ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪಲ್ಲವಿ ಅವರ ಹಠಾತ್ ನಿಧನವು ಅವರ ಆಪ್ತರು ಹಾಗೂ ಹಿತೈಷಿಗಳಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ವಿಶೇಷವಾಗಿ, ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಮಲ್ಲಮ್ಮ ಅವರ ಬದುಕಿಗೆ ಆಸರೆಯಾಗಿ ನಿಂತು, ಅವರಿಗೆ ದೊಡ್ಡ ವೇದಿಕೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಲ್ಲವಿ ಅವರ ಅಗಲಿಕೆ ಮಲ್ಲಮ್ಮ ಅವರಿಗೆ ಭರಿಸಲಾಗದ ದುಃಖ ತಂದಿದೆ. ಬದುಕಿನ ಹೊಸ ತಿರುವಿಗೆ ಕಾರಣಕರ್ತರಾಗಿದ್ದ ಪಲ್ಲವಿ ಅವರನ್ನು ಕಳೆದುಕೊಂಡು ಮಲ್ಲಮ್ಮ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ವಿಧಿ ಅವರನ್ನು ನಮ್ಮಿಂದ ಕಸಿದುಕೊಂಡಿತು
ಪಲ್ಲವಿ ಅವರ ಕೊನೆಯ ದಿನಗಳನ್ನು ಸ್ಮರಿಸಿಕೊಂಡ ಮಲ್ಲಮ್ಮ, "ಬುಧವಾರ ಕಾರ್ಯಕ್ರಮವೊಂದಿತ್ತು. 'ಮಲ್ಲಮ್ಮ, ನೀನು ಹೋಗು ಸರ್ ಇರ್ತಾರೆ, ಸರ್ ನೋಡ್ಕೊಳ್ತಾರೆ. ನೀನು ಕಾರ್ಯಕ್ರಮ ಮುಗಿಸಿಕೊಂಡು ಬಾ' ಎಂದು ಮೇಡಂ ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು. ಅದೇ ನಾನು ಅವರೊಂದಿಗೆ ಮಾತನಾಡಿದ ಕೊನೆಯ ಮಾತು. ನಾನು ಕಾರ್ಯಕ್ರಮ ಮುಗಿಸಿಕೊಂಡು ಬರುವಷ್ಟರಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಜ್ವರ ಬಂದ ತಕ್ಷಣವೇ ಯಾವುದೇ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಾನು ಆಸ್ಪತ್ರೆಯಲ್ಲಿ ಎರಡು ದಿನ ಮೇಡಂ ಜೊತೆಯಲ್ಲೇ ಇದ್ದೆ, ಆದರೆ ವಿಧಿ ಅವರನ್ನು ನಮ್ಮಿಂದ ಕಸಿದುಕೊಂಡಿತು" ಎಂದು ಭಾವುಕರಾಗಿ ನುಡಿದಿದ್ದಾರೆ.
Mallamma: ಬಿಗ್ ಬಾಸ್ ಮನೆಗೆ ಮಲ್ಲಮ್ಮ ಹೋಗಲು ಕಾರಣವಾಗಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ ಇನ್ನಿಲ್ಲ
ಕನಸುಗಳನ್ನು ಅರ್ಧಕ್ಕೇ ಬಿಟ್ಟು ಹೋಗಿಬಿಟ್ಟರು
ಪಲ್ಲವಿ ಅವರ ಸರಳತೆ ಮತ್ತು ಕನಸುಗಳನ್ನು ಹಂಚಿಕೊಂಡ ಮಲ್ಲಮ್ಮ, "ಅವರಿಗೆ ಕಿಂಚಿತ್ತೂ ಗರ್ವವಿರಲಿಲ್ಲ, ಚಿಕ್ಕ ಮಗುವಿನಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ನಮ್ಮ ಸುರಪುರದ ಊರಿಗೂ ಬಂದು ಎಲ್ಲರ ಪ್ರೀತಿ ಗಳಿಸಿದ್ದರು. ಸದಾ 'ಹೊಸ ಮನೆ ಶುರುವಾಗಲಿ ಮಲ್ಲಮ್ಮ, ನಾವಿಬ್ಬರು ಸೇರಿ ಹೊಸ ಹೊಸ ವಿಡಿಯೋಗಳನ್ನು ಮಾಡೋಣ, ಹಾಗೆ ಮಾಡೋಣ ಹೀಗೆ ಮಾಡೋಣ' ಎಂದು ಮುಗ್ಧವಾಗಿ ಕನಸು ಕಾಣುತ್ತಿದ್ದರು. ಆದರೆ ಈಗ ಆ ಎಲ್ಲ ಕನಸುಗಳನ್ನು ಅರ್ಧಕ್ಕೇ ಬಿಟ್ಟು ಹೋಗಿಬಿಟ್ಟರು" ಎಂದು ಕಣ್ಣೀರು ಹಾಕಿದ್ದಾರೆ.
ನಾನು ಎಲ್ಲೋ ಮೂಲೆಯಲ್ಲಿದ್ದವಳು
"ಪಲ್ಲವಿ ಮೇಡಂಗೆ ನನ್ನ ಕೈಯಿಂದ ರೊಟ್ಟಿ ಮಾಡಿಕೊಟ್ಟರೆ ಅಪಾರ ಪ್ರೀತಿ. ನಾವೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ಇತ್ತೀಚೆಗಷ್ಟೇ ಅವರ ಮಗ ಮತ್ತು ಮಗಳಿಗೆ ಕೆಲಸ ಸಿಕ್ಕಾಗ ಮಗುವಿನಂತೆ ಸಂಭ್ರಮಿಸಿದ್ದರು. ಅವರದ್ದು ಚಿನ್ನದಂತಹ ಮನಸ್ಸು. ನಾನು ಎಲ್ಲೋ ಮೂಲೆಯಲ್ಲಿದ್ದವಳು, ನನ್ನನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸಿದ್ದು ಮೇಡಂ, ಮನೋಜ್ ಸರ್ ಹಾಗೂ ರಾಜೇಶ್ ಸರ್. ನಾನು ಬಿಗ್ ಬಾಸ್‌ಗೆ ಹೋದಾಗಲೂ ಬೆನ್ನೆಲುಬಾಗಿ ನಿಂತು ಬೆಳೆಸಿದರು. ತಮ್ಮ ಜೊತೆಗಿದ್ದವರನ್ನು ಪ್ರೀತಿಯಿಂದ ಮೇಲೆತ್ತುವ ಅವರ ದೊಡ್ಡ ಗುಣವನ್ನು ಮಾತಿನಲ್ಲಿ ಹೇಳಿ ತೀರಿಸಲು ಸಾಧ್ಯವಿಲ್ಲ" ಎಂದು ಮಲ್ಲಮ್ಮ ನೋವು ಹಂಚಿಕೊಂಡಿದ್ದಾರೆ.