ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hello 123 Movie: ʼಹಲೋ 123' ಮೂಲಕ ಸ್ಯಾಂಡಲ್‌ವುಡ್‌ಗೆ ಭುವನ್‌ ಪೊನ್ನಣ್ಣ ರೀ ಎಂಟ್ರಿ; ಯೋಗರಾಜ್‌ ಭಟ್‌ ಸಾಥ್‌

Bhuvann Ponnannaa: ಹಲವು ವರ್ಷಗಳ ಬ್ರೇಕ್‌ ಬಳಿಕ ಇದೀಗ ಭುವನ್‌ ಪೊನ್ನಣ್ಣ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಪ್ರತಿಭಾವಂತ ನಿರ್ದೇಶಕ ಯೋಗರಾಜ್‌ ಭಟ್‌ ಅವರ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ʼಹಲೋ 123ʼ ಎನ್ನುವ ಕ್ಯಾಚಿ ಟೈಟಲ್‌ ಹೊಂದಿರುವ ಈ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

ʼಹಲೋ 123': ಭುವನ್‌-ಯೋಗರಾಜ್‌ ಭಟ್‌ ಚಿತ್ರಕ್ಕೆ ಚಾಲನೆ

-

Ramesh B Ramesh B Sep 4, 2025 6:20 PM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಭರವಸೆಯ ನಟರಲ್ಲಿ ಒಬ್ಬರಾದ ಭುವನ್‌ ಪೊನ್ನಣ್ಣ (Bhuvann Ponnannaa) ಮತ್ತು ಪ್ರತಿಭಾವಂತ ನಿರ್ದೇಶಕ ಯೋಗರಾಜ್‌ ಭಟ್‌ (Yogaraj Bhat) ತೆರೆಮೇಲೆ ಮೊದಲ ಬಾರಿ ಒಂದಾಗಲಿದ್ದಾರೆ. ಇವರೊಂದಿಗೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಕೂಡ ಕೈಜೋಡಿಸಿದ್ದು, ವಿಜಯ್‌-ಅಮೃತಾ ದಂಪತಿ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಇದಕ್ಕೆ ʼಹಲೋ 123ʼ (Hello 123 Movie) ಎಂದು ಹೆಸರಿಡಲಾಗಿದೆ. ವಿಶೇಷ ಎಂದರೆ ಭುವನ್‌ ಪೊನ್ನಣ್ಣ-ಹರ್ಷಿಕಾ ಪೂಣಚ್ಚ ದಂಪತಿ ಪುತ್ರಿ ತ್ರಿದೇವಿ ಕೈಯಿಂದಲೇ ಚಾಲನೆ ಕೊಡಿಸಿದ್ದು ವಿಶೇಷ. ಅದಾದ ಚಿತ್ರತಂಡ ಈ ಬಗ್ಗೆ ಸುದ್ದಿಗೋಷ್ಠಿ ಆಯೋಜಿಸಿ ಹೆಚ್ಚಿನ ಮಾಹಿತಿ ಹಂಚಿಕೊಂಡಿತು.

ಯೋಗರಾಜ್‌ ಭಟ್‌ ಮಾತನಾಡಿ, ʼʼಚಿತ್ರದ ಶೂಟಿಂಗ್‌ ಅತಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಸಂಗೀತ ಪ್ರಧಾನವಾಗಿರುವ ಈ ಚಿತ್ರಕ್ಕೆ ಮೊದಲು ʼಬೇವರ್ಸಿ ಹೃದಯʼ ಎನ್ನುವ ಟೈಟಲ್‌ ಇಟ್ಟಿದ್ದೆ. ಬಳಿಕ ಅದೇಕೊ ಸರಿ ಬರದ ಹಿನ್ನೆಲೆಯಲ್ಲಿ ʼಹಲೋ 123ʼ ಎಂದು ಬದಲಾಯಿಸಿದೆ. ಅಬ್ಬೇಪಾರಿ ಸಂಗೀತಗಾರನೊಬ್ಬನ ಕಥೆಯನ್ನು ಇದರಲ್ಲಿ ಹೇಳ ಹೊರಟಿದ್ದೇವೆ. ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಬೆಂಗಳೂರು, ಮೈಸೂರು, ಚಿತ್ರದುರ್ಗ ಮತ್ತು ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆʼʼ ಎಂದರು.



