಾಡಿದ ಅವರು, ಈ ಪ್ರಶಸ್ತಿ ಪ್ರಕಟವಾಗಿರುವುದು ತಮಗೆ ವೈಯಕ್ತಿಕವಾಗಿ ಅತ್ಯಂತ ಭಾವನಾತ್ಮಕ ಹಾಗೂ ಹೆಮ್ಮೆಯ ಕ್ಷಣ ಎಂದು ಹಂಚಿಕೊಂಡಿದ್ದಾರೆ.

ಅವರು ನಟಿಸುವಾಗ ನಟಿಸುತ್ತಿದ್ದಾರೆ ಎಂದೇ ಅನಿಸುವುದಿಲ್ಲ

ಕಾಲೇಜು ದಿನಗಳಲ್ಲೇ ಅನಂತ್ ನಾಗ್ ಅವರ ‘ಚಂದನದ ಗೊಂಬೆ’ಯಂತಹ ಚಿತ್ರಗಳನ್ನು ನೋಡಿ ಆರಾಧಿಸುತ್ತಿದ್ದ ದಿನಗಳನ್ನು ಸ್ಮರಿಸಿದ ರಮೇಶ್ ಅರವಿಂದ್, ನಂತರ ಸಹನಟನಾಗಿ ಅವರೊಂದಿಗೆ ತೆರೆಹಂಚಿಕೊಂಡಾಗ ಅವರ ನಿರರ್ಗಳ ಉಚ್ಚಾರಣೆ, ನಟನೆಯನ್ನು ಕಂಡು ಬೆರಗಾಗಿದ್ದಾಗಿ ತಿಳಿಸಿದರು. "ಅನಂತ್ ನಾಗ್ ನಟಿಸುವಾಗ ನಟಿಸುತ್ತಿದ್ದಾರೆ ಎಂದೇ ಅನಿಸುವುದಿಲ್ಲ, ಎಂತಹ ಗಂಭೀರ ಸನ್ನಿವೇಶವನ್ನಾದರೂ ಅಷ್ಟು ಸುಲಭವಾಗಿ ನಿಭಾಯಿಸಿಬಿಡುತ್ತಾರೆ. ಅದು ಅವರ ದಶಕಗಳ ಅನುಭವ ಮತ್ತು ಅಪರೂಪದ ಪ್ರತಿಭೆ. ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯ ‘ಗರ್ವ’ ಧಾರಾವಾಹಿ ಹೀಗೆ ಎಲ್ಲ ಮಾಧ್ಯಮಗಳಲ್ಲೂ ಅವರು ಪ್ರೇಕ್ಷಕರೊಂದಿಗೆ ಬೆಸೆದುಕೊಂಡ ರೀತಿ ಅದ್ಭುತ" ಎಂದು ಗುಣಗಾನ ಮಾಡಿದರು.

''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ'': ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಅನಂತ್‌ರಂತೆ ಸಹಜವಾಗಿ ನಟಿಸುವ ನಟರು ವಿರಳ

