ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಗೆ ತಾವೇ ʻಉತ್ತಮʼ ಪಟ್ಟ ಕೊಟ್ಟುಕೊಂಡ ಕ್ಯಾಪ್ಟನ್‌ ಸೌಂದರ್ಯ! ಮನೆಮಂದಿಯೆಲ್ಲಾ ಸೇರಿ ಕೊಟ್ಟ ತಿರುಗೇಟು ಹೆಂಗಿತ್ತು ಗೊತ್ತಾ?

ದೊಡ್ಮನೆಯಲ್ಲಿ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ತಮಗೆ ತಾವೇ 'ಉತ್ತಮ' ಪಟ್ಟ ಘೋಷಿಸಿಕೊಂಡು ಬೀಗಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಮನೆಮಂದಿಯೆಲ್ಲಾ ಒಗ್ಗಟ್ಟಾಗಿ ಅವರ ದರ್ಪದ ವರ್ತನೆಗೆ ತಕ್ಕ ತಿರುಗೇಟು ನೀಡಿದ್ದು, ಸತತ ಎರಡನೇ ಬಾರಿಗೆ 'ಕಳಪೆ' ಪಟ್ಟ ನೀಡಿ ಜೈಲಿಗೆ ಕಳುಹಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಡೆಯುವ 'ಉತ್ತಮ' ಮತ್ತು 'ಕಳಪೆ' ಆಯ್ಕೆ ಪ್ರಕ್ರಿಯೆ ಸ್ಪರ್ಧಿಗಳ ನಡುವಿನ ಅಸಮಾಧಾನ, ಒಳಜಗಳ ಮತ್ತು ಅಸಲಿ ವ್ಯಕ್ತಿತ್ವವನ್ನು ಬಯಲು ಮಾಡುವ ವೇದಿಕೆಯಾಗಿದೆ. ಆಯಾ ವಾರದ ಪ್ರದರ್ಶನವನ್ನು ಆಧರಿಸಿ ನೀಡುವ ಈ ಪಟ್ಟಗಳಲ್ಲಿ, ಕಳಪೆ ಪಡೆದವರು ಒಂದು ರಾತ್ರಿ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಕಳೆದ ವಾರವಷ್ಟೇ ಆಸಿಯಾ ಮತ್ತು ಗಾನವಿ ಅವರೊಂದಿಗೆ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದ ಸೌಂದರ್ಯಾ ಶೆಟ್ಟಿ, ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದರೂ ಮತ್ತೆ ಅದೇ ಕಳಪೆ ಪಟ್ಟಕ್ಕೆ ಗುರಿಯಾಗಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

ಜಗ್ಗ ಮಮ್ಮಿ- ಕಿರಣ್ ಕೆಂಡಾಮಂಡಲ

ಕ್ಯಾಪ್ಟನ್ಸಿ ರೇಸ್‌ನಲ್ಲಿ ಕಿರಣ್ ಶಾಸ್ತ್ರಿ ಅವರನ್ನು ಮಣಿಸಿ ಸೌಂದರ್ಯಾ ಶೆಟ್ಟಿ ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಆದರೆ, ಕ್ಯಾಪ್ಟನ್ ಪಟ್ಟ ಏರಿದ ತಕ್ಷಣವೇ ಅವರ ವರ್ತನೆ ಬದಲಾಗಿದೆ ಎಂಬ ಆರೋಪ ಮನೆಮಂದಿಯಿಂದ ಕೇಳಿಬಂತು. ಅಧಿಕಾರ ಸಿಕ್ಕ ಖುಷಿಯಲ್ಲಿದ್ದ ಸೌಂದರ್ಯಾ, ಜಗ್ಗ ಮಮ್ಮಿ ಅವರಿಗೆ ಕಿಚನ್ ಸ್ಲ್ಯಾಬ್ ಸ್ವಚ್ಛಗೊಳಿಸಲು ಹಾಗೂ ಕಿರಣ್ ಶಾಸ್ತ್ರಿ ಅವರಿಗೆ ಪಾತ್ರೆ ತೊಳೆಯಲು ಆದೇಶಿಸಿದ್ದರು. ಆದರೆ, ಅವರು ಕೆಲಸ ಹೇಳಿದ ರೀತಿ ಮತ್ತು ತೋರಿದ ದರ್ಪದ ಧೋರಣೆಗೆ ಜಗ್ಗ ಮಮ್ಮಿ ಹಾಗೂ ಕಿರಣ್ ಶಾಸ್ತ್ರಿ ಕೆಂಡಾಮಂಡಲವಾಗಿದ್ದರು.

