ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13 Elimination: ʻಬಿಗ್‌ ಬಾಸ್‌ʼ ಮನೆಯೊಳಗೆ ಕಾಲಿಡದೇ ಎಲಿಮಿನೇಟ್ ಆದ ಪ್ರಥಮಾ ಪ್ರಸಾದ್! ಇದು ಇತಿಹಾಸದಲ್ಲೇ ಮೊದಲು!

Prathama Prasad Eviction: ʻಬಿಗ್ ಬಾಸ್ʼ ಕನ್ನಡ ಸೀಸನ್ 13ರಲ್ಲಿ ಅನಿರೀಕ್ಷಿತ ಆಘಾತ ತಂದಿದೆ. ಮೊದಲ ವಾರದಲ್ಲೇ ನಾಮಿನೇಟ್ ಆಗಿ ಕಡಿಮೆ ಮತ ಪಡೆದ ನಟಿ ಪ್ರಥಮಾ ಪ್ರಸಾದ್, ಮುಖ್ಯ ಮನೆಯೊಳಗೆ ಪ್ರವೇಶಿಸದೆಯೇ ಹೊರಬಿದ್ದು ಶೋ ಇತಿಹಾಸದಲ್ಲೇ ಮೊದಲ ಸ್ಪರ್ಧಿಯಾದರು. ತಾಯಿಯ ನೆರಳಿನಿಂದಾಚೆಗೆ ಸ್ವಂತ ಅಸ್ಮಿತೆ ಕಂಡುಕೊಳ್ಳಲು ಬಂದಿದ್ದ ಪ್ರಥಮಾ, ಬೇಸರದಿಂದ ಬಿಗ್‌ ಬಾಸ್‌ ವೇದಿಕೆಯಿಂದ ನಿರ್ಗಮಿಸಿದರು.

'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋ ಆರಂಭವಾದ ಮೊದಲ ವಾರದಲ್ಲೇ ಅನಿರೀಕ್ಷಿತ ತಿರುವು ಕಂಡಿದ್ದು, ನಟಿ ಪ್ರಥಮಾ ಪ್ರಸಾದ್ ಮನೆಯಿಂದ ಹೊರಬಿದ್ದಿದ್ದಾರೆ. ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕಿರಣ್ ಶಾಸ್ತ್ರಿ, ವೈಷ್ಣವಿ ಕೌಂಡಿನ್ಯ, ಅವಿನಾಶ್, ಧನುಷ್ ಹಾಗೂ ಪ್ರಥಮಾ ಪ್ರಸಾದ್ ನಾಮಿನೇಟ್ ಆಗಿದ್ದರು. ಕೊನೆಯಲ್ಲಿ ಕಡಿಮೆ ಮತಗಳನ್ನು ಪಡೆದ ಪ್ರಥಮಾ ಪ್ರಸಾದ್ ಶೋನಿಂದ ಹೊರಬೀಳುವಂತಾಗಿದೆ.

ಅಚ್ಚರಿಯ ಸಂಗತಿ ಎಂದರೆ, ಬಿಗ್ ಬಾಸ್ ಇತಿಹಾಸದಲ್ಲೇ ಒಂದು ವಾರ ಶೋನಲ್ಲಿದ್ದರೂ ಮುಖ್ಯ ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗದೆಯೇ ಸ್ಪರ್ಧಿಯೊಬ್ಬರು ಹೊರಬಿದ್ದಿರುವುದು ಇದೇ ಮೊದಲು. ಎಲಿಮಿನೇಟ್ ಆಗಿ ಹೊರಬಂದ ಪ್ರಥಮಾ ಅವರಿಗೆ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಬೀಳ್ಕೊಡಲಾಯಿತು.

ವೀಕ್ಷಕರು ಅಪಾರ ಪ್ರೀತಿಯನ್ನು ನೀಡಿದ್ದಾರೆ

ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡುತ್ತಾ ಭಾವುಕರಾದ ಪ್ರಥಮಾ ಪ್ರಸಾದ್, "ನನ್ನ ಪ್ರೀತಿಯ ಕನ್ನಡ ಪ್ರೇಕ್ಷಕರು ಕಳೆದ 15 ವರ್ಷಗಳಿಂದ ನನಗೆ ಅಪಾರ ಪ್ರೀತಿಯನ್ನು ನೀಡಿದ್ದಾರೆ. ನಾನು ನೃತ್ಯ, ನಟನೆ ಸೇರಿದಂತೆ ಅನೇಕ ರಂಗಗಳನ್ನು ನೋಡಿದ್ದೇನೆ, ಆದರೆ ಬಿಗ್ ಬಾಸ್ ನನಗೆ ನಿಜಕ್ಕೂ ಬಹಳ ವಿಶೇಷವಾದ ವೇದಿಕೆಯಾಗಿತ್ತು" ಎಂದು ತಮ್ಮ ಅನುಭವ ಹಂಚಿಕೊಂಡರು.

