'ಬಿಗ್ ಬಾಸ್' ಮನೆಗೆ ಕಾಲಿಟ್ಟ ಮೊದಲ ದಿನವೇ ಲಿಖಿತ್ ತಮ್ಮ ಅಸಲಿ ಆಟ ಆರಂಭಿಸಿದ್ದಾರೆ. ಅಗ್ನಿಪರೀಕ್ಷೆಯ ಮೂಲಕ ಬಿಗ್ ಬಾಸ್ ಮನೆಯೊಳಗೆ ಬಂದಿರುವ ಲಿಖಿತ್, ತಮ್ಮ ಆಟದ ವೈಖರಿಯನ್ನು ಮೊದಲ ದಿನದಿಂದಲೇ ಪ್ರದರ್ಶಿಸಲು ಶುರು ಮಾಡಿದ್ದಾರೆ. ಇದು ಇತರೆ ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡಿದೆ.
ವೈಷ್ಣವಿ ಕೌಂಡಿನ್ಯ ಅವರ ಜೊತೆಗೆ ವೇಟ್ ಲಿಫ್ಟಿಂಗ್ ಕುರಿತು ಮಾತನಾಡುತ್ತಿದ್ದ ಲಿಖಿತ್, "ಆನೆಯನ್ನು ಎತ್ತೋಕೆ ಆಗಲ್ಲ ಬಿಡಿ" ಎಂದು ಮಾತಿನ ಭರದಲ್ಲಿ ಬಾಡಿ ಶೇಮಿಂಗ್ ರೀತಿಯಲ್ಲಿ ತಮಾಷೆ ಮಾಡುತ್ತಾರೆ. ಈ ವಿಚಾರಕ್ಕೆ ಪ್ರಥಮಾ ಪ್ರಸಾದ್ ಅವರು ಖಡಕ್ ಆಗಿಯೇ ಲಿಖಿತ್‌ಗೆ ಎಚ್ಚರಿಕೆ ನೀಡುತ್ತಾರೆ. ಇದು ಮನೆಯೊಳಗೆ ದೊಡ್ಡ ಜಗಳಕ್ಕೆ ಕಾರಣವಾಗುತ್ತದೆ.
ತಮಾಷೆಯನ್ನು ಸ್ವೀಕರಿಸುವ ಮನಸ್ಸಿಲ್ಲ
ಪ್ರಥಮಾ ಅವರ ಮಾತಿಗೆ ತಿರುಗೇಟು ನೀಡಿದ ಲಿಖಿತ್, "ಪ್ರಥಮಾ ಮ್ಯಾಮ್‌ಗೆ ತಮಾಷೆಯನ್ನು ಸ್ವೀಕರಿಸುವ ಮನಸ್ಸಿಲ್ಲ. ತಮಗೆ ಸಂಬಂಧವಿಲ್ಲದ ವಿಚಾರಕ್ಕೆ ಮೂಗು ತೂರಿಸುತ್ತಿದ್ದಾರೆ" ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಪ್ರಥಮಾ, "ಒಬ್ಬರ ವ್ಯಕ್ತಿತ್ವದ ಬಗ್ಗೆ, ಅದರಲ್ಲೂ ಬಾಡಿ ಶೇಮಿಂಗ್ ಹಾಗೂ ಮಹಿಳೆ ಎಂಬ ವಿಚಾರ ಬಂದಾಗ ನಾನು ಖಂಡಿತ ಧ್ವನಿ ಎತ್ತುತ್ತೇನೆ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಬ್ಬನ್ ಪಾರ್ಕ್‌ಗೆ ಹೋಗಿ ಪಿಕ್‌ನಿಕ್ ಮಾಡಿ
"ಈಗ ವುಮನ್ ಕಾರ್ಡ್ ಯೂಸ್ ಮಾಡುತ್ತಿದ್ದಾರೆ" ಎಂದು ಹೇಳುತ್ತಾ ಮತ್ತೆ ಪ್ರಥಮಾಗೆ ಕೌಂಟರ್ ಕೊಟ್ಟ ಲಿಖಿತ್, "ಫ್ಯಾಮಿಲಿ ತರ ಇರಲು ಬಂದಿದ್ದರೆ ಕಬ್ಬನ್ ಪಾರ್ಕ್‌ಗೆ ಹೋಗಿ ಪಿಕ್‌ನಿಕ್ ಮಾಡಿ. ಇದು ಬಿಗ್‌ಬಾಸ್ ಮನೆ, ಇಲ್ಲಿ ಅದೆಲ್ಲ ನಡೆಯಲ್ಲ" ಎಂದು ನೇರ ಸವಾಲು ಹಾಕಿದ್ದಾರೆ. ಈ ಮಧ್ಯೆ, "ಪ್ರಥಮಾ ಅಕ್ಕನಿಗೆ ಲಿಖಿತ್ ಮರ್ಯಾದೆ ಕೊಡಲಿಲ್ಲ" ಎಂದು ಗಗನ್ ಚಿನ್ನಪ್ಪ ಹೇಳುತ್ತಾರೆ. ಇದಕ್ಕೂ ತಿರುಗೇಟು ನೀಡಿದ ಲಿಖಿತ್, "ವಿಚಾರ ಗೊತ್ತಿಲ್ಲದೆ ಮಾತನಾಡಬಾರದು. ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಂಡು ಹೇಳಬೇಕು. ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ನೋಡುವುದಲ್ಲ" ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
ಮಹಾಕವಿ ಮಂಜ ಏನ್ ಕಮ್ಮಿ ಇಲ್ಲ!
ಅತ್ತ ಅಗ್ನಿಪರೀಕ್ಷೆ ಮೂಲಕ ಬಂದಿರುವ ಮತ್ತೋರ್ವ ಸ್ಪರ್ಧಿ ಮಹಾಕವಿ ಮಂಜ ಕೂಡ ಏನ್ ಕಮ್ಮಿ ಇಲ್ಲ! "ನನ್ನ ಮುಂದೆ ಯಾರೂ ನೆಮ್ಮದಿಯಾಗಿರಬಾರದು, ಇಲ್ಲದಿದ್ದರೆ ನನ್ನ ನಿದ್ದೆ ಕೆಡುತ್ತದೆ. ನಾನಿಲ್ಲಿ ಯಾರಾದರೂ ಹರ್ಟ್ ಆಗುತ್ತಾರಾ ಎಂದು ನೋಡಲು ಬಂದಿಲ್ಲ. ಇಲ್ಲಿಗೆ ಕುಟುಂಬ ಕಟ್ಟಿಕೊಳ್ಳಲು ಬಂದಿಲ್ಲ, ಟ್ರೋಫಿ ಗೆಲ್ಲಲು ಬಂದಿರುವುದು" ಎಂದು ಸಂಗೀತಾ ಭಟ್ ಹಾಗೂ ಜಗ್ಗಾ ಮಮ್ಮಿಗೆ ಮಾಡರ್ನ್ ಮಹಾಕವಿ ಮಂಜ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
ಸದ್ಯ ಇವರಿಗೆ "ಅವಮಾನ ಮಾಡುವ ಗುಣವುಳ್ಳವನು", "ಕಿರಿಕಿರಿ ಉಂಟುಮಾಡುವ ವ್ಯಕ್ತಿ" ಎಂಬ ಹಣೆಪಟ್ಟಿಗಳು ಸಹ-ಸ್ಪರ್ಧಿಗಳಿಂದ ಸಿಕ್ಕಿವೆ.