ಬೆಂಗಳೂರು: ಸೌರವ್ ಲೋಕೇಶ್… ಹೀಗಂದ್ರೆ ಎಷ್ಟು ಜನಕ್ಕೆ ಗೊತ್ತಾಗ್ಲಿಕ್ಕಿಲ್ಲ.. ಭಜರಂಗಿ ಲೋಕಿ ಅಂದ್ರೆ ಎಲ್ಲರಿಗೂ ಗೊತ್ತು. ಭಜರಂಗಿ ಸಿನಿಮಾ ಮೂಲಕ ಯಾರಪ್ಪ ಈ ನಟ ಅಂತ ಇಡೀ ಇಂಡಸ್ಟ್ರೀ ಒಮ್ಮೆಲೆ ತಿರುಗಿ ನೋಡುವಂತೆ ಮಾಡಿದ ಕಲಾವಿದ. ತನ್ನ ಅಮೋಘ ಅಭಿನಯದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಸೌರವ್ ಲೋಕೇಶ್ ಭಜರಂಗಿ ಸಿನಿಮಾ ನಂತರ ಭಜರಂಗಿ ಲೋಕಿ ಎಂದೇ ಫೇಮಸ್ ಆದ್ರು. ನಂತರ ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ನಟಿಸಿದ ಲೋಕಿ ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದ್ದಾರೆ. ಇದೇ ವಾರ ಪ್ರಪಂಚದಾದ್ಯಂತ ತೆರೆಗೆ ಬರ್ತಿರೋ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಅಭಿನಯದ ಓಜಿ ಸಿನಿಮಾದ (OG Movie) ಪ್ರಮುಖ ಪಾತ್ರದಲ್ಲಿ ಭಜರಂಗಿ ಲೋಕಿ ಕೂಡ ಅಭಿನಯಿಸಿದ್ದಾರೆ. ಖಡಕ್ ಹಾಗೂ ಸ್ಟೈಲಿಷ್ ವಿಲನ್ ಆಗಿ ಲೋಕಿ ಪವನ್ ಕಲ್ಯಾಣ್ ಎದುರು ಕಾಣಿಸಿಕೊಳ್ತಿರೋದು ವಿಶೇಷ.
ಸದ್ಯ ಬಿಡುಗಡೆ ಆಗಿರೋ ಟ್ರೇಲರ್‌ನಲ್ಲಿ ಭಜರಂಗಿ ಲೋಕಿ ಲುಕ್ ನೋಡಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಆಂಧ್ರ ಪ್ರದೇಶ ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಜತೆ ಸ್ಕ್ರೀನ್ ಶೇರ್ ಮಾಡಿರೋದಕ್ಕೆ ಲೋಕಿ ಸಂತಸ ವ್ಯಕ್ತಪಡಿಸುತ್ತಾರೆ. ಅದಷ್ಟೇ ಅಲ್ಲದೆ ʼಓಜಿʼ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರ ವಹಿಸಿದ್ದು, ಇಮ್ರಾನ್ ಹಶ್ಮಿ ಅವರ ಜತೆಯಲ್ಲಿಯೂ ಲೋಕಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ʼಓಜಿʼ 90ರ ದಶಕದ ಮುಂಬೈ ಮಾಫಿಯಾ ಹಿನ್ನೆಲೆಯ ಕಥಾ ಹಂದರ ಹೊಂದಿದೆ. ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ ನಟ ಇಮ್ರಾನ್ ಹಷ್ಮಿ, ಸೌರವ್ ಲೋಕೇಶ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
ಥಮನ್ ಎಸ್. ಅವರು ಸಂಗೀತ ನೀಡಿದ್ದಾರೆ. ಸೆಪ್ಟೆಂಬರ್ 25ರಂದು ‘ಓಜಿʼ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ. ಸುಜೀತ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಿವಿವಿ ದಾನಯ್ಯ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Dasara Holiday Fashion 2025: ದಸರಾ ರಜೆಯ ಮೋಜಿಗೂ ಬಂತು ಹಾಲಿಡೇ ಫ್ಯಾಷನ್ ವೇರ್ಸ್