ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅದ್ಧೂರಿಯಾಗಿ ನಡೆದ ನಟಿ ರಾಧಾ ಭಗವತಿ - ನಟ ರಾಣವ್ ಗೌಡ ಮದುವೆ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಅಮೃತಧಾರೆʼ ಜೋಡಿ

ರಾಧಾ ಭಗವತಿ ಮತ್ತು ರಾಣವ್‌ ಗೌಡ ಜೋಡಿಯು ಇಂದು (ನ.26) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ʻಅಮೃತಧಾರೆʼ ಧಾರಾವಾಹಿಯ ಮಲ್ಲಿ ಮತ್ತು ಜೈದೇವ್ ಪಾತ್ರಗಳ ಮೂಲಕ ಮನೆಮಾತಾಗಿದ್ದಈ ಜೋಡಿ ಈಗ ನಿಜಜೀವನದಲ್ಲೂ ಒಂದಾಗಿದೆ.

ಕಿರುತೆರೆಯ ಜನಪ್ರಿಯ ಜೋಡಿ ರಾಧಾ ಭಗವತಿ ಮತ್ತು ರಾಣವ್ ಗೌಡ ಇಂದು (ನ.26) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೀ ಕನ್ನಡ ವಾಹಿನಿಯ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಜೈದೇವ್ ಪಾತ್ರಗಳ ಮೂಲಕ ಮನೆಮಾತಾಗಿದ್ದ ಈ ಕಲಾವಿದರು, ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಇಂದು ಬೆಳಗ್ಗೆ 8.45ರಿಂದ 9.45ರ ನಡುವಿನ ಶುಭ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಮಾಂಗಲ್ಯ ಧಾರಣೆ ನೆರವೇರಿದ್ದು, ನಿನ್ನೆ (ನ.25) ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವೂ ಅದ್ಧೂರಿಯಾಗಿ ಜರುಗಿತ್ತು.

ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಇವರಿಬ್ಬರು ನಿಜ ಜೀವನದಲ್ಲೂ ಒಂದಾಗಿರುವುದು ಅಭಿಮಾನಿಗಳಿಗೆ ಅಪಾರ ಸಂತಸ ತಂದಿದ್ದು, ಕುಟುಂಬದ ಸದಸ್ಯರು, ಬಂಧು-ಮಿತ್ರರು ಹಾಗೂ ಕಿರುತೆರೆಯ ಆಪ್ತರು ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಸೀರಿಯಲ್‌ ಸೆಟ್‌ನಲ್ಲೇ ಲವ್ವಾಗಿತ್ತು

‘ಅಮೃತಧಾರೆ’ ಧಾರಾವಾಹಿಯ ಸೆಟ್‌ನಿಂದ ಶುರುವಾದ ಇವರ ಪ್ರೇಮಕಥೆ ಇಂದು ಮದುವೆಯ ರೂಪ ಪಡೆದುಕೊಂಡಿರುವುದು ವಿಶೇಷ. ಧಾರಾವಾಹಿಯಲ್ಲಿ ಮಲ್ಲಿ ಮತ್ತು ಜೈದೇವ್ ಪಾತ್ರಗಳನ್ನು ನಿರ್ವಹಿಸುವಾಗ ರಾಧಾ ಭಗವತಿ ಹಾಗೂ ರಾಣವ್ ಗೌಡ ನಡುವೆ ಆತ್ಮೀಯತೆ ಬೆಳೆದು, ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವಿನ ಸ್ನೇಹ ಗಾಢವಾಯಿತು. ರಾಣವ್ ಅವರ ಸರಳತೆ ಮತ್ತು ಒಳ್ಳೆಯ ಗುಣಗಳನ್ನು ಮೆಚ್ಚಿದ ರಾಧಾ ಅವರೇ ಮೊದಲು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಬಳಿಕ ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಕುಟುಂಬದವರ ಒಪ್ಪಿಗೆಯೊಂದಿಗೆ ಜೀವನದಲ್ಲಿ ಜೊತೆಯಾಗಿ ಸಾಗುವ ನಿರ್ಧಾರ ಕೈಗೊಂಡರು.

Raanav Radha Bhagavathi: ‘ಅಮೃತಧಾರೆ’ ಖ್ಯಾತಿಯ ರಾಣವ್‌ - ರಾಧಾ ಭಗವತಿ ಅದ್ಧೂರಿ ರಿಸೆಪ್ಷನ್

ರಾಮಾಚಾರಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ

ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ನಟಿ ರಾಧಾ ಭಗವತಿ ಅವರಿಗೆ ಕಿರುತೆರೆಯಲ್ಲಿ ಮೊದಲ ಬ್ರೇಕ್ ನೀಡಿದ್ದು ‘ರಾಮಾಚಾರಿ’ ಧಾರಾವಾಹಿ. ಇದರಲ್ಲಿ ನಾಯಕನ ತಂಗಿ ಶ್ರುತಿ ಪಾತ್ರದಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ನಂತರ ‘ಅಮೃತಧಾರೆ’ ಧಾರಾವಾಹಿಯಲ್ಲಿ ನಿರ್ವಹಿಸಿದ ಮುಗ್ಧ ಹಳ್ಳಿ ಹುಡುಗಿ 'ಮಲ್ಲಿ' ಪಾತ್ರ ರಾಧಾ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವಾಯಿತು. ಮಲ್ಲಿಯಾಗಿ ಅವರು ತೋರಿದ ಸಹಜ ಅಭಿನಯಕ್ಕೆ ಕನ್ನಡಿಗರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಬಳಿಕ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯಲ್ಲಿ ನಾಯಕಿ ಭಾರ್ಗವಿ ಪಾತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದ ರಾಧಾ, ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಸಕ್ರಿಯರಾಗಿದ್ದಾರೆ.

ವಿಲನ್‌ ಪಾತ್ರಗಳಿಗೆ ಫೇಮಸ್‌ ಆಗಿರುವ ರಾಣವ್

ಮತ್ತೊಂದೆಡೆ, ನಟ ರಾಣವ್ ಗೌಡ ತಮ್ಮ ಪರಿಶ್ರಮದಿಂದ ನಟನಾ ಕ್ಷೇತ್ರದಲ್ಲಿ ಹಂತ ಹಂತವಾಗಿ ಗುರುತಿಸಿಕೊಂಡರು. ಉದಯ ಟಿವಿಯ ‘ಅರಮನೆ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ ರಾಣವ್, ಆರಂಭದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಬಳಿಕ ‘ಶ್ರೀಕಂಠ’, ‘ಉಪೇಂದ್ರ ಮತ್ತೆ ಬಾ’, ‘ಡ್ಯಾಡ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ‘ಜೀವನದಿ’, ‘ರಾಜಕುಮಾರಿ’, ‘ಗಟ್ಟಿಮೇಳ’ ಧಾರಾವಾಹಿಗಳಲ್ಲಿ ವಿಶೇಷವಾಗಿ ನೆಗೆಟಿವ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಇವರಿಗೆ ದೊಡ್ಡ ತಿರುವು ನೀಡಿದ್ದು ‘ಅಮೃತಧಾರೆ’ಯ ಜೈದೇವ್ ಅಲಿಯಾಸ್ ಜೆಡಿ ಪಾತ್ರ. ಇದರೊಂದಿಗೆ ಜೀ ಪವರ್ ವಾಹಿನಿಯ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲಿ ನಾಯಕನಾಗಿಯೂ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ತಾರಾ ಜೋಡಿಗೆ ಸಾಮಾಜಿಕ ಜಾಲತಾಣಗಳಲ್ಲೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.