ಸೌಂದರ್ಯರದ್ದು ಎಂಥ ತೀರ್ಮಾನ?

ಇದರ ಬೆನ್ನಲ್ಲೇ ನಡೆದ ಈ ವಾರದ 'ಉತ್ತಮ' ಸ್ಪರ್ಧಿಯ ಆಯ್ಕೆ ಪ್ರಕ್ರಿಯೆಯಲ್ಲಿ ದೊಡ್ಡ ಟ್ವಿಸ್ಟ್ ಎದುರಾಯಿತು. ಮನೆ ಸದಸ್ಯರ ಮತದಾನದಲ್ಲಿ ನಾಲ್ವರು ಸ್ಪರ್ಧಿಗಳಿಗೆ ತಲಾ ಎರಡು ಮತಗಳು ಬಿದ್ದು 'ಟೈ' ಆಯಿತು. ಯಾರಿಗೂ ಸ್ಪಷ್ಟ ಬಹುಮತ ಸಿಗದ ಕಾರಣ, ಬಿಗ್ ಬಾಸ್ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿಗೆ ವಿಶೇಷ ಅಧಿಕಾರ ನೀಡಿದರು. "ನಿಮಗೆ ಯಾರು ಉತ್ತಮ ಎನಿಸುತ್ತಾರೋ ಅವರ ಹೆಸರನ್ನು ನೀವೇ ಘೋಷಿಸಿ" ಎಂದು ಬಿಗ್ ಬಾಸ್ ಸೂಚಿಸಿದ ತಕ್ಷಣ, ಸೌಂದರ್ಯಾ ಹಿಂದೆಮುಂದೆ ನೋಡದೆ ತಮಗೆ ತಾವೇ 'ಉತ್ತಮ' ಪಟ್ಟವನ್ನು ಘೋಷಿಸಿಕೊಂಡು ಬೀಗಿದರು.

Bigg Boss Kannada 13: ಸೌಂದರ್ಯಾ-ಕಿರಣ್ ನಡುವೆ ನೇರ ವಾಗ್ದಾಳಿ; ಅಧ್ಯಕ್ಷ ಮಂಜು ಕಠಿಣ ನಿರ್ಧಾರ

ಸೌಂದರ್ಯಾ ವಿರುದ್ಧ ತಿರುಗಿಬಿದ್ದ ಸ್ಪರ್ಧಿಗಳು

ಆದರೆ, ಸೌಂದರ್ಯಾ ಅವರ ಈ ಸಂಭ್ರಮ ಕೆಲವೇ ಗಂಟೆಗಳ ಕಾಲ ಮಾತ್ರ ಉಳಿಯಿತು. ಅದೇ ದಿನ ನಡೆದ 'ಕಳಪೆ' ಆಯ್ಕೆ ಪ್ರಕ್ರಿಯೆಯಲ್ಲಿ ಮನೆಮಂದಿಯೆಲ್ಲಾ ಒಗ್ಗಟ್ಟಾಗಿ ಸೌಂದರ್ಯಾ ಅವರಿಗೆ ಸರಿಯಾದ ತಿರುಗೇಟು ನೀಡಿದರು. ಗಗನ್ ಚಿನ್ನಪ್ಪ, ಜಗ್ಗ ಮಮ್ಮಿ ಮತ್ತು ಕಿರಣ್ ಶಾಸ್ತ್ರಿ ಸೇರಿದಂತೆ ಬಹುತೇಕ ಸ್ಪರ್ಧಿಗಳು ಸೌಂದರ್ಯಾ ವಿರುದ್ಧ ತಿರುಗಿಬಿದ್ದರು. "ಸೌಂದರ್ಯಾ ಸರಿಯಾಗಿ ಕೆಲಸ ಮಾಡುವುದಿಲ್ಲ, ಜೊತೆಗೆ ಬೇರೆಯವರಿಗೆ ಕೆಲಸ ಹೇಳುವ ರೀತಿಯೂ ಸರಿಯಿಲ್ಲ" ಎಂದು ನೇರ ಕಾರಣಗಳನ್ನು ನೀಡಿ ಅವರನ್ನೇ ಕಳಪೆ ಪಟ್ಟಕ್ಕೆ ಆಯ್ಕೆ ಮಾಡಿದರು.

