ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ಅವರ ಜನ್ಮದಿನದ ಪ್ರಯುಕ್ತ, ಅವರು ನಟಿಸಿರುವ 'ಕೇಕೆ' ಸಿನಿಮಾದ 'ಗುಂಟೂರು ಅಮ್ಮಾಯಿ' ಎಂಬ ಐಟಂ ಗೀತೆಯನ್ನು ರಿಲೀಸ್ ಮಾಡಲಾಗಿದೆ. ಈ ಗೀತೆಯಲ್ಲಿ ಸೋನು ಅವರು ಆಕರ್ಷಕವಾಗಿ ಹೆಜ್ಜೆ ಹಾಕಿದ್ದು, ಹಾಡಿನ ಬಿಡುಗಡೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ನೆನೆದಿದ್ದಾರೆ.
ದರ್ಶನ್ ಸರ್ ಇದ್ದಿದ್ದರೆ ಕಾಲಿಗೆ ಬಿದ್ದಾದರೂ ಕರೆತರುತ್ತಿದ್ದೆ
ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಟ ದರ್ಶನ್ ಅವರನ್ನು ನೆನೆದ ಸೋನು ಶ್ರೀನಿವಾಸ್ ಗೌಡ, "ನನಗೆ ದರ್ಶನ್ ಸರ್ ಎಂದರೆ ಅಪಾರ ಗೌರವ ಮತ್ತು ಇಷ್ಟ. ಒಂದು ವೇಳೆ ಅವರು ಹೊರಗಿದ್ದಿದ್ದರೆ, ಕೈ-ಕಾಲು ಹಿಡಿದಾದರೂ ನಮ್ಮ ಚಿತ್ರದ ಈ ಹಾಡಿನ ಬಿಡುಗಡೆ ಸಮಾರಂಭಕ್ಕೆ ಅವರನ್ನು ಆಹ್ವಾನಿಸಿ ಕರೆತರುತ್ತಿದ್ದೆ. ದರ್ಶನ್ ಅವರನ್ನು ತುಂಬಾ ಜನ ಯೂಸ್ ಮಾಡಿಕೊಂಡರು. ಆದರೆ ಕಷ್ಟ ಇದ್ದಾಗ ಯಾರೂ ಬರಲಿಲ್ಲ" ಎಂದು ಹೇಳಿದ್ದಾರೆ.
ಈ ಬಾರಿಯ ಜನ್ಮದಿನ ಅತ್ಯಂತ ವಿಶೇಷ
"ನನ್ನ ಈ ವರ್ಷದ ಹುಟ್ಟುಹಬ್ಬದ ಆಚರಣೆ ತುಂಬಾ ವಿಶಿಷ್ಟವಾಗಿದೆ. ಚಿತ್ರರಂಗದ ಪ್ರಮುಖ ನಿರ್ಮಾಪಕರು ಹಾಗೂ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಮತ್ತು ಇದೇ ದಿನ ನನ್ನ ನಟನೆಯ ಹಾಡು ಬಿಡುಗಡೆಯಾಗಿರುವುದು ಸಂತಸ ತಂದಿದೆ. ಈ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಹಾಡಿನಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳ ಮಿಶ್ರಣವಿದೆ. ನನಗೆ ತೆಲುಗು ಭಾಷೆ ಬರುವುದರಿಂದ ಮೊದಲ ಬಾರಿ ಕೇಳಿದಾಗಲೇ ಈ ಗೀತೆ ಬಹಳ ಇಷ್ಟವಾಯಿತು. ಹಾಡಿಗೆ ಒಪ್ಪಿಗೆ ನೀಡಿದ ಮರುದಿನವೇ ರಿಹರ್ಸಲ್ ನಡೆಸಿ, ಅದರ ಮರುದಿನವೇ ಚಿತ್ರೀಕರಣ ಮುಗಿಸಿದೆವು. ಕೊನೆಗೂ ನಿಮ್ಮ ಮುಂದೆ 'ಗುಂಟೂರು ಅಮ್ಮಾಯಿ'ಯಾಗಿ ಬರಲು ಹೆಮ್ಮೆಯಾಗುತ್ತಿದೆ" ಎಂದು ಸೋನು ಹೇಳಿದ್ದಾರೆ.
