ಸ್ಯಾಂಡಲ್‌ವುಡ್‌ನ ತಾರಾ ದಂಪತಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯುಷ್ ನಟನೆಯ ಚೊಚ್ಚಲ ಚಿತ್ರ ‘ಆಯುಷ್’ ತಂಡದಲ್ಲಿ ವಿವಾದ ಭುಗಿಲೆದ್ದಿದೆ. ಚಿತ್ರದ ಶೇ.50ರಷ್ಟು ಚಿತ್ರೀಕರಣ ಮುಗಿದ ಬೆನ್ನಲ್ಲೇ, ನಿರ್ದೇಶಕ ʻಮೊದಲ ಸಲʼ ಖ್ಯಾತಿಯ ಪುರುಷೋತ್ತಮ್ ಸಿ. ಸೋಮನಾಥಪುರ ಅವರನ್ನು ಸಿನಿಮಾದಿಂದ ದಿಢೀರ್ ಕೈಬಿಡಲಾಗಿದೆ. ಈ ಬೆಳವಣಿಗೆಯಿಂದ ತೀವ್ರ ಆಘಾತಕ್ಕೊಳಗಾದ ನಿರ್ದೇಶಕರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ಅವರ ಆರೋಪಗಳಿಗೆ ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ಸ್ಪಷ್ಟ ಉತ್ತರ ನೀಡಿದ್ದಾರೆ.
ಪುರುಷೋತ್ತಮ್ ಮಾಡಿದ ಆರೋಪಗಳೇನು?
ನಟ ಯಶ್ ಅಭಿನಯದ ‘ಮೊದಲ ಸಲ’ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ಪುರುಷೋತ್ತಮ್, ಸುಮಾರು 12 ವರ್ಷಗಳ ಕಾಲ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದರು. ನಂತರ ಛಾಯಾಗ್ರಾಹಕ ವೇಣು ಅವರ ಮೂಲಕ ಮೈಸೂರು ಮೂಲದ ನಿರ್ಮಾಪಕ ಅಭಿಷೇಕ್ ಎನ್. ಸಿರಿವಂತ್ ಅವರನ್ನು ಸಂಪರ್ಕಿಸಿ ಪ್ರಾಜೆಕ್ಟ್ ಅಂತಿಮಗೊಳಿಸಿದ್ದರು. ಟೀನೇಜ್ ಹುಡುಗನ ಪಾತ್ರಕ್ಕೆ ಆಯುಷ್ ಸೂಕ್ತವೆನಿಸಿ ಉಪೇಂದ್ರ ಕುಟುಂಬಕ್ಕೆ ಕಥೆ ಹೇಳಿದಾಗ, ಎಲ್ಲರಿಗೂ ಇಷ್ಟವಾಗಿ ಒಪ್ಪಿಗೆ ದೊರೆತಿತ್ತು. ಕಳೆದ ವರ್ಷವೇ ಚಿತ್ರೀಕರಣ ಆರಂಭಿಸಲಾಗಿತ್ತು. ಆದರೆ ಅರ್ಧ ಚಿತ್ರೀಕರಣ ಮುಗಿಯುತ್ತಿದ್ದಂತೆ, ಮುಂದಿನ ಶೆಡ್ಯೂಲ್ ಅನ್ನು ಪ್ರಿಯಾಂಕಾ ಅವರೇ ನಿರ್ದೇಶಿಸಲಿದ್ದಾರೆ ಹಾಗೂ ಕಥೆ-ದೃಶ್ಯಗಳನ್ನು ಬದಲಾಯಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾಗಿ ಪುರುಷೋತ್ತಮ್ ಆರೋಪಿಸಿದ್ದಾರೆ.
Priyanka Upendra: ಬಾಲಿವುಡ್ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ; ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಆ್ಯಕ್ಷನ್ ಕಟ್
ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದ ನಿರ್ದೇಶಕ
ಏಕಾಏಕಿ ತಮ್ಮನ್ನು ಪ್ರಾಜೆಕ್ಟ್‌ನಿಂದ ಹೊರಗಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪುರುಷೋತ್ತಮ್, "ನಾನು ಒಂದೂವರೆ ವರ್ಷ ಶ್ರಮ ಹಾಕಿದ್ದೇನೆ. ಹೊಸ ಕಥೆ ಮಾಡುವುದಾದರೆ ನನ್ನ ಕಥೆ ಹಾಗೂ ನಾನು ಚಿತ್ರೀಕರಿಸಿದ ದೃಶ್ಯಗಳನ್ನು ಬಳಸಬಾರದು. ನನ್ನ ಶ್ರಮಕ್ಕೆ ತಕ್ಕ ಸಂಭಾವನೆ ಮತ್ತು ದೃಢೀಕರಣ ಪತ್ರ ನೀಡಬೇಕು" ಎಂದು ಕೇಳಿದ್ದಾಗಿ ತಿಳಿಸಿದ್ದಾರೆ. ಆದರೆ ನಿರ್ಮಾಪಕರಿಂದಾಗಲಿ ಅಥವಾ ಉಪೇಂದ್ರ ದಂಪತಿಯಿಂದಾಗಲಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗದೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರು ದೂರಿದ್ದರು.
