Thamma Trailer Release: ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ; ʼಥಮ್ಮʼದ ಟ್ರೈಲರ್ ರಿಲೀಸ್
Rashmika Mandanna: ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸಜ್ಜಾಗಿದ್ದಾರೆ. ಮೊದಲ ಬಾರಿ ಅವರು ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡ ʼಥಮ್ಮʼದ ಟ್ರೈಲರ್ ರಿಲೀಸ್ ಆಗಿದೆ. ಇದರಲ್ಲಿ ಆಯುಷ್ಮಾನ್ ಖುರಾನ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

-

ಮುಂಬೈ: ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿ ಬಳಿಕ ಟಾಲಿವುಡ್‌ಗೆ ಕಾಲಿಟ್ಟು ಸದ್ಯ ಬಾಲಿವುಡ್‌ನಲ್ಲಿಯೂ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ದೇಶದ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಇದೀಗ ಅವರು ಬಾಲಿವುಡ್‌ನಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇದುವರೆಗೆ ಕಾಣಿಸಿಕೊಳ್ಳದ ರೀತಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡ ʼಥಮ್ಮʼದ ಟ್ರೈಲರ್ ರಿಲೀಸ್ ಆಗಿದೆ (Thamma Trailer Release). ರಶ್ಮಿಕಾ ಮತ್ತು ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರೆನಿಸಿಕೊಂಡ ಆಯುಷ್ಮಾನ್ ಖುರಾನ (Ayushmann Khurrana) ಕಾಂಬಿನೇಷನ್‌ನ ಮೊದಲ ಚಿತ್ರ ಇದಾಗಿದ್ದು, ಟ್ರೈಲರ್ ಗಮನ ಸೆಳೆಯುತ್ತಿದೆ.
ಬಾಲಿವುಡ್‌ನ 'ಅನಿಮಲ್', 'ಛಾವಾ' ಚಿತ್ರದ ಮೂಲಕ ಬ್ಯಾಕ್ ಟು ಬ್ಯಾಕ್ ಯಶಸ್ಸು ಗಳಿಸಿರುವ ರಶ್ಮಿಕಾ 'ಥಮ್ಮ'ದ ಮೂಲಕ ಮತ್ತೊಮ್ಮೆ ಗೆಲುವಿನ ನಗೆ ಬೀರುವ ನಿರೀಕ್ಷೆಯಲ್ಲಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಹಾರರ್ ಚಿತ್ರ ಇದಾಗಿದ್ದು, ಆದಿತ್ಯ ಸರ್ಪೋತ್‌ದಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮ್ಯಡ್ಡೋಕ್ ಹಾರರ್ ಕಾಮಿಡಿ ಯೂನಿವರ್ಸ್ ಚಿತ್ರದ ಭಾಗ ಇದಾಗಿದ್ದು, ದೀಪಾವಳಿ ಪ್ರಯುಕ್ತ ಅಕ್ಟೋಬರ್ 21ರಂದು ತೆರೆಗೆ ಬರಲಿದೆ.
ಈ ಸುದ್ದಿಯನ್ನೂ ಓದಿ: Kantara Chapter 1 Trailer: ಹೊಸ ದಾಖಲೆ ಬರೆದ ʼಕಾಂತಾರ: ಚಾಪ್ಟರ್ 1ʼ ಟ್ರೈಲರ್; 24 ಗಂಟೆಯಲ್ಲಿ 10.7 ಕೋಟಿ ವೀಕ್ಷಣೆ
ಟ್ರೈಲರ್‌ನಲ್ಲಿ ಏನಿದೆ?
