‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಆಟದ ರಂಗು ಕಳೆಗಟ್ಟುತ್ತಿದ್ದು, ಅನಿರೀಕ್ಷಿತ ತಿರುವುಗಳು ವೀಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿವೆ. ಇದೀಗ ಮನೆಯೊಳಗೆ ನಡೆದಿರುವ ಒಂದು ಅನಿರೀಕ್ಷಿತ ಎಂಟ್ರಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿದೆ. ಕಳೆದ ಸೀಸನ್ 12ರಲ್ಲಿ ತಮ್ಮ ನೇರ ನಡೆ, ಚುರುಕಾದ ಆಟ ಹಾಗೂ ಭರ್ಜರಿ ಮನರಂಜನೆಯಿಂದ ಕರುನಾಡಿನ ಮನೆ-ಮನ ಗೆದ್ದು ರನ್ನರ್ ಅಪ್ ಪಟ್ಟ ಅಲಂಕರಿಸಿದ್ದ ಚಿನಕುರಳಿಯಂತಹ ರಕ್ಷಿತಾ ಶೆಟ್ಟಿ, ದಿಢೀರನೇ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಪ್ರತ್ಯಕ್ಷವಾಗಿ, ಹೊಸ ಸಂಚಲನ ಮೂಡಿಸಿದ್ದಾರೆ.
ಸೀಸನ್ 12ರಲ್ಲಿ ಹವಾ ಎಬ್ಬಿಸಿದ್ದ ರಕ್ಷಿತಾ
ಕಳೆದ ಸೀಸನ್ನಲ್ಲಿ ಮೊದಲ ದಿನವೇ ಎಲ್ಲರಿಂದ ನಾಮಿನೇಟ್ ಆಗಿ, ಎಲಿಮಿನೇಟ್ ಆಗಿದ್ದರು. ಆನಂತರ ಒಂದು ವಾರದ ನಂತರ ಮರಳಿದ ಅವರು, ಅದ್ಭುತ ಕಮ್ಬ್ಯಾಕ್ ಮಾಡಿ ಫಿನಾಲೆವರೆಗೂ ಸೆಣಸಾಡಿದ್ದರು. ಗಿಲ್ಲಿ ನಟ ವಿನ್ನರ್ ಆದರೆ, ರಕ್ಷಿತಾ ರನ್ನರ್ ಅಪ್ ಆಗಿದ್ದರು.
ಅಂಥ ಪ್ರಬಲ ಆಟಗಾರ್ತಿ ಇದೀಗ ಮತ್ತೆ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದಿಂದ ಒಳಬರುತ್ತಿದ್ದಂತೆ ಸ್ಪರ್ಧಿಗಳಲ್ಲಿ ಆಶ್ಚರ್ಯ ಮತ್ತು ಆತಂಕ ಎರಡೂ ಒಟ್ಟೊಟ್ಟಿಗೇ ಮನೆಮಾಡಿದೆ. ಪ್ರಶಾಂತ್ ಹಾಗೂ ಸೌಂದರ್ಯ ಸೇರಿದಂತೆ ಸಹ-ಸ್ಪರ್ಧಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಆದರೂ ರಕ್ಷಿತಾ ಆಗಮನದ ಹಿಂದಿನ ಅಸಲಿ ಉದ್ದೇಶವೇನು ಎಂಬ ಕುತೂಹಲ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ರಕ್ಷಿತಾ ವೈಲ್ಡ್ ಕಾರ್ಡ್ ಸ್ಪರ್ಧಿಯೇ?
ಪ್ರಸ್ತುತ ಮನೆಯಲ್ಲಿ ನಡೆಯುತ್ತಿರುವ ಮದುವೆ ಟಾಸ್ಕ್ಗೆ ರಕ್ಷಿತಾ ಶೆಟ್ಟಿ ಕೇವಲ ಅತಿಥಿಯಾಗಿ ಆಗಮಿಸಿದ್ದಾರೆಯೇ ಅಥವಾ ಉಳಿದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ವೈಲ್ಡ್ ಕಾರ್ಡ್ ರೂಪದಲ್ಲಿ ಶಾಶ್ವತ ಎಂಟ್ರಿ ಕೊಟ್ಟಿದ್ದಾರೆಯೇ ಎನ್ನುವ ಗುಟ್ಟನ್ನು ಬಿಗ್ ಬಾಸ್ ಇನ್ನೂ ಬಿಟ್ಟುಕೊಟ್ಟಿಲ್ಲ.
ಸೌಂದರ್ಯ ಮದುವೆ ಟಾಸ್ಕ್ಗಾಗಿ ಪ್ರಶಾಂತ್ ಅವರನ್ನು ಪ್ರಶಾಂತಿ ಮಾಡಲಾಗಿದ್ದು, ಅವರ ಮಗಳು ಎಂಬಂತೆ ರಕ್ಷಿತಾ ಅವರನ್ನು ಪರಿಚಯ ಮಾಡಿಕೊಡಲಾಗಿದೆ. ಒಂದು ವೇಳೆ ರಕ್ಷಿತಾ ಪೂರ್ಣ ಪ್ರಮಾಣದ ಸ್ಪರ್ಧಿಯಾಗಿ ಉಳಿದುಕೊಂಡರೆ, ಮನೆಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಉಲ್ಟಾಪಲ್ಟಾ ಆಗೋದರಲ್ಲಿ ಅನುಮಾನವೇ ಇಲ್ಲ.