ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಾನು ಗೆಲ್ಲೋದಕ್ಕೆ ಹೋದವನಲ್ಲ, ರಂಜಿಸಲು ಹೋದವನು..ʼ; ಮತ್ತೆ ‌ʻಬಿಗ್‌ ಬಾಸ್‌ʼ ಮನೆಗೆ ವಾಪಸ್‌ ಹೋಗ್ತಾರಾ ಓಂ ಪ್ರಕಾಶ್‌ ರಾವ್?

Bigg Boss Kannada 13: ಬಿಗ್‌ ಬಾಸ್‌ ಶೋನಿಂದ ಅನಿವಾರ್ಯವಾಗಿ ಹೊರಬಂದ ನಿರ್ದೇಶಕ ಓಂ ಪ್ರಕಾಶ್ ರಾವ್, ಆಹಾರದ ಸಮಸ್ಯೆ ಮತ್ತು ಅನಾರೋಗ್ಯವೇ ತಮ್ಮ ನಿರ್ಗಮನಕ್ಕೆ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಟ್ರೋಫಿ ಗೆಲ್ಲುವ ಆಸೆ ಇರಲಿಲ್ಲ, ಕೇವಲ ರಂಜನೆ ತಮ್ಮ ಗುರಿಯಾಗಿತ್ತು ಎಂದಿರುವ ಅವರು, ಆರೋಗ್ಯ ಸುಧಾರಿಸಿದರೆ ಮರುಪ್ರವೇಶಿಸುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ʻಬಿಗ್ ಬಾಸ್’ ಮನೆಯಿಂದ ಅನಿವಾರ್ಯವಾಗಿ ಹೊರಬಂದಿರುವ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್, ದೊಡ್ಮನೆಯ ತಮ್ಮ ಸಂಕ್ಷಿಪ್ತ ಪಯಣ, ಅಲ್ಲಿ ಎದುರಾದ ಸಮಸ್ಯೆಗಳು ಹಾಗೂ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮನಬಿಚ್ಚಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. "ನಾನು ಬಿಗ್ ಬಾಸ್ ಮನೆಗೆ ವಿನ್ನರ್ ಅಥವಾ ರನ್ನರ್ ಆಗಬೇಕು ಎಂಬ ಹಠ ಹೊತ್ತು ಹೋದವನಲ್ಲ; ಕೇವಲ ಜನರನ್ನು ರಂಜಿಸಬೇಕು ಎಂಬ ಉದ್ದೇಶದಿಂದ ತೆರಳಿದ್ದೆ" ಎಂದು ಸ್ಪಷ್ಟಪಡಿಸಿರುವ ಅವರು, ಮನೆಯೊಳಗಿನ ಊಟದ ವ್ಯವಸ್ಥೆಯಿಂದ ಉಂಟಾದ ಅನಾರೋಗ್ಯವೇ ತಾವು ಹೊರಬರಲು ಮುಖ್ಯ ಕಾರಣವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಗೆಲುವಿಗಾಗಿ ಕಿತ್ತಾಟ ನಡೆಸುವುದಿಲ್ಲ

ದೊಡ್ಮನೆಯಲ್ಲಿನ ಪೈಪೋಟಿ ಕುರಿತು ಮಾತನಾಡಿದ ಅವರು, "ವಾರಕ್ಕೆ ಇಂತಿಷ್ಟು ಸಂಭಾವನೆ ಎಂದು ಏನು ಮಾತನಾಡಿಕೊಂಡಿದ್ದೆವೋ ಅದು ನನಗೆ ಸಾಕಿತ್ತು. ನನ್ನ ಜನ್ಮದಲ್ಲೂ ನಾನು ಕೇವಲ ಗೆಲುವಿಗಾಗಿ ಕಿತ್ತಾಟ ನಡೆಸುವುದಿಲ್ಲ. ಅಲ್ಲಿರುವ ಉಳಿದ 15 ಸ್ಪರ್ಧಿಗಳು ಆಟ ಗೆಲ್ಲುವ ಹಂಬಲದಿಂದಲೇ ಬಂದಿದ್ದಾರೆ. ಅವರ ಆಕಾಂಕ್ಷೆಯ ಜೊತೆಗೆ ನನ್ನದು ಘರ್ಷಣೆಯಾಗಬಾರದು. ಗೆಲುವಿಗಾಗಿ ಅವರು ಯಾರ ಜತೆಗಾದರೂ ವಾದ-ವಿವಾದಕ್ಕಿಳಿಯಲಿ, ಆದರೆ ನಾನು ಆ ಜಾಗದಲ್ಲಿ ನಿಂತು ಜಗಳವಾಡುವ ವ್ಯಕ್ತಿಯಲ್ಲ. ಬೇರೆಯವರ ಗೆಲುವಿನ ಹಿಂದೆ ಬೆಂಬಲವಾಗಿರಲು ನಾನು ಸಿದ್ಧನಿದ್ದೆ. ಆದರೆ, ಮನೆಯಲ್ಲಿ ಎದುರಾದ ಊಟದ ಕೊರತೆಯು ನನಗೆ ತೀವ್ರ ಬೇಸರ ತರಿಸಿತು" ಎಂದಿದ್ದಾರೆ.

