ಬಿಗ್ ಬಾಸ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದವರು ಮಲ್ಲಮ್ಮ. ಒಂದಷ್ಟು ವಾರ ಬಿಗ್ ಬಾಸ್ ಮನೆಯೊಳಗೆ ಇದ್ದ ಅವರು ಆನಂತರ ಎಲಿಮಿನೇಟ್ ಆಗಿದ್ದರು. ಇದೀಗ ಫಿನಾಲೆ ವಾರದಲ್ಲಿ ಮಲ್ಲಮ್ಮ ಪುನಃ ಬಿಗ್ ಬಾಸ್ ಮನೆಯೊಳಗೆ ಆಗಮಿಸಿದ್ದರು. ತಮ್ಮ ಒಂದಷ್ಟು ಹರಕೆಗಳನ್ನು ಪೂರೈಸಿದ ಅವರು, ನಂತರ ತಮ್ಮ ಮೊಮ್ಮಗನಿಗೂ ನಾಮಕರಣ ಮಾಡಿದರು. ಅಂದಹಾಗೆ, ಮಲ್ಲಮ್ಮನ ಮೊಮ್ಮಗನಿಗೆ ಹೆಸರಿಟ್ಟಿದ್ದು ಬಿಗ್ ಬಾಸ್ ಅನ್ನೋದು ವಿಶೇಷ.
ಹರಕೆ ತೀರಿಸಿದ ಮಲ್ಲಮ್ಮ
‘ಬಿಗ್ ಬಾಸ್’ ಮನೆಗೆ ವಾಪಸಾ ಮಲ್ಲಮ್ಮ ಮೊದಲು ದೇವಿಗೆ ಹರಕೆ ತೀರಿಸಿದರು. ಮೈಮೇಲೆ ತಣ್ಣೀರು ಸುರಿದುಕೊಂಡು ಉರುಳು ಸೇವೆ ಮಾಡಿದರು. ಅಷ್ಟಕ್ಕೂ ಈ ಹರಕೆ ಯಾಕೆ? ಮಲ್ಲಮ್ಮ ಅವರು ‘ಬಿಗ್ ಬಾಸ್’ ಮನೆಯಲ್ಲಿ ಇರುವಾಗ, "ನನ್ನ ಸೊಸೆಗೆ ನಾರ್ಮಲ್ ಡೆಲಿವರಿ ಆಗಲಿ" ಎಂದು ದೇವಿಗೆ ಹರಕೆ ಹೊತ್ತಿದ್ದರಂತೆ. ಸದ್ಯ ಅವರ ಸೊಸೆಗೆ ನಾರ್ಮಲ್ ಡೆಲಿವರಿ ಆಗಿದೆ. ಆ ಹಿನ್ನೆಲೆಯಲ್ಲಿ ಪುನಃ ಬಿಗ್ ಬಾಸ್ ಮನೆಗೆ ಬಂದು ಹರಕೆ ತೀರಿಸಿದ್ದಾರೆ ಮಲ್ಲಮ್ಮ.
Mallamma: ಮಲ್ಲಮ್ಮ ಫಿನಾಲೆ ಕಂಟೆಂಡರ್: ವೀಕೆಂಡ್ನಲ್ಲಿ ಒಂಟಿಗಳ ಚಳಿ ಬಿಡಿಸಲಿದ್ದಾರೆ ಸುದೀಪ್
ಮೊಮ್ಮಗನಿಗೆ ಹೆಸರಿಟ್ಟ ಬಿಗ್ ಬಾಸ್
ಮನೆಯೊಳಗೆ ಬಂದ ಮಲ್ಲಮ್ಮ ಅವರನ್ನು ಮಾತನಾಡಿಸಿದ ಬಿಗ್ ಬಾಸ್, "ಮುದ್ದಾದ ಮೊಮ್ಮಗನಿಗೆ ಅಜ್ಜಿ ಆಗಿದ್ದೀರಿ. ನಿಮಗೆ ಅಭಿನಂದನೆಗಳು. ವಾರಗಳ ಹಿಂದೆ ಈ ಮನೆಯಿಂದ ಹೊರಡುವ ಮುನ್ನ ಬೇಡಿಕೆ ಇತ್ತು, ಆಸೆ ಇತ್ತು. ಮೊಮ್ಮಗನಿಗೆ ‘ಬಿಗ್ ಬಾಸ್’ ನಾಮಕರಣ ಮಾಡಬೇಕು ಅಂತ ಕೇಳಿದ್ರಿ. ನಿಮ್ಮ ಆಶಯದಂತೆ ನಾಮಕರಣ ಶಾಸ್ತ್ರವನ್ನು ಇಲ್ಲಿ ಮಾಡಲು ಸಾಧ್ಯವಿಲ್ಲ. ಆದರೂ ನಾಮಕರಣಕ್ಕೆ ಹೆಸರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇಲ್ಲಿ ಖಂಡಿತವಾಗಿಯೂ ನೆರವೇರಿಸಬಹುದು. ನಿಮ್ಮ ಮೊಮ್ಮಗನನ್ನ ನೀವು ಯಾವ ಹೆಸರಿನಿಂದ ಕರೆಯಲು ಬಯಸುತ್ತೀರಿ" ಎಂದು ಮಲ್ಲಮ್ಮನಿಗೆ ಕೇಳಿದರು. ಅದಕ್ಕೆ, ಮಲ್ಲಮ್ಮ, "ಗಣೇಶ" ಎಂದು ಹೇಳಿದರು.
"ಬಹಳ ಸೂಕ್ತ ಹಾಗೂ ಶಕ್ತಿಶಾಲಿ ಹೆಸರನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಆಯ್ಕೆಯಂತೆ ಆಗಲಿ. ಗಣೇಶ.. ಗಣೇಶ.. ಗಣೇಶ…" ಎಂದು ಮೂರು ಬಾರಿ ಹೆಸರು ಹೇಳಿ ನಾಮಕರಣ ಮಾಡಿದರು ಬಿಗ್ ಬಾಸ್. ಜೊತೆಗೆ, "ನಿಮ್ಮ ಗಣೇಶನ ಆಯಸ್ಸು, ಆರೋಗ್ಯ ವೃದ್ಧಿಸಿ.. ವಿದ್ಯೆ, ಸಿದ್ಧಿ, ಬುದ್ಧಿ ಒಲಿಯಲಿ ಎಂದು ಹಾರೈಸುತ್ತೇವೆ" ಎಂದು ಬಿಗ್ ಬಾಸ್ ಹಾರೈಸಿದರು.
ಮಲ್ಲಮ್ಮ ಏನಂದ್ರು?
"ನಮ್ಮ ಉಸಿರು ಇರುವವರೆಗೂ ನಾವು ಬಿಗ್ ಬಾಸ್‌ನ ಮರೆಯೋದಿಲ್ಲ. ಥ್ಯಾಂಕ್ಯು.. ನಮ್ಮ ಊರಿನಲ್ಲಿ ತುಂಬಾ ಖುಷಿ ಪಟ್ಟರು. ಅನುಬಂಧ ಅವಾರ್ಡ್ಸ್‌ನಲ್ಲಿ ನಾನು ಡ್ಯಾನ್ಸ್ ಮಾಡಿದ್ಧೀನಿ. ಹೊರಗಡೆ ನಂದೆ ಫುಲ್ ಹವಾ" ಎಂದು ಖುಷಿ ವ್ಯಕ್ತಪಡಿಸಿದರು ಮಲ್ಲಮ್ಮ.