ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮೊದಲು ನಿನ್ ಅಡ್ರೆಸ್ ಏನು ಅಂತ ತಿಳಿದುಕೋ...ʼ; ಪ್ರಕಾಶ್ ರಾಜ್ ವಿರುದ್ಧ ತೆಲುಗು ನಿರ್ಮಾಪಕ ಏಕಾಏಕಿ ಗರಂ ಆಗಿದ್ದೇಕೆ?

ತೆಲಂಗಾಣ ಚುನಾವಣೆಯಲ್ಲಿ ಜನಸೇನಾ ಪಾರ್ಟಿ ಸ್ಪರ್ಧಿಸಲಿದೆ ಎಂಬ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರ ಹೇಳಿಕೆಯನ್ನು ಲೇವಡಿ ಮಾಡಿದ ನಟ ಪ್ರಕಾಶ್ ರಾಜ್ ವಿರುದ್ಧ ತೆಲುಗು ನಿರ್ಮಾಪಕ ಬಂಡ್ಲ ಗಣೇಶ್ ತೀವ್ರವಾಗಿ ಕಿಡಿಕಾರಿದ್ದಾರೆ. ಪ್ರಕಾಶ್ ರಾಜ್ ಅವರ ರಾಷ್ಟ್ರೀಯತೆ, ನೈತಿಕ ಹಕ್ಕು ಮತ್ತು ಕ್ಯಾರೆಕ್ಟರ್ ಅನ್ನು ನೇರವಾಗಿ ಗಣೇಶ್ ಪ್ರಶ್ನೆ ಮಾಡಿದ್ದಾರೆ.

ತೆಲಂಗಾಣದ ಮುಂಬರುವ ಚುನಾವಣೆಗಳಲ್ಲಿ ಜನಸೇನಾ ಪಾರ್ಟಿ ಸ್ಪರ್ಧಿಸಲಿದೆ ಎಂದು ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಮಾಡಿರುವ ವ್ಯಾಖ್ಯಾನಗಳು ಈಗ ಉಭಯ ರಾಜ್ಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಟಾಂಗ್ ನೀಡಿದ್ದಾರೆ. "ಬನ್ನಿ ದೊರೆಯೇ.. ಆದರೆ ಬರುವ ಮುನ್ನ ಸುಮ್ಮನೆ (ಒಂಟಿಯಾಗಿ) ಬರುತ್ತಿದ್ದೀರಾ? ಮೈತ್ರಿ ಮಾಡಿಕೊಂಡು ಬರುತ್ತಿದ್ದೀರಾ? ಅಥವಾ ಸಿಂಗಲ್ ಆಗಿ ಬರುತ್ತಿದ್ದೀರಾ? ಅದನ್ನು ಹೇಳಿ ಬನ್ನಿ" ಎಂದು ಟ್ವೀಟ್ ಮಾಡಿದ್ದರು.

ತಮಿಳಿಗನಾ? ತೆಲುಗಿನವನಾ? ಕನ್ನಡಿಗನಾ?

ಇದಕ್ಕೀಗ ನಟ, ನಿರ್ಮಾಪಕ ಬಂಡ್ಲ ಗಣೇಶ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಎಲ್ಲದರಲ್ಲೂ ತಲೆಹಾಕಲು ಅಸಲಿಗೆ ನೀನ್ಯಾರೋ? ಅಸಲಿಗೆ ನಿನ್ನ ಊರು ಯಾವುದು?" ಎಂದು ಪ್ರಕಾಶ್ ರಾಜ್ ವಿರುದ್ಧ ಗಣೇಶ್‌ ಕಿಡಿಕಾರಿದ್ದಾರೆ. ಪ್ರಕಾಶ್‌ ರಾಜ್‌ ಟ್ವೀಟ್‌ಗೆ ರಿಪ್ಲೈ ಮಾಡಿರುವ ಗಣೇಶ್‌, "ಪ್ರತಿಯೊಂದು ವಿಷಯದಲ್ಲೂ ಕೈಹಾಕುವ ಬುದ್ಧಿ ನಿನಗೇಕೆ? ಅಸಲಿಗೆ ನೀನ್ಯಾರು? ತಮಿಳಿಗನಾ? ತೆಲುಗಿನವನಾ? ಕನ್ನಡಿಗನಾ? ನಿನ್ನ ಊರು ಯಾವುದು, ನಿನ್ನ ಕಥೆ ಏನು? ಪ್ರತಿಯೊಂದು ಊರಿನಲ್ಲಿ, ಪ್ರತಿಯೊಂದು ವಿಚಾರದಲ್ಲೂ ಮಧ್ಯೆ ಪ್ರವೇಶಿಸಿ ಜಡ್ಜ್‌ಮೆಂಟ್ ಕೊಡಲು ನೀನೇನಾದರೂ ಕಲೆಕ್ಟರಾ ಅಥವಾ ದೇಶದ ಪ್ರಧಾನಿಯಾ" ಎಂದು ಗಣೇಶ್‌ ಬರೆದುಕೊಂಡಿದ್ದಾರೆ.