ರಶ್ಮಿಕಾ ಇದುವರೆಗೆ ಹೆಚ್ಚಾಗಿ ರೊಮ್ಯಾಂಟಿಕ್, ಆ್ಯಕ್ಷನ್, ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ʼಛಾವಾʼದ ಮೂಲಕ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ನಟಿಸಿದರು. ಇದೀಗ ಹಾರರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹಾರರ್ ಕಾಮಿಡಿ ಜತೆಗೆ ಪ್ರೇಮಕತೆಯೂ ಇರುವ ಸೂಚನೆ ಟ್ರೈಲರ್‌ನಲ್ಲಿ ಕಂಡುಬಂದಿದೆ. ಟ್ರೈಲರ್ ಉದ್ದಕ್ಕೂ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಅವರ ಪಾತ್ರಕ್ಕೆ ಬಹಳಷ್ಟು ಮಹತ್ವ ನೀಡಲಾಗಿದೆಯಂತೆ. ಸಾವಿರಾರು ವರ್ಷಗಳ ಹಿಂದೆ ನಿಧನ ಹೊಂದಿರುವ ರಶ್ಮಿಕಾ ಮಂದಣ್ಣ (ತಡಕಾ) ಮತ್ತು ನವಾಜುದ್ಧೀನ್ ಸಿದ್ಧಿಖಿ ಪಾತ್ರ ಈಗ ಪ್ರೇತವಾಗಿದ್ದಾರೆ. ಆಯುಷ್ಮಾನ್ ಖುರಾನಾನಿಂದಾಗಿ ಇಬ್ಬರಿಗೂ ಬಿಡುಗಡೆ ಸಿಗುತ್ತದೆ. ಆದರೆ ಆಯುಷ್ಮಾನ್ ಖುರಾನಾ ದೆವ್ವವಾಗಿ ಬದಲಾಗುತ್ತಾರೆ. ಇದು ಕತೆ. ವಿಶೇಷ ಎಂದರೆ ಟ್ರೈಲರ್‌ನಲ್ಲಿ ಬಹಳಷ್ಟು ವಿಷಯಗಳನ್ನು ಹೇಳಲಾಗಿದೆ. ಜತೆಗೆ ಮುಂದೇನು ಆಗಲಿದೆ ಎನ್ನುವ ಕುತೂಹಲವನ್ನೂ ಉಳಿಸಿಕೊಳ್ಳಾಗಿದೆ.
ಹಾಟ್ ಅವತಾರದಲ್ಲಿ ರಶ್ಮಿಕಾ
ವಿಶೇಷ ಎಂದರೆ ʼಥಮ್ಮʼದಲ್ಲಿ ರಶ್ಮಿಕಾ ಮತ್ತೊಮ್ಮೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ʼಅನಿಮಲ್ʼ ಚಿತ್ರದಲ್ಲಿ ರಣಬೀರ್ ಕಪೂರ್ ಜತೆಗೆ ಇಂಟಿಮೇಟ್ ದೃಶ್ಯಗಳಲ್ಲಿ ಹಾಟ್ ಆಗಿ ನಟಿಸಿದ್ದ ರಶ್ಮಿಕಾ ಇದೀಗ ʼಥಮ್ಮʼದಲ್ಲಿ ಮತ್ತೊಮ್ಮೆ ಗ್ಲಾಮರಸ್ ಆಗಿ ಅಭಿನಯಿಸಿದ್ದಾರೆ. ಮರಾಠಿ ಜತೆಗೆ ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿರುವ ಆದಿತ್ಯ ಸರ್ಪೋತ್‌ದಾರ್ ಮತ್ತೊಮ್ಮೆ ಹಾರರ್ ಜಾನರ್‌ನ ಮೊರೆ ಹೋಗಿದ್ದಾರೆ. ಕಳೆದ ವರ್ಷ ತೆರೆಕಂಡ ʼಮುಂಜ್ಯಾʼ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಗಮನ ಸೆಳೆದ ಅವರು ಇದೀಗ ಮತ್ತೊಮ್ಮೆ ಛಾಪು ಬೀರಲು ಮುಂದಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಪರೇಶ್ ರಾವೆಲ್, ಸತ್ಯರಾಜ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ವರುಣ್ ಧವನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೈಕಾ ಅರೋರ, ನೋರಾ ಫತೇಹಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ರಶ್ಮಿಕಾ ಹಿಂದಿಯ ʼಕಾಕ್‌ಟೇಲ್ 2ʼ, ತೆಲುಗಿನ ʼದಿ ಗರ್ಲ್‌ಫ್ರೆಂಡ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.