ಭಾರತೀಯ ಚಿತ್ರರಂಗದಲ್ಲೇ ಇಷ್ಟು ಸಹಜವಾಗಿ ನಟಿಸುವ ನಟರು ಅತ್ಯಂತ ವಿರಳ ಎಂದ ರಮೇಶ್, ಹಾಸ್ಯ ಮತ್ತು ಗಂಭೀರ ಪಾತ್ರಗಳೆರಡರಲ್ಲೂ ಅವರು ತೋರಿರುವ ಸಮತೋಲನವನ್ನು ಕೊಂಡಾಡಿದರು. ‘ನಾನಿನ್ನ ಬಿಡಲಾರೆ’, ‘ನಾರದ ವಿಜಯ’, ‘ಗಣೇಶ’ ಸರಣಿಯ ಹಾಸ್ಯಚಿತ್ರಗಳು ಹಾಗೂ ‘ಬೆಳದಿಂಗಳ ಬಾಲೆ’ ಸಿನಿಮಾಗಳನ್ನು ನೆನಪಿಸಿಕೊಂಡರೆ ಅವರು ಈ ಪ್ರಶಸ್ತಿಗೆ ಎಷ್ಟು ಅರ್ಹರು ಎಂಬುದು ಸ್ಪಷ್ಟವಾಗುತ್ತದೆ ಎಂದರು ರಮೇಶ್. ಆರಂಭದ ‘ಹಂಸಗೀತೆ’ಯಿಂದ ಹಿಡಿದು ಇಂದಿನವರೆಗಿನ ಅವರ ಐದು ದಶಕಗಳ ಸಿನಿಪಯಣವು ಯುವ ನಟರಿಗೆ ನಿರಂತರ ‘ಮಾಸ್ಟರ್ ಕ್ಲಾಸ್’ ಇದ್ದಂತೆ. ಈ ಪ್ರಶಸ್ತಿಯಿಂದಾಗಿ ದೇಶ-ವಿದೇಶಗಳ ಪ್ರೇಕ್ಷಕರು ಅನಂತ್ ನಾಗ್ ಅವರ ಮೇರು ಚಿತ್ರಗಳನ್ನು ಮರುಶೋಧಿಸಲು ದೊಡ್ಡ ಪ್ರೇರಣೆ ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಿದರು‌ ರಮೇಶ್‌.‌

ಗೋಧಿಬಣ್ಣ ಟೈಮಲ್ಲೇ ಅನಂತ್ ಸರ್ ಅವಾರ್ಡ್ಸ್ ಬೇಡ ಜನರ ಪ್ರೀತಿ ಸಾಕು ಅಂದಿದ್ರು



ಅಂದು ಅಣ್ಣಾವ್ರು, ಇಂದು ಅನಂತ್‌

ಅನಂತ್ ನಾಗ್ ಅವರ ಓದು, ಅಪಾರ ಜ್ಞಾನ ಮತ್ತು ಬದುಕನ್ನು ಗ್ರಹಿಸಿರುವ ರೀತಿಯೇ ಅವರ ಅಭಿನಯವನ್ನು ಇತರರಿಗಿಂತ ಒಂದು ಹಂತ ಎತ್ತರದಲ್ಲಿ ನಿಲ್ಲಿಸಿದೆ ಎಂದ ರಮೇಶ್, "ದೃಶ್ಯ ಮತ್ತು ಪಾತ್ರದ ಉದ್ದೇಶ ಒಪ್ಪಿಗೆಯಾಗದಿದ್ದರೆ ಅವರು ಎಂದಿಗೂ ನಟಿಸುವುದಿಲ್ಲ. ತಮ್ಮ ವಯಸ್ಸಿಗೆ ತಕ್ಕ ಗಟ್ಟಿತನದ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವರ ವೃತ್ತಿಪರತೆ ಎಲ್ಲರಿಗೂ ಮಾದರಿ. ಪ್ರಶಸ್ತಿ ಕೊಂಚ ತಡವಾಗಿ ಬಂದಿರಬಹುದು, ಆದರೆ ಅತ್ಯಂತ ಅರ್ಹ ವ್ಯಕ್ತಿಯನ್ನು ಹುಡುಕಿಕೊಂಡು ಬಂದಿದೆ. ಹಿಂದೆ ವರನಟ ಡಾ. ರಾಜ್‌ಕುಮಾರ್ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದಾಗ ನಮಗೆ ಎಷ್ಟು ಹೆಮ್ಮೆಯಾಗಿತ್ತೋ, ಇಂದು ಅನಂತ್ ನಾಗ್ ಅವರಿಗೆ ಸಿಕ್ಕಿರುವುದೂ ಅಷ್ಟೇ ಸಂಭ್ರಮವನ್ನು ತಂದಿದೆ" ಎಂದು ರಮೇಶ್ ಅರವಿಂದ್ ಸಂತಸ ಹಂಚಿಕೊಂಡರು.