ಮಂಗಳೂರು ಮತ್ತು ಕರಾವಳಿ ಭಾಗದ ಹೆಸರಾಂತ ಕಲಾವಿದರ ದಂಡನ್ನೇ ಹೊಂದಿರುವ ಬಹುನಿರೀಕ್ಷಿತ 'ಅಪರಾಧಿ ನಾನಲ್ಲ' ಚಿತ್ರದ ಅಧಿಕೃತ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಜೈಲಿನ ಹಿನ್ನೆಲೆಯಲ್ಲಿ ಸಾಗುವ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವು ಜುಲೈ 3ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಒಂದು ಕೊಲೆ - ಮೂವರು ಕೈದಿಗಳು
ಚಿತ್ರದ ಟ್ರೇಲರ್ ಆಕರ್ಷಕವಾಗಿದ್ದು, ಜೈಲಿನಲ್ಲಿರುವ ಮೂವರು ಕೈದಿಗಳು ಅಲ್ಲಿಂದ ಹೇಗೆ ಹೊರಬರುತ್ತಾರೆ ಮತ್ತು ಅವರ ಸುತ್ತ ನಡೆಯುವ ಒಂದು ನಿಗೂಢ ಕೊಲೆಯ ತನಿಖೆ ಹೇಗೆ ಸಾಗುತ್ತದೆ ಎಂಬ ರೋಚಕ ಅಂಶಗಳನ್ನು ಟ್ರೇಲರ್‌ನಲ್ಲಿ ಹೈಲೈಟ್ ಮಾಡಲಾಗಿದೆ. ಎಸ್‌ಎಲ್‌ವಿ ಕಲರ್ಸ್ ಅನುಗ್ರಹ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅಜಿತ್ ಚೌಟಾ ದೇವಸ್ಯ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ವಿಕ್ರಂ ದೇವಾಡಿಗ ಮತ್ತು ಸಂದೀಪ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
'ಕರಾವಳಿ' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್; ʻಮುದ್ದು ಗುಮ್ಮʼ ಹಾಡನ್ನು ಮುದ್ದಾಗಿ ಹಾಡಿದ ಸಿದ್ ಶ್ರೀರಾಮ್
ಜೈಲಿನಲ್ಲಿ ಇರುವ ಎಲ್ಲರೂ ಅಪರಾಧಿಗಳಲ್ಲ
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಯಶಂತ್ ಕಲ್ಲಡ್ಕ, "ಕಳೆದ 20 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದು, ನಿರ್ದೇಶಕನಾಗಿ ಇದು ನನ್ನ ಮೊದಲ ಸಿನಿಮಾವಾಗಿದೆ. ಜೈಲಿನಲ್ಲಿರುವವರೆಲ್ಲರೂ ಅಪರಾಧಿಗಳೇ ಆಗಿರುವುದಿಲ್ಲ ಎಂಬ ಆಲೋಚನೆಯೇ ಈ ಚಿತ್ರದ ಶೀರ್ಷಿಕೆಗೆ ಪ್ರೇರಣೆ. ಒಂದು ಸತ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು, ಅದಕ್ಕೆ ಅಗತ್ಯವಿರುವ ಕಮರ್ಷಿಯಲ್ ಮಸಾಲೆಗಳನ್ನು ಸೇರಿಸಿ ಈ ಚಿತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅರ್ಜುನ್ ಕಾಪಿಕಾಡ್ ಜೊತೆ ಅಮೃತಾ ಮೂರ್ತಿ ಜುಗಲ್‌ಬಂದಿ
ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅರ್ಜುನ್ ದೇವ್ ಚಿತ್ರತಂಡಕ್ಕೆ ಶುಭ ಹಾರೈಸಿದರೆ, ನಾಯಕಿ ಅಮೃತಾ ಮೂರ್ತಿ ತಮ್ಮ ಪಾತ್ರದ ಕುರಿತು ವಿಶೇಷ ಮಾಹಿತಿ ಹಂಚಿಕೊಂಡರು. "ಚಿತ್ರದಲ್ಲಿ ನಾನು ವೈದ್ಯೆಯ (ಡಾಕ್ಟರ್) ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕರಾವಳಿಯಲ್ಲಿ 'ಹುಲಿ' ಎಂದೇ ಖ್ಯಾತರಾಗಿರುವ ತುಳು ಚಿತ್ರರಂಗದ ಸ್ಟಾರ್ ನಟ ಅರ್ಜುನ್ ಕಾಪಿಕಾಡ್ ಅವರೊಂದಿಗೆ ನಟಿಸಿರುವುದು ಅತ್ಯಂತ ಖುಷಿ ನೀಡಿದೆ. ಹೊಸಬರ ಈ ಪ್ರಯತ್ನಕ್ಕೆ ಪ್ರೇಕ್ಷಕರ ಬೆಂಬಲ ಸಿಗಲಿ" ಎಂದು ಅವರು ಆಶಿಸಿದರು.
ಈ ಚಿತ್ರದಲ್ಲಿ ಅಮೃತಾ, ಅರ್ಜುನ್ ಮತ್ತು ಅರ್ಜುನ್ ಕಾಪಿಕಾಡ್ ಅವರೊಂದಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ಪೋಷಕ ನಟ ಪ್ರಮೋದ್ ಶೆಟ್ಟಿ, ಕರಾವಳಿಯ ಜನಪ್ರಿಯ ಹಾಸ್ಯ ನಟ ಅರವಿಂದ್ ಬೋಳಾರ್, ಅಶೋಕ್ ಹೆಗ್ಡೆ ಹಾಗೂ ನೀತೂ ಶೆಟ್ಟಿ ಸೇರಿದಂತೆ ಹಿರಿಯ-ಕಿರಿಯ ಕಲಾವಿದರ ದೊಡ್ಡ ಬಳಗವೇ ಇದೆ. ಕುತೂಹಲಕಾರಿ ಕಥೆ ಹಾಗೂ ತಾರಾಗಣದಿಂದ ಸದ್ದು ಮಾಡುತ್ತಿರುವ 'ಅಪರಾಧಿ ನಾನಲ್ಲ' ಸಿನಿಮಾವು ಜುಲೈ 3ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.