ʼʼಉದ್ಯಮ-ಮಾಧ್ಯಮದ ಅಂತರವನ್ನು ನಿರ್ಮಾಪಕ ವಿಜಯ್‌ ಕಡಿಮೆ ಮಾಡಲಿದ್ದಾರೆ ಎನ್ನುವ ಬಗ್ಗೆ ನನಗೆ ಭರವಸೆ ಇದೆ. ಭುವನ್‌-ಹರ್ಷಿಕಾ ದಂಪತಿಯ ಮಗುವೇ ಈ ಚಿತ್ರದ ನಿರ್ದೇಶಕಿʼʼ ಎಂದು ಅವರು ತಿಳಿಸಿದರು.

ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಾತನಾಡಿ, ʼಹಲೋ 123ʼ ಟೈಟಲ್‌ ಇಡಬೇಕು ಎಂದು ಹಲವು ವರ್ಷಗಳಿಂದ ಅಂದುಕೊಂಡಿದ್ದೆವು. ಈ ಮೂಲಕ ನಾವು ಕರ್ನಾಟಕದ ಜನತೆಯನ್ನು ನಮ್ಮ ಬಳಿಗೆ ಆಹ್ವಾನಿಸುತ್ತಿದ್ದೇವೆ. ʼಹಲೋ 123ʼ ಸದ್ದು ಎಲ್ಲರಿಗೂ ಕೇಳುತ್ತೆ ಎನ್ನುವ ನಂಬಿಕೆಯಿಂದ ಚಿತ್ರ ಆರಂಭಿಸುತ್ತಿದ್ದೇವೆ. ನಿಮ್ಮ ಬೆಂಬಲ, ಆಶೀರ್ವಾದ ಇರಲಿʼʼ ಎಂದು ಮನವಿ ಮಾಡಿದರು.



ನಿರ್ಮಾಪಕ ವಿಜಯ್‌ ಮಾಹಿತಿ ನೀಡಿ, ʼʼಯೋಗರಾಜ್‌ ಭಟ್‌ ಮತ್ತು ಹರಿಕೃಷ್ಣ ಅವರಂತಹ ಪ್ರತಿಭಾವಂತರು ಸಿಕ್ಕಿದ್ದು ನಮ್ಮ ಅದೃಷ್ಟ. ಚಿತ್ರೋದ್ಯಮದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಕರ್ನಾಟಕದಲ್ಲಿ ದುಡಿದ್ದಿದ್ದೇನೆ. ಇಲ್ಲಿಗೇನಾದರೂ ಕೊಡಬೇಕು ಎನ್ನುವ ನಿರ್ಧಾರದಿಂದ ಪತ್ನಿಯೊಂದಿಗೆ ಚರ್ಚಿಸಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಕಥೆ ಕೇಳದೆಯೇ ಒಪ್ಪಿಕೊಂಡೆʼʼ ಎಂದು ಹೇಳಿದರು.



ಭುವನ್‌ ಹೇಳಿದ್ದೇನು?

ನಟ ಭುವನ್‌ ಮಾತನಾಡಿ, ʼʼರಾಂಧವʼ ಚಿತ್ರದ ಬಳಿಕ ನಾನು ಸುಮಾರು 5-6 ವರ್ಷಗಳ ಬ್ರೇಕ್‌ ತೆಗೆದುಕೊಂಡೆ. ಕುಟುಂಬ, ಕೆಲವೊಂದು ವೈಯಕ್ತಿಕ ವಿಚಾರಗಳಿಗೆ ಗಮನ ಹರಿಸಲು ನಾನು ಬ್ರೇಕ್‌ ಪಡೆದುಕೊಂಡಿದ್ದೆ. ಒಂದೊಳ್ಳೆ ಸಿನಿಮಾ ಮಾಡಬೇಕು ಎನ್ನುವ ಆಸೆ ಇದ್ದೇ ಇತ್ತು. ಹೀಗಾಗಿ ಇದೀಗ ನಿಮ್ಮ ಮುಂದೆ ಕೂತಿದ್ದೇವೆ. ಕೆಲವರ ಬಗ್ಗೆ ನಾನು ಇಲ್ಲಿ ಮಾತನಾಡ್ಲೇ ಬೇಕು. ಇಡೀ ನನ್ನ ಪಯಣದಲ್ಲಿ ಕೈ ಹಿಡಿದು ಪ್ರೀತಿಯಿಂದ ನನ್ನೊಂದಿಗೆ ಇದ್ದಿದ್ದಕ್ಕೆ ಧನ್ಯವಾದʼʼ ಎಂದು ಪತ್ನಿ ಹರ್ಷಿಕಾಗೆ ಕೃತಜ್ಞತೆ ಅರ್ಪಿಸಿದರು.

