ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼ ಶೋನಿಂದ ಹೊರಬಿದ್ದ ʻಅಗ್ನಿ ಬಾಯ್‌ʼ ಲಿಖಿತ್‌ ಗೊಂದಿ ಫಸ್ಟ್‌ ರಿಯಾಕ್ಷನ್;‌ ಎಲಿಮಿನೇಷನ್‌ಗೆ ಕಾರಣವಾಗಿದ್ದೇನು?

Likhith Gondi Elimination: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ‘ಅಗ್ನಿ ಬಾಯ್’ ಲಿಖಿತ್ ಗೊಂದಿ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಅತಿಯಾದ ಕೋಪ, ಆಕ್ರಮಣಕಾರಿ ವರ್ತನೆ ಹಾಗೂ ಮಾತಿನ ಶೈಲಿಯೇ ಎಲಿಮಿನೇಷನ್‌‌ಗೆ ಕಾರಣವೆಂದು ಅವರು ಒಪ್ಪಿಕೊಂಡಿದ್ದಾರೆ. ಅಮ್ಮ ನೀಡಿದ ಎಚ್ಚರಿಕೆಯನ್ನು ಮರೆತು ವೀಕ್ಷಕರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದಿರುವ ‘ಅಗ್ನಿ ಬಾಯ್’ ಖ್ಯಾತಿಯ ಕಾಮನ್ನರ್ ಸ್ಪರ್ಧಿ ಲಿಖಿತ್ ಗೊಂದಿ ತಮ್ಮ ಎಲಿಮಿನೇಷನ್ ಕುರಿತು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಮನೆಯಿಂದ ಹೊರಬಂದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ತಮ್ಮ ನಿರ್ಗಮನಕ್ಕೆ ತಮ್ಮ ಅತಿಯಾದ ಕೋಪ, ಆಕ್ರಮಣಕಾರಿ ಸ್ವಭಾವ ಹಾಗೂ ಮಾತನಾಡಿದ ರೀತಿಯೇ ಮುಖ್ಯ ಕಾರಣ ಎಂದು ಒಪ್ಪಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ನನ್ನ ಸಿಟ್ಟನ್ನ ನಾನು ನಿಯಂತ್ರಿಸಿಕೊಳ್ಳಬೇಕಿತ್ತು

ತಮ್ಮ ಎಲಿಮಿನೇಷನ್ ಮೊದಲೇ ನಿರೀಕ್ಷಿತವಾಗಿತ್ತು ಎಂದಿರುವ ಲಿಖಿತ್, "ನನ್ನಿಂದ ತುಂಬಾ ತಪ್ಪುಗಳಾಗಿವೆ. ಬಿಗ್ ಬಾಸ್ ಮನೆಗೆ ನಾನು ಪ್ರವೇಶಿಸುವಾಗ ಅಂದುಕೊಂಡಿದ್ದೇ ಬೇರೆ, ಆದರೆ ಅಲ್ಲಿ ಹೋಗಿ ಮಾಡಿದ್ದೇ ಬೇರೆ. ಮಾತನಾಡುವ ಶೈಲಿ ಮತ್ತು ಅತಿಯಾದ ಸಿಟ್ಟು ನನ್ನ ಆಟದ ಮೇಲೆ ಕೆಟ್ಟ ಪರಿಣಾಮ ಬೀರಿತು. ಅದನ್ನು ನಿಯಂತ್ರಿಸಿಕೊಳ್ಳಬೇಕಿತ್ತು ಎನ್ನುವ ಸತ್ಯ ತಡವಾಗಿ ಅರಿವಾಯಿತು. ಈ ಅರಿವು ಮೂಡುವಷ್ಟರಲ್ಲೇ ಕಾಲ ಮಿಂಚಿಹೋಗಿತ್ತು. ಎಲಿಮಿನೇಷನ್ ದಿನ ಬೆಳಗ್ಗೆಯೇ ನಾನು ಹೊರಹೋಗುವುದು ಖಚಿತ ಎಂದು ಗೊತ್ತಾಗಿತ್ತು. ಅದಕ್ಕಾಗಿಯೇ ಹೊರಬರುವ ಮುನ್ನ ಮಂಜು ಬಳಿ ‘ನಾನೇ ಹೋಗುತ್ತಿರುವುದು, ನೀನೇನೂ ತಲೆಕೆಡಿಸಿಕೊಳ್ಳಬೇಡ, ಚೆನ್ನಾಗಿ ಆಡು, ಕಪ್ ನಿಂದೇ’ ಎಂದು ಧೈರ್ಯ ತುಂಬಿ ಬಂದೆ" ಎಂದು ಹೇಳಿದ್ದಾರೆ.