ಪ್ರಕಾಶ್‌ಗೆ ಗಣೇಶ್‌ ತಿರುಗೇಟು



ಮೊದಲು ನಿನ್ನ ಅಡ್ರೆಸ್ ಏನು ಅಂತ ತಿಳಿದುಕೋ

"ನೀನು ನಿನ್ನ ಬಗ್ಗೆ ತುಂಬಾ ಹೆಚ್ಚಾಗಿಯೇ ಊಹಿಸಿಕೊಳ್ಳುತ್ತಿದ್ದೀಯಾ. ನಿನಗೆ ನೀನೇ ದೊಡ್ಡ ಮೇಧಾವಿ, ದೊಡ್ಡ ಶೂರ ಅಂತ ಸರ್ಟಿಫಿಕೇಟ್ ಕೊಟ್ಟುಕೊಳ್ಳಬಹುದು, ಆದರೆ ಜನ ನೀಡುವ ತೀರ್ಪೇ ನಿಜವಾದ ಸರ್ಟಿಫಿಕೇಟ್. ನಿನ್ನ ಸ್ವಂತ ರಾಜ್ಯದಲ್ಲಿ, ನಿನ್ನ ಸ್ವಂತ ಜನರ ಮಧ್ಯೆ ನಿಂತು ಪ್ರಜಾ ಬೆಂಬಲ ಗಳಿಸಲು ಸಾಧ್ಯವಾಗದ ನೀನು, ರಾಜ್ಯ ಮಟ್ಟದ ನಾಯಕರನ್ನು, ದೇಶ ಮಟ್ಟದ ನಾಯಕರನ್ನು ಹಾಗೂ ಸ್ವತಃ ದೇಶದ ಪ್ರಧಾನ ಮಂತ್ರಿಗಳೂ ಸಹ ಗೌರವಿಸುವಂತಹ ನಾಯಕರನ್ನು ವಿಮರ್ಶಿಸುವ (ಟೀಕಿಸುವ) ಮಟ್ಟದಲ್ಲಿದ್ದೇನೆ ಎಂದು ಅಂದುಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ.

ಸಮಾಜಕ್ಕಾಗಿ ನೀನು ಮಾಡಿದ್ದೇನು?

"ಪ್ರತಿಯೊಂದು ವಿಷಯಕ್ಕೂ ‘ಜಸ್ಟ್ ಆಸ್ಕಿಂಗ್’ ಎಂದು ಹೇಳುವುದು ತುಂಬಾ ಸುಲಭ. ಆದರೆ ಪ್ರಶ್ನಿಸುವ ಮುನ್ನ ನಿನಗೆ ನೀನೇ ಕೆಲವು ಪ್ರಶ್ನೆಗಳನ್ನು ಕೇಳಿಕೋ. ನಿನ್ನ ಪಯಣವೇನು? ನೀನು ಸಾಧಿಸಿದ್ದೇನು? ಸಮಾಜಕ್ಕಾಗಿ ನೀನು ಮಾಡಿದ್ದೇನು? ಜನ ನಿನ್ನ ಬೆನ್ನ ಹಿಂದೆ ಏಕೆ ನಿಲ್ಲಬೇಕು? ಎಂಬ ಪ್ರಶ್ನೆಗಳಿಗೆ ಮೊದಲಿಗೆ ನೀನೇ ಉತ್ತರಿಸಿಕೋ. ಇತರರ ಬಗ್ಗೆ ತೀರ್ಪು ಕೊಡುವುದಕ್ಕಿಂತ ಮುಂಚೆ ಕನ್ನಡಿಯ ಮುಂದೆ ನಿಂತು ನಿನ್ನ ಆತ್ಮಸಾಕ್ಷಿಯನ್ನು ಕೇಳು" ಎಂದು ಗಣೇಶ್‌ ಬರೆದುಕೊಂಡಿದ್ದಾರೆ.

ಬಂಡ್ಲ ಗಣೇಶ ಟ್ವೀಟ್‌



ನಿನ್ನ ಕ್ಯಾರೆಕ್ಟರ್ ಏನು? ನಿನ್ನ ನೈತಿಕ ಹಕ್ಕು ಏನು?

"ನಿನ್ನ ಇತಿಹಾಸವೇನು? ನಿನ್ನ ಕ್ಯಾರೆಕ್ಟರ್ ಏನು? ನಿನ್ನ ನೈತಿಕ ಹಕ್ಕು ಏನು ಎಂದು ಪ್ರಶ್ನಿಸಿಕೋ. ಏಕೆಂದರೆ ಜನ ಕೇವಲ ಮಾತುಗಳನ್ನು ನಂಬುವುದಿಲ್ಲ, ವ್ಯಕ್ತಿತ್ವವನ್ನು ನಂಬುತ್ತಾರೆ. ವಿಮರ್ಶೆಗಳನ್ನಲ್ಲ, ವಿಶ್ವಾಸಾರ್ಹತೆಯನ್ನು ಗೌರವಿಸುತ್ತಾರೆ. ಆ ದಿನ ನಿನಗೆ ಅರ್ಥವಾಗುತ್ತದೆ.. ಎತ್ತರದ ಪರ್ವತಗಳನ್ನು ನೋಡಿ ಕಲ್ಲು ಎಸೆಯುವುದರಿಂದ ಯಾರ ಮಟ್ಟವೂ ಹೆಚ್ಚಾಗುವುದಿಲ್ಲ" ಎಂದು ಗಣೇಶ್‌ ಹೇಳಿದ್ದಾರೆ. ಗಣೇಶ್‌ ಮಾಡಿದ ಈ ಟ್ವೀಟ್‌ಗಳಿಗೆ ಪ್ರಕಾಶ ರಾಜ್‌ ಅವರು ಏನು ರಿಪ್ಲೈ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕು.