ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಇಡೀ ದೇಶವೇ ದಿಢೀರ್ ಸ್ತಬ್ಧಗೊಂಡ ಆ 21 ದಿನಗಳ ಲಾಕ್‌ಡೌನ್ ಪ್ರತಿಯೊಬ್ಬರ ಬದುಕಿನಲ್ಲೂ ತಂದಿಟ್ಟ ಆರ್ಥಿಕ ಹೊಡೆತ, ಸಂಕಷ್ಟ ಹಾಗೂ ಗೊಂದಲಗಳು ಅಷ್ಟಿಷ್ಟಲ್ಲ. ಸಾಮಾನ್ಯ ಜನರು ಎದುರಿಸಿದ ಅಂತಹ ನೈಜ ಸವಾಲುಗಳು ಮತ್ತು ಮಾನವೀಯ ಸಂಬಂಧಗಳ ಗಟ್ಟಿತನವನ್ನು ಬೆಳ್ಳಿಪರದೆಯ ಮೇಲೆ ತರಲು 'ಲಾಕ್‌ಡೌನ್ 21 ಡೇಸ್' ಸಿನಿಮಾ ಸಜ್ಜಾಗುತ್ತಿದೆ.
ಸಾಮಾಜಿಕ ಸಂದೇಶದ ಜೊತೆಗೆ ಕಠಿಣ ಪರಿಸ್ಥಿತಿಯ ನಡುವೆ ಅರಳುವ ಸುಂದರ ಪ್ರೇಮಕಥೆಯ ಹಂದರವನ್ನು ಹೊಂದಿರುವ ಈ ಚಿತ್ರದ ಮುಹೂರ್ತ ಸಮಾರಂಭವು ಇತ್ತೀಚೆಗಷ್ಟೇ ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಅದ್ಧೂರಿಯಾಗಿ ನೆರವೇರಿತು.
ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು
ಈ ಹಿಂದೆ ಹಲವು ಯಶಸ್ವಿ ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಪ್ರತಿಭಾವಂತ ಜೋಡಿ ನಿರ್ದೇಶಕರಾದ ಮಧುಮೋಹನ್ ಹಾಗೂ ಮಾಚಯ್ಯ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ 'ನಮ್ ಗಣಿ ಬಿಕಾಂ ಪಾಸ್' ಖ್ಯಾತಿಯ ನಿರ್ದೇಶಕ ಅಭಿಷೇಕ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಚಿತ್ರತಂಡಕ್ಕೆ ಶುಭ ಹಾರೈಸಿ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ನೀಡಿದರು.
ಪ್ರಮುಖ ಪಾತ್ರದಲ್ಲಿ ಎಂ.ಕೆ. ಮಠ
'ಅರುಣಾ ಯಾದವ್ ಫಿಲ್ಮ್ ಹೌಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಪಕಿ ಅರುಣಾ ಯಾದವ್ ಅವರು ಅತ್ಯಂತ ಸದಭಿರುಚಿಯೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅನಿಲ್ ಸಿ.ಕೆ., ಅರುಣಾ ಯಾದವ್, ಪ್ರಿಯಾಂಕಾ ರಾಜ್, ಮಂಜು ನಂಜನಗೂಡು, ಅಕ್ಷಯ್, ಎಂ.ಕೆ. ಮಠ ಹಾಗೂ ಚಂದನ್ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅನುಭವಿ ಹಾಗೂ ಹೊಸ ಕಲಾವಿದರ ಸಮಾಗಮ ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ನಮ್ಮ ಕನಸಿಗೆ ನಿರ್ಮಾಪಕರು ಸಾಥ್ ನೀಡಿದ್ದಾರೆ
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕರಾದ ಮಧುಮೋಹನ್ ಹಾಗೂ ಮಾಚಯ್ಯ, "ಕಿರುಚಿತ್ರಗಳನ್ನು ನಿರ್ದೇಶಿಸಿದ ಬಳಿಕ ಬೆಳ್ಳಿಪರದೆಗೆ ದೊಡ್ಡ ಮಟ್ಟದ ಸಿನಿಮಾ ಮಾಡಬೇಕೆಂಬ ನಮ್ಮ ಕನಸಿಗೆ ಸಾಥ್ ನೀಡಿ, ಈ ಕಥೆಯನ್ನು ನಂಬಿ ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು" ಎಂದು ತಿಳಿಸಿದರು.
ಲಾಕ್‌ಡೌನ್ ವೇಳೆ ಹರಸಾಹಸಪಟ್ಟು ನೀಟ್ ಬರೆದಿದ್ದ ತನುಜಾ ಈಗ ಡಾ. ತನುಜಾ!
ಇದೇ ವೇಳೆ ಮಾತನಾಡಿದ ನಿರ್ಮಾಪಕಿ ಅರುಣಾ ಯಾದವ್, "ಒಬ್ಬ ಮಹಿಳಾ ನಿರ್ಮಾಪಕಿಯಾಗಿ ಸಮಾಜಕ್ಕೆ ಹತ್ತಿರವಾದ, ಜನಸಾಮಾನ್ಯರ ಭಾವನೆಗಳಿಗೆ ಧ್ವನಿಯಾಗುವಂತಹ ಕಥೆಯನ್ನು ತೆರೆಯ ಮೇಲೆ ತರುತ್ತಿರುವುದು ನಮ್ಮ ಇಡೀ ತಂಡಕ್ಕೆ ಹೆಮ್ಮೆ ಮತ್ತು ಸಂತಸ ತಂದಿದೆ" ಎಂದರು. ಲಾಕ್‌ಡೌನ್‌ನ ಗಂಭೀರತೆಯ ಜೊತೆಗೆ ಹೃದಯಸ್ಪರ್ಶಿ ಪ್ರೇಮಕಥೆಯನ್ನು ಒಳಗೊಂಡಿರುವ 'ಲಾಕ್‌ಡೌನ್ 21 ಡೇಸ್' ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.