ರೀಲ್ಸ್ ಮಾಡುವುದಕ್ಕಾಗಿ ನವಿಲು ಗರಿಗಳನ್ನು ಬಳಸಿ, ಡ್ಯಾನ್ಸ್ ಮಾಡಿದ್ದ ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ನಟಿ ನಿವೇದಿತಾ ಗೌಡ ಅವರ ಮೇಲೆ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ವಿಡಿಯೋ ಮೂಲಕ ಕ್ಷಮೆ ಕೇಳಿರುವ ಕಿಶನ್ ಮತ್ತು ನಿವೇದಿತಾ, "ಈ ರೀತಿ ಬಳಸುವುದು ಕಾನೂನುಬಾಹಿರ ಅಥವಾ ಅಪರಾಧ ಎಂಬುದು ನಮಗೆ ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.
ಅಪರಾಧ ಎಂಬುದು ನಮಗೆ ತಿಳಿದಿರಲಿಲ್ಲ
"ಇತ್ತೀಚೆಗೆ ನಾನು ಮತ್ತು ಕಿಶನ್ ಒಂದು ವಿಡಿಯೋ ಮಾಡಿದ್ದೆವು. ಅದು ಸಾಕಷ್ಟು ಜನರ ಗಮನ ಸೆಳೆದು ವೈರಲ್ ಕೂಡ ಆಗಿತ್ತು. ಅದರಲ್ಲಿ ನಾವು ನವಿಲು ಗರಿಗಳನ್ನು ಬಳಸಿದ್ದೆವು. ಆ ಸಮಯದಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಅಥವಾ ಗರಿಗಳನ್ನು ಈ ರೀತಿ ಬಳಸುವುದು ಕಾನೂನುಬಾಹಿರ ಅಥವಾ ಅಪರಾಧ ಎಂಬುದು ನಮಗೆ ತಿಳಿದಿರಲಿಲ್ಲ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2 ಹಾಗೂ ಕ್ಲಾಸ್ 44 ರ ಅಡಿಯಲ್ಲಿ ಅಪರಾಧವಾಗುತ್ತದೆ" ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ
"ನವಿಲು ನಮ್ಮ ರಾಷ್ಟ್ರಪಕ್ಷಿಯಾಗಿದ್ದು, ಅದಕ್ಕೆ 1972ರ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವಿಶೇಷ ರಕ್ಷಣೆ ಇದೆ. ಜೊತೆಗೆ ಕರ್ನಾಟಕ ಅರಣ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲೂ ಇದಕ್ಕೆ ರಕ್ಷಣೆ ನೀಡಲಾಗಿದೆ. ವನ್ಯಜೀವಿಗಳನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದು ನಮಗೆ ಈಗ ಅರಿವಾಗಿದೆ" ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ʻನಮ್ಮಿಂದ ತಪ್ಪಾಗಿದೆ, ಸಾರಿʼಎಂದ ನಿವೇದಿತಾ ಗೌಡ
ನಾವು ತುಂಬು ಹೃದಯದಿಂದ ಕ್ಷಮೆಯಾಚಿಸುತ್ತೇವೆ
"ವನ್ಯಜೀವಿಗಳಿಗೆ ಸೇರಿದ ಯಾವುದೇ ವಸ್ತುಗಳನ್ನು ಅಥವಾ ಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಮತ್ತು ಅವುಗಳನ್ನು ಪ್ರದರ್ಶಿಸುವುದು ಕೂಡ ಅಪರಾಧವೇ ಆಗಿದೆ. ನಮ್ಮಿಂದ ತಿಳಿಯದೇ ಈ ತಪ್ಪು ನಡೆದಿದ್ದು, ಈ ವಿಡಿಯೋ ಮಾಡಿರುವುದಕ್ಕಾಗಿ ನಾವು ತುಂಬು ಹೃದಯದಿಂದ ಕ್ಷಮೆಯಾಚಿಸುತ್ತೇವೆ. ಕಾನೂನಿನ ಪ್ರಕಾರ ನಿಮ್ಮಲ್ಲಿ ಯಾರೂ ಕೂಡ ಇಂತಹ ವಸ್ತುಗಳನ್ನು ಬಳಸಿ ವಿಡಿಯೋಗಳನ್ನು ಮಾಡಬೇಡಿ ಎಂದು ವಿನಂತಿಸುತ್ತೇವೆ. ಪ್ರಸ್ತುತ ನಡೆಯುತ್ತಿರುವ ಇಲಾಖೆಯ ತನಿಖೆಗೆ ನಾವು ಸಂಪೂರ್ಣವಾಗಿ ಸಹಕರಿಸಲಿದ್ದೇವೆ" ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಕಿಶನ್ ಹೇಳಿದ್ದೇನು?
