‘ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ಯಂತಹ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟರಾಗಿ ನೆಲೆ ಕಂಡುಕೊಂಡಿರುವ ರಿಷಿ ಅವರ ಹೊಸ ಪ್ರಾಜೆಕ್ಟ್ ಸೆಟ್ಟೇರಲು ಸಜ್ಜಾಗಿದೆ. ಈ ಚಿತ್ರದ ಮೂಲಕ ಬಾಲಿವುಡ್‌ನ ಬ್ಲಾಕ್‌ಬಸ್ಟರ್ ‘ಅನಿಮಲ್’ ಹಾಗೂ ತೆಲುಗಿನ ‘ಪೆದ್ದಿ’ ಚಿತ್ರಗಳಲ್ಲಿನ ನಟನೆಯ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ಖ್ಯಾತ ಮರಾಠಿ ಸೂಪರ್‌ಸ್ಟಾರ್ ಉಪೇಂದ್ರ ಲಿಮಾಯೆ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅವರು ರಿಷಿ ಎದುರು ಖಡಕ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ.
ಆರ್‌ಜಿವಿಯ ಶಿಷ್ಯನ ಸಿನಿಮಾ
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಗರಡಿಯಲ್ಲಿ ದಶಕಗಳ ಕಾಲ ಪಳಗಿರುವ ಹಾಗೂ ಈ ಹಿಂದೆ ಕನ್ನಡದಲ್ಲಿ ‘ಸ್ಟಾಲ್ಕರ್’ ಚಿತ್ರವನ್ನು ನಿರ್ದೇಶಿಸಿದ್ದ ಕಿಶೋರ್ ಭಾರ್ಗವ್ ಈ ಹೊಸ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಿರ್ದೇಶಕರಾಗಿ ಕಿಶೋರ್ ಭಾರ್ಗವ್ ಅವರಿಗೆ ಇದು ಮೂರನೇ ಸಿನಿಮಾವಾಗಿದ್ದು, ಸಂಪೂರ್ಣ ಹೊಸತನದಿಂದ ಕೂಡಿದ ರೋಚಕ ಕಥಾಹಂದರವನ್ನು ತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ. ಮರಾಠಿ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿ, ಬಳಿಕ ಬಹುಭಾಷಾ ನಟರಾಗಿ ಸೈ ಎನಿಸಿಕೊಂಡಿರುವ ಉಪೇಂದ್ರ ಲಿಮಾಯೆ ಅವರ ಎಂಟ್ರಿಯು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ನವೆಂಬರ್‌ನಲ್ಲಿ ಶೂಟಿಂಗ್ ಆರಂಭ
‘ಹಂಗೇಸ್ ಸಾಯಿ ವಿಷನ್ಸ್’ ಬ್ಯಾನರ್‌ನಡಿಯಲ್ಲಿ ವಸಂತ್ ಹಂಗೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಶ್ರೀಕಾಂತ್ ಜಿ. ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಸೋಮಶೇಖರ ಅವರು ಸಂಭಾಷಣೆ, ಸಾಹಿತ್ಯ ಹಾಗೂ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಅನಂತ ಭಾರದ್ವಾಜ್ ಅವರ ಛಾಯಾಗ್ರಹಣ ಹಾಗೂ ಸ್ಕಂದ ಕಶ್ಯಪ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ.
ಮಗಳಿಗೆ ʻಕುವೀರʼ ಎಂದು ನಾಮಕರಣ ಮಾಡಿ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ ರಿಷಿ; ಈ ಹೆಸರಿನ ಅರ್ಥ ಏನು?
ಸದ್ಯ ಚಿತ್ರಕ್ಕೆ ಇನ್ನಷ್ಟೇ ಶೀರ್ಷಿಕೆ ಅಂತಿಮವಾಗಬೇಕಿದ್ದು, ಪ್ರಮುಖ ತಾರಾಗಣದ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಎಲ್ಲಾ ಪೂರ್ವತಯಾರಿಗಳನ್ನು ಮುಗಿಸಿ ಇದೇ ನವೆಂಬರ್ ತಿಂಗಳಲ್ಲಿ ಚಿತ್ರೀಕರಣವನ್ನು ಅಖಾಡಕ್ಕಿಳಿಸಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ. ಇನ್ನೂ ಹೆಸರಿಡದ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನ ನಾಯಕಿ ಹಾಗೂ ಪೂರ್ಣ ತಾರಾಗಣದ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.