ಚಿತ್ರಕಥೆಯನ್ನು ನಾವು ಬರೆದಿದ್ದೇವೆ
ನಿರ್ದೇಶಕರ ಈ ಆರೋಪಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ನಟಿ ಪ್ರಿಯಾಂಕಾ ಉಪೇಂದ್ರ, ನಿರ್ದೇಶಕರ ಬೇಜವಾಬ್ದಾರಿತನ ಹಾಗೂ ಅವರಿಗೆ ಸರಿಯಾಗಿ ಕೆಲಸ ಬಾರದ ಕಾರಣಕ್ಕಾಗಿಯೇ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಿರ್ಮಾಪಕರ ಬಂಡವಾಳಕ್ಕೆ ಬೆಲೆ ಕೊಡಬೇಕಾದ ಅನಿವಾರ್ಯತೆ ಇರುವುದರಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಪುರುಷೋತ್ತಮ್ ತಂದಿದ್ದ ಕೇವಲ ಒನ್‌ಲೈನರ್ ಅನ್ನು ಉಪೇಂದ್ರ ಹಾಗೂ ತಾವಿಬ್ಬರೂ ಕೂತು ಚಿತ್ರಕತೆಯಾಗಿ ಅಭಿವೃದ್ಧಿಪಡಿಸಿದ್ದು, ಅದನ್ನು ಸಂಪೂರ್ಣ ತಮ್ಮದೇ ಕಥೆ ಎನ್ನುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿರ್ದೇಶನಕ್ಕಿಳಿದ ಪ್ರಿಯಾಂಕಾ ಉಪೇಂದ್ರ
ಅಷ್ಟೇ ಅಲ್ಲದೆ, ಚಿತ್ರೀಕರಣದ ವೇಳೆ ಪುರುಷೋತ್ತಮ್ ಉತ್ತಮವಾಗಿ ಕೆಲಸ ಮಾಡಿಲ್ಲ, ಸರಿಯಾಗಿ ಶಾಟ್ಸ್ ತೆಗೆದುಕೊಳ್ಳುವುದಕ್ಕೂ ಬರುತ್ತಿರಲಿಲ್ಲ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ. ಲೊಕೇಶನ್ ನೋಡಲು ಎರಡು ಬಾರಿ ಕಾಶ್ಮೀರಕ್ಕೆ ಹೋದರೂ ಸರಿಯಾಗಿ ಜಾಗ ಅಂತಿಮಗೊಳಿಸಿರಲಿಲ್ಲ, ಅನುಮತಿಗಳನ್ನು ಪಡೆಯದ ಕಾರಣ ಶೂಟಿಂಗ್‌ಗೆ ತೊಂದರೆಯಾಯಿತು, ಕಾಶ್ಮೀರದಿಂದ ಮರಳಿದ ಮೇಲೆ ಎಡಿಟಿಂಗ್‌ಗೆ ಹಾಜರಾಗುತ್ತಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.
ಜೊತೆಗೆ ಕಲಾವಿದರನ್ನು ಕಾಯಿಸುವುದು ಮತ್ತು ಸಂಗೀತ ನಿರ್ದೇಶಕರೊಂದಿಗೆ ಕುಳಿತು ಕೆಲಸ ಮಾಡದೇ ಇರುವುದು ಸೇರಿದಂತೆ ಹಲವು ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಮಗನ ಚೊಚ್ಚಲ ಚಿತ್ರವನ್ನು ತಾವೇ ಮುಂದುವರಿಸಿ ನಿರ್ದೇಶಿಸುವುದಾಗಿ ಪ್ರಿಯಾಂಕಾ ಉಪೇಂದ್ರ ದೃಢಪಡಿಸಿದ್ದಾರೆ.