"ನವಿಲು ಡ್ಯಾನ್ಸ್ ಬಗ್ಗೆ ನಿನ್ನೆಯಿಂದ ಎಲ್ಲಾ ಕಡೆ ಭಾರಿ ಚರ್ಚೆ ಆಗ್ತಾ ಇದೆ. ನಾನು ಚಿಕ್ಕ ವಯಸ್ಸಿನಿಂದ ಇದನ್ನ ಫ್ಯಾನ್ಸಿ ಡ್ರೆಸ್‌ಗಳಲ್ಲಿ ನೋಡಿದ್ದೀನಿ ಅಥವಾ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಎಲ್ಲಾ ಕಡೆ ನೋಡಿದ್ದೀನಿ. ದರ್ಗಾದಲ್ಲಿ ಆಶೀರ್ವಾದ ಮಾಡಲು ಬಳಸುವುದನ್ನು ನೋಡಿದ್ದೀನಿ ಅಥವಾ ಅಂಗಡಿಗಳಲ್ಲಿ ಧೂಪ ಹಾಕುವಾಗ ಅವರ ಕೈಯಲ್ಲಿ ಕೂಡ ಇಟ್ಕೊಂಡಿರ್ತಾರೆ. ಹಾಗಾಗಿ ನಾನು ಸಾಮಾನ್ಯವಾಗಿ ಇದನ್ನ ನನ್ನ ಸುತ್ತಮುತ್ತಲೂ ನೋಡ್ಕೊಂಡೇ ಬಂದಿದ್ದೀನಿ" ಎಂದು ಕಿಶನ್ ಹೇಳಿದ್ದಾರೆ.
ನಾವು ಬಾಡಿಗೆ ತೆಗೆದುಕೊಂಡು ಬಂದಿದ್ದೆವು
"ನಾನು ಕೂಡ ಈ ಕಾನ್ಸೆಪ್ಟ್ ಅನ್ನು ಮಾಡಿದಾಗ, ಇದನ್ನ ಬಾಡಿಗೆಗೆ ಪಡೆಯೋಣ ಅನ್ಕೊಂಡೆ. ಯಾಕಂದ್ರೆ ಸಾಮಾನ್ಯವಾಗಿ ಮನೆಯಲ್ಲಿ ಯಾರದಾದರೂ ಮಕ್ಕಳಿದ್ದರೆ ಅಥವಾ ಎಲ್ಲೇ ಆದ್ರೂ ನೀವೆಲ್ಲರೂ ಅದನ್ನ ಬಾಡಿಗೆಗೆ ತಗೊಳ್ತೀರಾ. ನಾವು ಕೂಡ ಅದನ್ನೇ ಮೊದಲು ಮಾಡಿದ್ದು. ಒಂದು ಬಾಡಿಗೆ ನೀಡುವ ಜಾಗಕ್ಕೆ ಹೋಗಿ, 'ಇದನ್ನ ನಮ್ಮ ಸಹಯೋಗಕ್ಕೆ ಕೊಡ್ತೀರಾ?' ಅಂತ ಕೇಳಿದ್ವಿ. ಯಾಕಂದ್ರೆ ನಾವು ಯಾವುದನ್ನೂ ವೈಯಕ್ತಿಕವಾಗಿ ತಗೊಂಡು ಬರಲ್ಲ. ಅದು ಯಾವಾಗಲೂ ಬೇರೆ ಬೇರೆ ತಂಡಗಳ ಜೊತೆ ಸೇರಿ ಮಾಡುವಂತಹ ಒಂದು ವಿಡಿಯೋ ಆಗಿರುತ್ತೆ. ಇದರಲ್ಲಿ ಕೇವಲ ಒಂದು ತಂಡ ಇರಲ್ಲ, ಬಣ್ಣ ಹಚ್ಚುವ ತಂಡ, ನವಿಲು ಗರಿಯ ತಂಡ, ಚಿತ್ರೀಕರಣದ ತಂಡ, ಲೊಕೇಷನ್ ತಂಡ ಅಥವಾ ಆಭರಣಗಳ ತಂಡ ಹೀಗೆ ಹಲವಾರು ತಂಡಗಳು ಜೊತೆಯಾಗಿ ಮಾಡುವಂತಹ ವಿಡಿಯೋ ಅದು" ಎಂದು ಕಿಶನ್ ಹೇಳಿದ್ದಾರೆ.