ಉತ್ತಮ ಅವಕಾಶಗಳನ್ನು ನಿರಾಕರಿಸುವುದಿಲ್ಲ
"ಕಳೆದ ನಾಲ್ಕು ವರ್ಷಗಳಿಂದ ನಾನು ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್‌ಗಷ್ಟೇ ಸೀಮಿತವಾಗಿದ್ದೆ. ಬೇರೆ ಯಾವುದೇ ಸಿನಿಮಾಗಳನ್ನು ಮಾಡಿರಲಿಲ್ಲ. ಈಗ ಈ ಹಾಡಿನ ಮೂಲಕ ಹೊಸ ಆರಂಭ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬರುವ ಯಾವುದೇ ರೀತಿಯ ಉತ್ತಮ ಅವಕಾಶಗಳನ್ನು ನಾನು ನಿರಾಕರಿಸುವುದಿಲ್ಲ. ಪಾತ್ರ ಎಂತಹುದೇ ಇರಲಿ, ನನ್ನ ಕೈಲಾದಷ್ಟು ಅದಕ್ಕೆ ಜೀವ ತುಂಬಲು ಶ್ರಮಿಸುತ್ತೇನೆ" ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಟೀಕೆ ಮಾಡುವವರಿಗೆ ನನ್ನದೇ ಶೈಲಿಯಲ್ಲಿ ಉತ್ತರಿಸುತ್ತೇನೆ
ಜಾಲತಾಣಗಳಲ್ಲಿ ಬರುವ ಟೀಕೆಗಳ ಕುರಿತು ಮಾತನಾಡಿದ ಅವರು, "ನನ್ನ ವಿರುದ್ಧ ಬರುವ ನಕಾರಾತ್ಮಕ ಕಾಮೆಂಟ್‌ಗಳನ್ನು ನಾನು ನಿರ್ಲಕ್ಷಿಸುವುದಿಲ್ಲ. ಬದಲಿಗೆ ಅವುಗಳನ್ನು ಎಲ್ಲರಿಗೂ ಕಾಣುವಂತೆ 'ಪಿನ್' ಮಾಡಿ ಇಡುತ್ತೇನೆ. ಅವರ ಮನಸ್ಸಿನಲ್ಲಿ ಎಂತಹ ಕೆಟ್ಟ ಆಲೋಚನೆಗಳಿವೆ ಎಂಬುದನ್ನು ಜಗತ್ತು ನೋಡಲಿ ಎಂಬುದು ನನ್ನ ಆಶಯ. ಆ ನಂತರವೇ ನಾನು ಅವರಿಗೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇನೆ. ಜಗತ್ತಿನಲ್ಲಿ ಮನುಷ್ಯ ಯಾವಾಗಲೂ ಕೇವಲ ಒಳ್ಳೆಯವನಂತೆ ನಟಿಸಿದರೆ ಅದು ನಾಟಕೀಯ ಎನಿಸುತ್ತದೆ. ಜೀವನ ಅಂದಮೇಲೆ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ಮುಖಗಳು ಇರಬೇಕು" ಎಂದಿದ್ದಾರೆ.
ಐಟಂ ಹಾಡಿನ ಬಗ್ಗೆ ಸೋನು ಮಾತು
"ಕೇವಲ ಐಟಂ ಹಾಡಿನಲ್ಲಿ ನಟಿಸಿದ ತಕ್ಷಣ ನೆಗೆಟಿವ್ ಆಗುತ್ತಾರೆ ಅಥವಾ ನಾಯಕಿಯಾದರೆ ಮಾತ್ರ ಪಾಸಿಟಿವ್ ಆಗುತ್ತಾರೆ ಎಂದುಕೊಳ್ಳುವುದು ಮೂರ್ಖತನ. ಚಿತ್ರರಂಗದಲ್ಲಿ ಕೇವಲ ಒಂದು ಹಾಡಿಗಾಗಿಯೇ ಇಡೀ ಸಿನಿಮಾ ನೋಡುವ ಪ್ರೇಕ್ಷಕರು ಇದ್ದಾರೆ" ಎಂದು ಹೇಳಿದ್ದಾರೆ.