ಮುಂದುವರಿದು, ʼʼಮಗಳು ತ್ರಿದೇವಿ ಹುಟ್ಟಿದ ಮೇಲೆ ಜೀವನದಲ್ಲಿ ಬಹಳಷ್ಟು ಉತ್ತಮ ಬೆಳವಣಿಗೆ ನಡೆದಿದೆ. ಹೀಗಾಗಿ ಆಕೆಗೂ ಧನ್ಯವಾದ ಅರ್ಪಿಸುತ್ತಿದ್ದೇನೆ. ನಮ್ಮನ್ನು ಭೇಟಿಯಾಗಿ ಒಡನಾಟ ನಡೆಸಿದ ಬಳಿಕ ವಿಜಯ್‌ ಮತ್ತು ಅಮೃತಾ ದಂಪತಿ ಭುವನ್‌ ನೀವೊಬ್ಬ ಸೂಪರ್‌ ಸ್ಟಾರ್‌ ಆಗಬೇಕು ಎಂದು ಹೇಳಿದರು. ನಿಮ್ಮ ಜತೆ ಸದಾ ಇರ್ತೇವೆ ಎಂದು ಉತ್ತೇಜನ ನೀಡಿದರು. ಹೀಗಾಗಿ ಈ ಚಿತ್ರ ಸೆಟ್ಟೇರುತ್ತಿದೆʼʼ ಎಂದರು.

ಈ ಸುದ್ದಿಯನ್ನೂ ಓದಿ: Cult Movie: ಝೈದ್ ಖಾನ್ ಅಭಿನಯದ ʼಕಲ್ಟ್ʼ ಚಿತ್ರದ ʼಅಯ್ಯೊ ಶಿವನೇʼ ಹಾಡು ಸೆ.10ಕ್ಕೆ ರಿಲೀಸ್‌

ಕನಸು ನನಸಾಗುತ್ತಿದೆ

ತಮ್ಮ ಕನಸಿಗೆ ಬಗ್ಗೆ ಹೇಳಿದ ಭುವನ್‌, ʼʼಹಿರಿಯ ನಟರೆಲ್ಲ ಪುಟ್ಟಣ ಕಣಗಾಲ್‌ ಅವರ ಚಿತ್ರದಲ್ಲಿ ನಟಿಸಬೇಕು ಎನ್ನುವ ಕನಸು ಕಾಣುತ್ತಿದ್ದುದಾಗಿ ಹೇಳುತ್ತಿದ್ದರು. ಒಂದು ಸಲವಾದರೂ ಅವರನ್ನು ಭೇಟಿಯಾಗಲು ಕಾಯುತ್ತಿದ್ದರು. ಅದೇ ರೀತಿ ನಮ್ಮ ಜನರೇಷನ್‌ನ ಕಲಾವಿದರು ಒಂದು ಸಲವಾದರೂ ಯೋಗರಾಜ್‌ ಭಟ್‌ ಅವರ ಸಿನಿಮಾದಲ್ಲಿ ನಟಿಸಬೇಕು ಎಂದು ಕನಸು ಕಾಣುತ್ತಿದ್ದಾರೆ. ನಾನು ಕೂಡ ಸಿನಿಮಾರಂಗಕ್ಕೆ ಬಂದಾಗಲೇ ಯೋಗರಾಜ್‌ ಭಟ್‌ ಜತೆ ಕೆಲಸ ಮಾಡಬೇಕು ಅಂದುಕೊಂಡಿದ್ದೆ. ಇವತ್ತುಎಲ್ಲರ ಆಶೀರ್ವಾದದಿಂದ ಆ ಕನಸು ನನಸಾಗುತ್ತಿದೆʼʼ ಎಂದು ವಿವರಿಸಿದರು.