ಸೌಂದರ್ಯಾ ಅತಿರೇಕದ ವರ್ತನೆ

ಕಳೆದ ವಾರ ಕಳಪೆ ಪಡೆದಿದ್ದ ಸೌಂದರ್ಯಾ ಅವರಿಗೆ, ಈ ವಾರ ಕ್ಯಾಪ್ಟನ್ ಆಗಿದ್ದರೂ ಸತತ ಎರಡನೇ ಬಾರಿಗೆ ಕಳಪೆ ಸಿಕ್ಕಿದ್ದು ಬರಸಿಡಿಲು ಬಡಿದಂತಾಯಿತು. ಈ ಅವಮಾನವನ್ನು ತಾಳಲಾರದ ಅವರು, "ನಾನು ಇದನ್ನು ತೆಗೆದುಕೊಳ್ಳುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಪ್ರಕ್ರಿಯೆಯ ಮಧ್ಯದಲ್ಲೇ ಹಾಲ್‌ನಿಂದ ಎದ್ದು ಹೋದರು. ಬಳಿಕ ಬಾತ್‌ರೂಮ್‌ಗೆ ತೆರಳಿ ಗಳಗಳನೆ ಕಣ್ಣೀರಿಟ್ಟರು. ಸೌಂದರ್ಯಾ ಅವರ ಈ ಅತಿರೇಕದ ವರ್ತನೆ ಮತ್ತು ಪ್ರಕ್ರಿಯೆಗೆ ಅಗೌರವ ತೋರಿದ ರೀತಿಯನ್ನು ಜಗದೀಶ್, ಗಗನ್ ಸೇರಿದಂತೆ ಮನೆಯ ಹಲವು ಸದಸ್ಯರು ತೀವ್ರವಾಗಿ ಖಂಡಿಸಿದರು.

ಕರ್ಮ ರಿಟರ್ನ್ಸ್ ಎಂದರೆ ಇದೇ

ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ವೀಕ್ಷಕರು ಸೌಂದರ್ಯಾ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಇಡೀ ದಿನ ಆಸಿಯಾ ಫಿರ್ದೋಸ್ ಅವರಿಗೆ ಕಳಪೆ ಕೊಡಬೇಕೆಂದು ಸೌಂದರ್ಯಾ ಉಳಿದ ಸ್ಪರ್ಧಿಗಳ ತಲೆ ತುಂಬುತ್ತಿದ್ದರು. ಆದರೆ, ಕೊನೆಗೆ ಆ ಕಳಪೆ ಪಟ್ಟ ಅವರ ಕೊರಳಿಗೇ ಸುತ್ತಿಕೊಂಡಿದೆ. ಇದನ್ನು ಕಂಡ ನೆಟ್ಟಿಗರು, "ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುವುದು... ಕರ್ಮ ರಿಟರ್ನ್ಸ್ ಎಂದರೆ ಇದೇ" ಎಂದು ಸೌಂದರ್ಯಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಅಧಿಕಾರದ ಬಲದಿಂದ ತಮಗೆ ತಾವೇ 'ಉತ್ತಮ' ಪಟ್ಟ ಕಟ್ಟಿಕೊಂಡರೂ, ಸಹಸ್ಪರ್ಧಿಗಳ ಮನಸ್ಸು ಗೆಲ್ಲುವಲ್ಲಿ ಕ್ಯಾಪ್ಟನ್ ಸೌಂದರ್ಯಾ ಸಂಪೂರ್ಣವಾಗಿ ವಿಫಲರಾಗಿದ್ದಾರೆ.