‘ಬಿಗ್ ಬಾಸ್’ ರಿಯಾಲಿಟಿ ಶೋನಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದಿಢೀರ್ ಹೊರಬಂದಿರುವುದು ಪ್ರೇಕ್ಷಕರಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ತಾವೇಕೆ ಅರ್ಧದಲ್ಲೇ ಆಟ ಮುಗಿಸಿ ಆಸ್ಪತ್ರೆ ಸೇರಬೇಕಾಯಿತು ಎಂಬುದಕ್ಕೆ ಸ್ವತಃ ಓಂ ಪ್ರಕಾಶ್ ರಾವ್ ಅವರೇ ಸಂಪೂರ್ಣ ವಿವರಣೆ ನೀಡಿದ್ದು, ಅಲ್ಲಿನ ಆಹಾರ ಪದ್ಧತಿಯಿಂದಾಗಿ ತಮ್ಮ ಆರೋಗ್ಯ ಗಂಭೀರ ಮಟ್ಟದಲ್ಲಿ ಏರುಪೇರಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.
ಆಹಾರದ ಬಗ್ಗೆ ನನಗೆ ಬೇಸರವಾಯ್ತು
ಬಿಗ್ ಬಾಸ್ ಮನೆಯಲ್ಲಿದ್ದಾಗ ಎದುರಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, "ನನಗೆ ಅಲ್ಲಿ ಮುಖ್ಯವಾಗಿ ಊಟದ ವಿಚಾರದಲ್ಲೇ ದೊಡ್ಡ ಸಮಸ್ಯೆಯಾಯಿತು. ಆ ಊಟ ಹೊಂದಿಕೆಯಾಗದೆ ಶುಗರ್ ಮತ್ತು ರಕ್ತದೊತ್ತಡ ಎರಡೂ ಮಿತಿಮೀರಿ ಹೆಚ್ಚಾಯಿತು. ಇದರೊಂದಿಗೆ ಕಾಲಿನ ಸಮಸ್ಯೆಯೂ ತೀವ್ರಗೊಂಡಿತು. ಅದು ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ನಾನು ಊಹಿಸಿರಲಿಲ್ಲ. ಅಂತಿಮವಾಗಿ ವಿಪರೀತ ಕಾಲಿನ ನೋವಿನಿಂದಾಗಿಯೇ ನಾನು ಮನೆಯಿಂದ ಹೊರಬರಬೇಕಾಯಿತು. ಹೊರಗೆ ಬಂದ ಮೇಲೆ ತಪಾಸಣೆ ನಡೆಸಿದಾಗಲೇ ಶುಗರ್ ಮತ್ತು ಬಿಪಿ ವಿಪರೀತ ಮಟ್ಟ ತಲುಪಿರುವುದು ಗೊತ್ತಾಗಿದ್ದು, ಅಲ್ಲಿನ ಆಹಾರದ ಬಗ್ಗೆ ನನಗೆ ನಿಜಕ್ಕೂ ತೀವ್ರ ಬೇಸರ ತರಿಸಿತು" ಎಂದು ತಿಳಿಸಿದ್ದಾರೆ.
ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇತ್ತು
ಮಧುಮೇಹಿಗಳಿಗೆ ಸೂಕ್ತ ಆಹಾರ ನೀಡದಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಓಂ ಪ್ರಕಾಶ್ ರಾವ್ ಅವರು, "ಶೋಗೆ ಪ್ರವೇಶಿಸುವ ಮುನ್ನವೇ ನಾನು ಮಧುಮೇಹ ಸೇರಿದಂತೆ ನನ್ನ ಎಲ್ಲಾ ವೈದ್ಯಕೀಯ ವರದಿಗಳನ್ನು ಆಯೋಜಕರಿಗೆ ನೀಡಿದ್ದೆ. ಆದರೂ ಪ್ರತಿ ಹೊತ್ತೂ ಕೇವಲ ಅನ್ನವನ್ನೇ ನೀಡಿದ್ದರಿಂದ ಶುಗರ್ ನಿಯಂತ್ರಣ ತಪ್ಪಿತು. ಸತತವಾಗಿ ಅನ್ನ ಸೇವಿಸಿದ್ದರಿಂದ ಶುಗರ್ ಜತೆಗೆ ರಕ್ತದೊತ್ತಡವೂ ತೀವ್ರವಾಗಿ ಏರಿತು. ಹೊರಗೆ ಬಂದ ಬಳಿಕ ನನ್ನ ಸ್ಥಿತಿ ನೋಡಿದ ವೈದ್ಯರು, 'ಇನ್ನೊಂದು ಸ್ವಲ್ಪ ದಿನ ಹೀಗೇ ಮುಂದುವರಿದಿದ್ದರೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇತ್ತು, ಸೂಕ್ತ ಎಚ್ಚರಿಕೆ ಏಕೆ ವಹಿಸಲಿಲ್ಲ?' ಎಂದು ಆತಂಕ ವ್ಯಕ್ತಪಡಿಸಿದರು. ಒಂದು ವೇಳೆ ಒಳಗಿದ್ದಾಗಲೇ ಪ್ರಾಣಾಪಾಯ ಅಥವಾ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ" ಎಂದು ಬೇಸರ ಹೊರಹಾಕಿದ್ದಾರೆ.
ಎರಡು ದಿನ ಜೊತೆಗಿದ್ದು ನೋಡಿಕೊಂಡರು
ಇನ್ನು ಬಿಗ್ ಬಾಸ್ ಆಯೋಜಕರ ಉಪಚಾರ ಹಾಗೂ ಚಿಕಿತ್ಸೆಯ ಬಗ್ಗೆ ಮಾತನಾಡುತ್ತಾ, "ಊಟದ ವಿಚಾರ ಬಿಟ್ಟರೆ ಉಳಿದಂತೆ ಅವರು ನನ್ನನ್ನು ಅತ್ಯಂತ ಗೌರವದಿಂದ ಮತ್ತು ಚೆನ್ನಾಗಿಯೇ ನೋಡಿಕೊಂಡಿದ್ದಾರೆ, ಆ ಬಗ್ಗೆ ಯಾವುದೇ ದೂರಿಲ್ಲ. ಪರಿಸ್ಥಿತಿ ಬಿಗಡಾಯಿಸಿದ ತಕ್ಷಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಎರಡು ದಿನಗಳ ಕಾಲ ಅವರ ಸಿಬ್ಬಂದಿಯೂ ಆಸ್ಪತ್ರೆಯಲ್ಲಿ ಜೊತೆಗಿದ್ದರು. ಆರಾಧ್ಯ ಆಸ್ಪತ್ರೆಯ ಡಾ. ದೀಪಕ್ ಅವರು ಕಾಲಿನಲ್ಲಿ ಇನ್‌ಫೆಕ್ಷನ್ ಆಗಿರುವುದನ್ನು ಗಮನಿಸಿ ಕನಿಷ್ಠ 15 ದಿನಗಳ ಕಾಲ ಕಡ್ಡಾಯ ವಿಶ್ರಾಂತಿ ಪಡೆಯಲು ಸೂಚಿಸಿದರು. ನಂತರ ನಮ್ಮ ಕುಟುಂಬದ ವೈದ್ಯರಾದ ಡಾ. ರಾಕೇಶ್ ಕುಮಾರ್ ಅವರು ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಆಸ್ಪತ್ರೆಗೆ ದಾಖಲಿಸಿಕೊಂಡು ಉಪಚರಿಸುತ್ತಿದ್ದಾರೆ" ಎಂದು ಓಂ ಪ್ರಕಾಶ್ ರಾವ್ ಸ್ಪಷ್ಟಪಡಿಸಿದ್ದಾರೆ.