ʼʼನಾನೊಮ್ಮೆ ಪೆರುವಲ್ಲಿದ್ದೆ. ಆಗ ಒಬ್ರು ಪರಿಚಯವಾಗಿ ನಿಮ್ಮ ಜೀವನದಲ್ಲಿ ಇದುವರೆಗೆ ಆಗಿರದಂತಹ ಅನುಭವವನ್ನು ನಿಮಗೆ ಮಾಡಿಸುತ್ತೇನೆ. ನೀವು ನಮ್ಮ ಜತೆ ಬೇಟೆಗೆ ಬನ್ನಿ ಅಂದರು. ಅವರ ಜತೆ ಅಮೇಜಾನ್‌ ಕಾಡಿಗೆ ಹೋದೆ. ಅಲ್ಲಿ ಮರದ ಮೇಲಿರುವ ಕಪ್ಪೆಯನ್ನು ತೋರಿಸಿದರು. ಬಳಿಕ ಅದನು ಹಿಡಿದು ತಂದು ಸಮೀಪದಲ್ಲೇ ಇರುವ ಮನೆಗೆ ನನ್ನನ್ನೂ ಕರೆದುಕೊಂಡು ಹೋದರು. ಅದನ್ನು ಕಟ್ಟಿ ಹಾಕಿ ಅದರ ಬೆನ್ನಿಗೆ ಚುಚ್ಚಿ ರಸವೊಂದನ್ನು ಹೊರಗೆ ತೆಗೆದರು. ಬಳಿಕ ಅದನ್ನು ನನ್ನ ಶರೀರಕ್ಕೆ ಹಚ್ಚಿದರು. 2 ನಿಮಿಷ ಆದ ಬಳಿಕ ನಾನೇ ಕಪ್ಪೆಯಾಗಿ ಬದಲಾಗುತ್ತಿದ್ದೇನೆ ಎನಿಸತೊಡಗಿತು. ಬಳಿಕ ನನಗೆ ಗಾಢ ನಿದ್ದೆ ಆವರಿಸಿತು. ಈ ವೇಳೆ ನಾನೇ ನನ್ನ ಜತೆ ಮಾತನಾಡಿದೆ. ಸುಮಾರು 18 ಗಂಟೆಗಳ ಬಳಿಕ ಎಚ್ಚರವಾಯ್ತು. ಈ ಅನುಭವವನ್ನು ನಾನು ಯೋಗರಾಜ್‌ ಭಟ್‌ ಅವರಲ್ಲಿ ಹೇಳಿದ್ದೆ. ಅದಕ್ಕೆ ಅವರು ಇಂತಹದ್ದೊಂದು ಕಥೆ ಬರೆಯುತ್ತಿದ್ದೆ ಎಂದರು. ಹೀಗೆ ಈ ಬಗ್ಗೆ ಚರ್ಚೆ ನಡೆಸಿದೆವು. ಬಳಿಕ ವಿಜಯ್‌ ಮತ್ತು ಯೋಗರಾಜ್‌ ಭಟ್‌ ಭೇಟಿಯಾದರು. ಇಬ್ಬರೂ ಚಿತ್ರ ತಯಾರಿಗೆ ಮುಂದೆ ಬಂದರು. ಹೀಗೆ ʼಹಲೋ 123ʼ ಚಿತ್ರ ಹುಟ್ಟಿಕೊಂಡಿತು. ಕನ್ನಡದ ಮಟ್ಟಿಗೆ ಇದು ವಿಭಿನ್ನ, ಅದ್ಭುತ ಚಿತ್ರವಾಗಲಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆ ಇರಲಿʼʼ ಎಂದರು.