Bigg Boss Kannada 13: ‘ಬಿಗ್‌ ಬಾಸ್‌ ಸೀಸನ್‌ 13’ ಎಂಟ್ರಿಗೂ ಮುನ್ನ ನಟಿ ಆಸಿಯಾ ಫಿರ್ದೋಸ್ ಸೀರಿಯಲ್‌ ತಂಡದ ಕುರಿತು ಹೇಳಿದ್ದೇನು?

ನಾನೇ ಮೊದಲು ಬಲಿಯಾಗಬೇಕಾಯಿತು

ಮನೆಯ ವಿನ್ಯಾಸ ಮತ್ತು ಒಟ್ಟಾರೆ ವ್ಯವಸ್ಥೆ ಅತ್ಯುತ್ತಮವಾಗಿದ್ದರೂ, ಆಹಾರದ ವಿಚಾರದಲ್ಲಿ ಆದ ಸಮಸ್ಯೆ ತಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು ಎಂದು ಅವರು ವಿವರಿಸಿದ್ದಾರೆ. "ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಸಮಯಕ್ಕೆ ಸರಿಯಾದ ಊಟ. ಅದರಲ್ಲಿ ವ್ಯತ್ಯಾಸವಾದಾಗ ತೊಂದರೆ ಕಟ್ಟಿಟ್ಟ ಬುತ್ತಿ. ಆ ಆಹಾರದ ಸಮಸ್ಯೆಗೆ ನಾನೇ ಮೊದಲು ಬಲಿಯಾಗಬೇಕಾಯಿತು. ಆರೋಗ್ಯದ ಸಮಸ್ಯೆ ತೀವ್ರಗೊಂಡಿದ್ದರಿಂದ ಅನಿವಾರ್ಯವಾಗಿ ಹೊರಬರಬೇಕಾಯಿತು. ಮನೆಯಲ್ಲೇ ಉಳಿದುಕೊಂಡಿದ್ದರೆ ಇನ್ನಷ್ಟು ದಿನ ರಂಜಿಸಬಹುದಿತ್ತು, ಆ ಅವಕಾಶ ಕೈತಪ್ಪಿದ್ದಕ್ಕೆ ನನಗೂ ತೀವ್ರ ಬೇಸರವಿದೆ" ಎಂದು ತಿಳಿಸಿದ್ದಾರೆ.

ದಯವಿಟ್ಟು ಕ್ಷಮೆಯಿರಲಿ ಎಂದ ಓಂ

ಇದೇ ವೇಳೆ, ಬಿಗ್ ಬಾಸ್ ಮನೆಗೆ ಮರುಪ್ರವೇಶಿಸುವ ಸಾಧ್ಯತೆಯ ಸುಳಿವನ್ನು ನೀಡಿರುವ ಅವರು, "ಒಂದು 15 ದಿನಗಳು ಕಳೆಯಲಿ, ಆ ಬಳಿಕ ನಿಮ್ಮ ಆರೋಗ್ಯದ ಸ್ಥಿತಿಗತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದು ವಾಹಿನಿಯವರು ಹೇಳಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ. "ಕನ್ನಡ ಚಿತ್ರರಂಗ ಹಾಗೂ ಸಮಸ್ತ ಕಲಾಭಿಮಾನಿ ದೇವರುಗಳಲ್ಲಿ ನನ್ನದೊಂದು ವಿನಂತಿ. ಬಿಗ್ ಬಾಸ್ ಮನೆಯಲ್ಲಿದ್ದು ಹೆಚ್ಚು ದಿನ ನಿಮ್ಮನ್ನು ರಂಜಿಸಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ. ಮುಂದಿನ ದಿನಗಳಲ್ಲಿ ಇಂತಹ ಮತ್ತೊಂದು ಅವಕಾಶ ಒದಗಿಬಂದರೆ ಖಂಡಿತ ನಾನು ಮುಂಚೂಣಿಯಲ್ಲಿ ನಿಂತು ರಂಜಿಸುತ್ತೇನೆ. ತಪ್ಪಾಗಿದ್ದರೆ ಕ್ಷಮಿಸಿ, ನಿಮ್ಮನ್ನೆಲ್ಲ ಮತ್ತೆ ಭೇಟಿಯಾಗಲು ನಾನು ಎದುರುನೋಡುತ್ತಿದ್ದೇನೆ" ಎಂದು ಓಂ ಪ್ರಕಾಶ್ ರಾವ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.