ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌BBK 13: ಗಂಭೀರ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ‌ʻಬಿಗ್‌ ಬಾಸ್‌ʼ ವೇದಿಕೆಗೆ ಎಂಟ್ರಿ: 2ನೇ ಇನ್ನಿಂಗ್ಸ್‌ ಆರಂಭಿಸಿದ ನಟಿ ಸಂಗೀತಾ ಭಟ್‌!

ಬಿಗ್‌ ಬಾಸ್‌ ಕನ್ನಡ ಸೀಸನ್ 13ರ ಅಖಾಡಕ್ಕೆ ಆರನೇ ಸ್ಪರ್ಧಿಯಾಗಿ ನಟಿ ಸಂಗೀತಾ ಭಟ್ ಪಾದಾರ್ಪಣೆ ಮಾಡಿದ್ದಾರೆ. ಗರ್ಭಕೋಶದಲ್ಲಿದ್ದ ಗಂಭೀರ ಟ್ಯೂಮರ್ ಸಮಸ್ಯೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದಿದ್ದ ನಟಿ ಸಂಗೀತಾ, ಪತಿಯ ಬೆಂಬಲದಿಂದ ಚೇತರಿಸಿಕೊಂಡಿದ್ದಾರೆ. ದೈಹಿಕ ಹಾಗೂ ಮಾನಸಿಕ ನೋವುಗಳನ್ನು ಧೈರ್ಯದಿಂದ ಹಿಮ್ಮೆಟ್ಟಿಸಿ, ತಮ್ಮ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೆಜ್ಜೆಯಿಟ್ಟಿದ್ದಾರೆ.

ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟಿ ಸಂಗೀತಾ ಭಟ್ ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ‘ಬಿಗ್‌ ಬಾಸ್ ಕನ್ನಡ ಸೀಸನ್‌ 13’ರ ಮೂಲಕ ತಮ್ಮ ಬಣ್ಣದ ಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಕಳೆದ ವರ್ಷ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದ ನಟಿ, ಇದೀಗ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಬಿಗ್‌ ಬಾಸ್‌ ಮನೆಗೆ 6ನೇ ಸ್ಪರ್ಧಿಯಾಗಿ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ಅಧಿಕೃತ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸಂಗೀತಾ ಭಟ್‌

ಕಳೆದ ವರ್ಷ ತೆರೆಕಂಡ ‘ಕಮಲ್ ಶ್ರೀದೇವಿ’ ಸಿನಿಮಾದಲ್ಲಿ ನಟಿಸಿದ್ದ ಸಂಗೀತಾ ಭಟ್, ಆ ಬಳಿಕ ಏಕಾಏಕಿ ನಟನೆಯಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಇದಕ್ಕೆ ಕಾರಣವಾಗಿದ್ದು ಅವರ ಗಂಭೀರ ಆರೋಗ್ಯ ಸಮಸ್ಯೆ. ನಟಿ ಸಂಗೀತಾ ಭಟ್ ಅವರ ಗರ್ಭಕೋಶದಲ್ಲಿ ಸುಮಾರು 1.75 ಸೆಂ.ಮೀ. ನಷ್ಟು ಟ್ಯೂಮರ್ ಕಾಣಿಸಿಕೊಂಡಿತ್ತು. ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದರೂ, ಒಪ್ಪಿಕೊಂಡಿದ್ದ ಸಿನಿಮಾ ಕಮಿಟ್‌ಮೆಂಟ್‌ಗಳನ್ನು ಮುಗಿಸಬೇಕಿದ್ದ ಕಾರಣ ಅವರು ಒಂದು ತಿಂಗಳ ಕಾಲಾವಕಾಶ ಪಡೆದಿದ್ದರು. ಆದರೆ, ಆ ವೇಳೆಗೆ ಟ್ಯೂಮರ್ ಗಾತ್ರ ಬರೋಬ್ಬರಿ 2.5 ಸೆಂ.ಮೀ.ಗೆ ಬೆಳೆದಿತ್ತು. ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ, ಆ ಸಮಯದಲ್ಲಿ ತಾವು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಯಾತನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಪತಿಯನ್ನು ಸೇವೆಯನ್ನು ನೆನೆದಿದ್ದ ಸಂಗೀತಾ

ಆ ಕಠಿಣ ಸಂದರ್ಭದಲ್ಲಿ ಪತಿ ಸುದರ್ಶನ್ ತಮಗೆ ನೀಡಿದ ಬೆಂಬಲದ ಬಗ್ಗೆಯೂ ಸಂಗೀತಾ ಭಟ್ ಮನಬಿಚ್ಚಿ ಮಾತನಾಡಿದ್ದರು. "ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ತೀವ್ರ ನೋವು ಅನುಭವಿಸುತ್ತಿದ್ದರೂ ನಾನು ಗಟ್ಟಿಯಾಗಿ ನಿಲ್ಲಲು ಪತಿ ಸುದರ್ಶನ್ ಅವರೇ ಕಾರಣ. ಪ್ರತಿಯೊಂದು ಸ್ಕ್ಯಾನಿಂಗ್ ವೇಳೆ ಹಾಗೂ ನಿದ್ರೆಯಿಲ್ಲದ ರಾತ್ರಿಗಳಲ್ಲಿ ಅವರು ನನ್ನ ಜೊತೆಯೇ ನಿಂತು ಬೆನ್ನೆಲುಬಾಗಿದ್ದರು. ಇಂದು ನಾನು ಚೇತರಿಸಿಕೊಂಡು ಉಸಿರಾಡುತ್ತಿರುವುದಕ್ಕೆ ಅವರೇ ಕಾರಣ" ಎಂದು ಪತಿಯ ಪ್ರೀತಿ-ಕಾಳಜಿಯನ್ನು ನೆನೆದಿದ್ದರು.

BBK 13: 'ಓಸಿಡಿಯಲ್ಲಿ ಪಿಎಚ್‌ಡಿ ಮಾಡಿಬಿಟ್ಟಿದ್ದಾಳೆ..'; 'ಬಿಗ್‌ ಬಾಸ್‌ʼ ಮನೆಗೆ ಬಂದ ಸಂಗೀತಾ ಭಟ್‌ ಬಗ್ಗೆ ಪತಿ ಸುದರ್ಶನ್‌ ಹೀಗಾ ಹೇಳೋದು?

ಬಿಗ್ ಬಾಸ್ ಅಖಾಡಕ್ಕೆ ಎಂಟ್ರಿ

ಇದೀಗ ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗಿರುವ ಸಂಗೀತಾ ಭಟ್, ಹೊಸ ಹುರುಪಿನೊಂದಿಗೆ ಬಿಗ್ ಬಾಸ್ ಅಖಾಡ ಪ್ರವೇಶಿಸಿದ್ದಾರೆ. ನೋವು, ಹಿನ್ನಡೆಗಳನ್ನೆಲ್ಲ ದಾಟಿ ಬಂದಿರುವ ಈ ಪ್ರತಿಭಾವಂತ ನಟಿ, ಬಿಗ್‌ ಬಾಸ್ ಮನೆಯಲ್ಲಿ ಹೇಗೆ ಪೈಪೋಟಿ ನೀಡಲಿದ್ದಾರೆ, ತಮ್ಮ ನೈಜ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನಸ್ಸು ಹೇಗೆ ಗೆಲ್ಲಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.