ನಾನು ಮಾಡಿದ್ದು ಸರಿ ಅಂತ ಹೇಳ್ತಿಲ್ಲ
"ನಿಮ್ಮ ಹಾಗೆಯೇ ನಾನು ಕೂಡ ಅದನ್ನ ಬಾಡಿಗೆಗೆ ಪಡೆದಿದ್ದು. ಹಾಗಂತ ನಾನು ಮಾಡಿದ್ದು ಸರಿ ಅಂತ ನಾನು ಹೇಳ್ತಾ ಇಲ್ಲ. ಯಾಕಂದ್ರೆ 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ (Wildlife Act) ಪ್ರಕಾರ, ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವುದು ತುಂಬಾನೇ ಮುಖ್ಯವಾಗುತ್ತದೆ. ನಿನ್ನೆ ನಮಗೆ ಈ ನೋಟಿಸ್ ಬಂದಾಗ, ಕಚೇರಿಯಲ್ಲಿದ್ದ ಇಡೀ ತಂಡ ನಮಗೆ ತುಂಬಾ ಸಹಾಯ ಮಾಡಿತು ಮತ್ತು ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿತು. ಮನೋಜ್ ಸರ್ ಅವರಿಗೆ ತುಂಬಾ ಧನ್ಯವಾದಗಳು, ಇದರ ಗಂಭೀರ ಪರಿಣಾಮ ಏನಾಗಬಹುದು ಎಂಬುದನ್ನು ನಮಗೆ ವಿವರವಾಗಿ ತಿಳಿಸಿಕೊಟ್ಟಿತು" ಎಂದು ಕಿಶನ್ ಹೇಳಿದ್ದಾರೆ.
ತಪ್ಪು ಕಾರಣಗಳಿಗಾಗಿ ಗುರುತಿಸಿಕೊಳ್ಳಲು ನನಗಿಷ್ಟವಿಲ್ಲ
"ನಾನೊಬ್ಬ ಇನ್‌ಫ್ಲುಯೆನ್ಸರ್ ಆಗಿ ತಪ್ಪಾದ ಸಂದೇಶ ಕೊಡುವಂತಹ ಯಾವುದೇ ವಿಷಯವನ್ನು ಹಾಕಲು ಇಷ್ಟಪಡುವುದಿಲ್ಲ. ಹಾಗೆಯೇ ಯಾವುದೇ ತಪ್ಪು ಕಾರಣಗಳಿಗಾಗಿ ಗುರುತಿಸಿಕೊಳ್ಳಲು ನನಗಿಷ್ಟ ಇಲ್ಲ. ಅದಕ್ಕಾಗಿಯೇ ನಾವು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದೇವೆ. ಯಾಕಂದ್ರೆ, ನವಿಲು ಗರಿಗಳನ್ನು ಬಾಡಿಗೆಗೆ ಪಡೆಯುವುದು ಕೂಡ ಒಂದು ಅಪರಾಧ ಅಂತ ನಮಗೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಬಗ್ಗೆ ನಮಗೆ ಮೊದಲೇ ತಿಳಿದಿರಲಿಲ್ಲ. ಆದ್ದರಿಂದ ನೀವು ಕೂಡ ನಿಮ್ಮ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ಸಿಗಾಗಲಿ ಅಥವಾ ಎಲ್ಲೇ ಬಳಸಿದ್ರೂ ತುಂಬಾ ಹುಷಾರಾಗಿರಿ" ಎಂದು ಕಿಶನ್ ಹೇಳಿದ್ದಾರೆ.
ನವಿಲು ಗರಿ ಡ್ಯಾನ್ಸ್ ವಿವಾದ: 'ಬಿಗ್ ಬಾಸ್' ಕಿಶನ್ ರಿಯಾಕ್ಷನ್
ನಿಮ್ಮೆಲ್ಲರಲ್ಲೂ ನಾನು ಕ್ಷಮೆ ಕೇಳುತ್ತೇನೆ
"ನಮ್ಮ ಪ್ರಾಣಿ-ಪಕ್ಷಿಗಳನ್ನು ಮತ್ತು ಕಾಡನ್ನು ಉಳಿಸಲು ನಾವೆಲ್ಲರೂ ಪ್ರಯತ್ನಿಸೋಣ. ನವಿಲು ಗರಿಗಳನ್ನು ಯಾವುದೇ ರೀತಿಯಲ್ಲೂ ದುರುಪಯೋಗಪಡಿಸಿಕೊಳ್ಳಬೇಡಿ. ಯಾರೂ ಕೂಡ ನವಿಲು ಗರಿಗಳನ್ನು ಬಾಡಿಗೆಗೆ ಪಡೆಯಬೇಡಿ ಮತ್ತು ದುರುಪಯೋಗಪಡಿಸಿಕೊಳ್ಳಬೇಡಿ. ನಿನ್ನೆಯಿಂದ ನಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ತುಂಬಾ ಧನ್ಯವಾದಗಳು. ನಿಮ್ಮೆಲ್ಲರಲ್ಲೂ ನಾನು ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಇಂತಹ ತಪ್ಪು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮರುಕಳಿಸುವುದಿಲ್ಲ" ಎಂದು ಕಿಶನ್ ತಿಳಿಸಿದ್ದಾರೆ.