ಕಿರುತೆರೆ ವೀಕ್ಷಕರ ಬಹುನಿರೀಕ್ಷಿತ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್‌ಗೆ ವೇದಿಕೆ ಸಜ್ಜಾಗಿದೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲೇ ಇಂದು (ಸೆಪ್ಟೆಂಬರ್ 6) ಸಂಜೆ 7 ಗಂಟೆಗೆ ಕಾರ್ಯಕ್ರಮ ಅದ್ಧೂರಿಯಾಗಿ ಆರಂಭವಾಗಲಿದ್ದು, ಈಗಾಗಲೇ ಕಂಟೆಸ್ಟೆಂಟ್‌ಗಳ ಎಂಟ್ರಿ ಬಗ್ಗೆ ಕುತೂಹಲ ಗರಿಗೆದರಿದೆ. ಸೀಸನ್ 5ರ ಮಾದರಿಯಲ್ಲೇ ಈ ಬಾರಿಯೂ ಸಾಮಾನ್ಯ ವರ್ಗದ ಸ್ಪರ್ಧಿಗಳಿಗೆ (ಕಾಮನ್ ಮ್ಯಾನ್ ಕೆಟಗರಿ) ದೊಡ್ಮನೆ ಪ್ರವೇಶಕ್ಕೆ ಸುವರ್ಣಾವಕಾಶ ಕಲ್ಪಿಸಲಾಗಿದ್ದು, ವೀಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮೂವರಲ್ಲ, ನಾಲ್ವರಿಗೆ ಚಾನ್ಸ್
ಆರಂಭದಲ್ಲಿ ಸಾಮಾನ್ಯರ ವಿಭಾಗದಿಂದ ಮೂವರಿಗೆ ಮಾತ್ರ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ, ಇದೀಗ ಒಟ್ಟು ನಾಲ್ವರು ಸಾಮಾನ್ಯ ಸ್ಪರ್ಧಿಗಳಿಗೆ ಬಂಪರ್ ಲಾಟರಿ ಹೊಡೆದಿದೆ. ಕಳೆದ ಎರಡು ವಾರಗಳಿಂದ ನಡೆದ 'ಬಿಗ್ ಬಾಸ್ ಅಗ್ನಿಪರೀಕ್ಷೆ'ಯಲ್ಲಿ ಭಾಗವಹಿಸಿದ್ದ 60 ಮಂದಿ ಸಾಮಾನ್ಯರ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಟಾಪ್ 10 ಮಂದಿ ಗ್ರ್ಯಾಂಡ್ ಓಪನಿಂಗ್ ವೇದಿಕೆ ಹಂಚಿಕೊಂಡಿದ್ದರು. ಅಂತಿಮವಾಗಿ ಜನರ ವೋಟಿಂಗ್ ಆಧಾರದ ಮೇಲೆ ಲಿಖಿತ್ ಗೊಂಧಿ, ಕಿರಣ್ ಶಾಸ್ತ್ರಿ, 'ಮಾಡ್ರನ್ ಮಹಾಕವಿ' ಎಂದೇ ಖ್ಯಾತರಾದ ಮಂಜು ಹಾಗೂ ಧನುಷ್ ಮಂಜುನಾಥ್ ಅವರು ಜನಮನ್ನಣೆ ಗಳಿಸಿ ಅಧಿಕೃತವಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ.
ಓಂ ಪ್ರಕಾಶ್ ರಾವ್ ಎಂಟ್ರಿ ಫಿಕ್ಸ್!
ಈ ಬಾರಿಯ ಸೀಸನ್‌ನಲ್ಲಿ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯರ ಸಮಾಗಮ ಭರ್ಜರಿ ಮನರಂಜನೆಯ ಭರವಸೆ ಮೂಡಿಸಿದೆ. ಸೆಲೆಬ್ರಿಟಿ ವಿಭಾಗದಲ್ಲಿ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್, ನಟಿಯರಾದ ಸಂಗೀತಾ ಭಟ್, ಕಾವ್ಯ ಗೌಡ, ಪ್ರಥಮಾ ಪ್ರಸಾದ್, ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್, ರೇಚಲ್ ಡೇವಿಡ್ ಹಾಗೂ ವೈಷ್ಣವಿ ಕೌಂಡಿನ್ಯ ಮನೆಯೊಳಗೆ ಪ್ರವೇಶಿಸಿದ್ದಾರೆ. ಇವರೊಂದಿಗೆ ನಟರಾದ ಗಗನ್ ಚಿನ್ನಪ್ಪ, 'ಲವ್ ಮಾಕ್‌ಟೇಲ್ 3' ಖ್ಯಾತಿಯ ಜಗ್ಗಾ ಮಮ್ಮಿ, ತಾಂಡವ್ ರಾಮ್, ಯಶಸ್ ಕೃಷ್ಣ, ಡ್ರ್ಯಾಗನ್ ಮಂಜು ಮತ್ತು ಅವಿನಾಶ್ ಷಠಮರ್ಷಣ್ ಕೂಡ ಈ ಬಾರಿಯ ಬಿಗ್ ಬಾಸ್ ಜರ್ನಿ ಆರಂಭಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಒಟ್ಟು ಎಷ್ಟು ಮಂದಿ ಸ್ಪರ್ಧಿಗಳು
ನಾಲ್ವರು ಸಾಮಾನ್ಯ ಸ್ಪರ್ಧಿಗಳು ಸೇರಿದಂತೆ ಒಟ್ಟು 18 ಮಂದಿ ಕಂಟೆಸ್ಟೆಂಟ್‌ಗಳು ಮನೆಯೊಳಗೆ ಲಾಕ್ ಆಗಲಿದ್ದು, ಸೀಸನ್ 13ರ ಕದನ ಕಣ ರಂಗೇರಿದೆ. ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಜನಸಾಮಾನ್ಯರ ನಡುವಿನ ಈ ಸಂಘರ್ಷ, ಸ್ನೇಹ ಮತ್ತು ತಂತ್ರಗಾರಿಕೆಯ ಆಟ ಇಂದಿನಿಂದ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲು ಸಜ್ಜಾಗಿದೆ. ಈ 16 ಮಂದಿ ಇರಲಿದ್ದಾರಾ? ಇವರ ಜೊತೆಗೆ ಮತ್ತೆ ಹೊಸದಾಗಿ ಬೇರೆ ಯಾರಾದರೂ ಮನೆಗೆ ಎಂಟ್ರಿ ನೀಡಲಿದ್ದಾರಾ ಎಂಬುದು ಇಂದೇ ಗೊತ್ತಾಗಲಿದೆ.