Bigg Boss Kannada 13: ಬಿಗ್​ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ದಾಟಿ ಬಂದ ಲಿಖಿತ್‌ ಔಟ್‌!

ಅಮ್ಮ ನನಗೆ ಮೊದಲೇ ಹೇಳಿದ್ದರು

ವೀಕ್ಷಕರ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, "ಜನರಿಗೆ ಮೋಸ ಮಾಡಿದೆ ಎಂದು ನನಗೇ ಅನ್ನಿಸುತ್ತಿದೆ. ಏಕೆಂದರೆ ಹೊರಗಡೆ ಅವರು ನೋಡಿದ ಲಿಖಿತೇ ಬೇರೆ, ದೊಡ್ಮನೆಯಲ್ಲಿ ಕಂಡ ಲಿಖಿತೇ ಬೇರೆ. ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳಿರುತ್ತವೆ, ಆದರೆ ನಾನು ಮನೆಯಲ್ಲಿ ನನ್ನ ಕೆಟ್ಟ ಗುಣಗಳನ್ನೇ ಜಾಸ್ತಿ ತೋರಿಸಿಬಿಟ್ಟೆ. ಬಿಗ್ ಬಾಸ್‌ಗೆ ಬರುವಾಗ ‘ಸಿಟ್ಟು ಮಾಡಿಕೊಳ್ಳಬೇಡ’ ಎಂದು ಅಮ್ಮ ಹೇಳಿಕಳಿಸಿದ್ದರು. ಆದರೆ ರಕ್ತಗತವಾಗಿ ಬಂದ ಆ ಸಿಟ್ಟು ಸ್ಕ್ರೀನ್ ಮೇಲೆ ಅತಿಯಾಗಿ ಕಂಡಿತು. ಅದನ್ನು ಸ್ವಲ್ಪ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರೆ ಇವತ್ತು ಫಲಿತಾಂಶವೇ ಬೇರೆಯಾಗಿರುತ್ತಿತ್ತು" ಎಂದು ಬೇಸರ ತೋಡಿಕೊಂಡರು.

ಜನರ ಪ್ರೀತಿಗೆ ತಕ್ಕಂತೆ ಆಡಲಾಗಲಿಲ್ಲ

ಅಗ್ನಿ ಪರೀಕ್ಷೆ ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದ ಲಿಖಿತ್, ಜನರ ಪ್ರೀತಿಗೆ ತಕ್ಕಂತೆ ಆಡಲಾಗಲಿಲ್ಲ ಎಂಬ ಕೊರಗನ್ನು ಹಂಚಿಕೊಂಡಿದ್ದಾರೆ. "ಸಾಮಾನ್ಯ ವ್ಯಕ್ತಿಯೊಬ್ಬ ‘ಅಗ್ನಿಪರೀಕ್ಷೆ’ಯಂತಹ ಕಠಿಣ ಹಂತವನ್ನು ದಾಟಿ ಬಂದಾಗ ಜನರು ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ತಮ್ಮ ಅಮೂಲ್ಯ ಸಮಯ ನೀಡಿ ನನ್ನನ್ನು ನೋಡುತ್ತಿದ್ದರು. ನಾನೇನು ದೊಡ್ಡ ಸೆಲೆಬ್ರಿಟಿಯಾಗಲೀ, ಪುಡಾಂಗ್ ಆಗಲೀ ಅಲ್ಲ. ಅಂಥದ್ದರಲ್ಲಿ ಅವರ ಪ್ರೀತಿಗೆ ತಕ್ಕಂತೆ ನನ್ನಿಂದ ನೂರಕ್ಕೆ ನೂರು ಪ್ರಯತ್ನ ಹಾಕಬೇಕಿತ್ತು, ಆದರೆ ನಾನು ಅದನ್ನು ಮಾಡಲಿಲ್ಲ ಎನ್ನುವ ತೀವ್ರ ನೋವಿದೆ. ಈಗ ಆಗಿಹೋಗಿದ್ದರ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ಮುಂದಿನ ದಿನಗಳಲ್ಲಿ ನನ್ನ ಮಾತು, ನಡವಳಿಕೆಯನ್ನು ತಿದ್ದಿಕೊಂಡು ಇನ್ನಷ್ಟು ವಿನಮ್ರವಾಗಿ ಮುನ್ನಡೆಯುತ್ತೇನೆ" ಎಂದು ಲಿಖಿತ್ ಗೊಂದಿ ಹೇಳಿದ್ದಾರೆ.