ಶೋ ಆರಂಭದ ದಿನ ಕಿಚ್ಚ ಸುದೀಪ್ ಅವರು ಬಿಗ್ ಬಾಸ್‌ನಲ್ಲಿ ನಿಮಗೆ ಎದುರಾಗಬಹುದಾದ ದೊಡ್ಡ ಸವಾಲು ಯಾವುದು ಎಂದು ಕೇಳಿದಾಗ, "ನಾನು ಏನಾದರೂ ಹೇಳಲು ಪ್ರಯತ್ನಿಸುತ್ತಿರುವಾಗ, ಎದುರಿಗಿರುವವರು ನನ್ನ ಮಾತನ್ನು ಕೇಳಿಸಿಕೊಳ್ಳುವ ಕನಿಷ್ಠ ಪ್ರಯತ್ನವನ್ನೂ ಮಾಡದೆ ತಮ್ಮ ದೃಷ್ಟಿಕೋನದಲ್ಲೇ ವಾಗ್ವಾದ ಮಾಡುತ್ತಿದ್ದರೆ ಅದನ್ನು ಸಹಿಸಿಕೊಳ್ಳುವುದು ನನಗೆ ದೊಡ್ಡ ಚಾಲೆಂಜ್ ಆಗಬಹುದು" ಎಂದು ಹೇಳಿದ್ದರು.

ನೋವು ಹಂಚಿಕೊಂಡಿದ್ದ ಪ್ರಥಮಾ

ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿಯಾಗಿರುವ ಪ್ರಥಮಾ, ಕೇವಲ ತಾಯಿಯ ಹೆಸರಿನ ನೆರಳಿನಲ್ಲಿ ಉಳಿಯದೆ ತಮ್ಮದೇ ಆದ ಸ್ವಂತ ಪರಿಶ್ರಮದಿಂದ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡವರು.

ಈ ಬಗ್ಗೆ ವೇದಿಕೆಯಲ್ಲಿ ಮನಬಿಚ್ಚಿ ಮಾತನಾಡಿದ್ದ ಅವರು, "ನಾನು ನಟಿ, ನೃತ್ಯ ಕಲಾವಿದೆ, ಈಜುಗಾರ್ತಿ ಹಾಗೂ ಒಬ್ಬ ತಾಯಿ. ವಿನಯಾ ಪ್ರಸಾದ್ ಅವರ ಮಗಳು ಎಂದು ಜನ ನನ್ನನ್ನು ಗುರುತಿಸಿದಾಗ ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷವಾಗುತ್ತದೆ. ಆದರೆ ಕೆಲವರು ‘ಈಕೆ ಸ್ವಂತವಾಗಿ ಏನು ಸಾಧಿಸಿದ್ದಾರೆ?’ ಎಂದು ಪ್ರಶ್ನಿಸಿದಾಗ ಮನಸ್ಸಿಗೆ ಸಣ್ಣ ನೋವಾಗುತ್ತದೆ" ಎಂದು ಅಂತರಂಗದ ನೋವನ್ನು ತೋಡಿಕೊಂಡಿದ್ದರು. ಈ ಶೋನಿಂದ ಒಂದು ಹೊಸ ಗುರುತನ್ನು ಸೃಷ್ಟಿಸಿಕೊಳ್ಳುವ ಅವಕಾಶವನ್ನು ಪ್ರಥಮಾ ಮಿಸ್‌ ಮಾಡಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಟಿ ಪ್ರಥಮಾ

ಚಿಕ್ಕಂದಿನಿಂದಲೇ ಕಲೆಯ ಪರಿಸರದಲ್ಲಿ ಬೆಳೆದ ಪ್ರಥಮಾ, ಪ್ರತಿಭಾವಂತ ಕಥಕ್ ನರ್ತಕಿಯಾಗಿ ದೇಶ-ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾರೆ. ‘ಸೈ ಟು ಡ್ಯಾನ್ಸ್ ಸೀಸನ್ 2’ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಕಿರುತೆರೆ ಪ್ರವೇಶಿಸಿದ ಅವರು, ‘ಬೊಂಬೆಯಾಟವಯ್ಯ’ ಧಾರಾವಾಹಿಯಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ನಂತರ ‘ದೇವಿ’, ‘ಅಮೃತವರ್ಷಿಣಿ’ ಹಾಗೂ ಇತ್ತೀಚಿನ ‘ಕರಿಮಣಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದರು.

Bigg Boss Kannada 13: ಅಧಿಕ ಪ್ರಸಂಗ ಬೇಡ, ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್‌ ವಾರ್ನಿಂಗ್‌

‘ಕರಿಮಣಿ’ ಮುಗಿದ ಬೆನ್ನಲ್ಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದ ಪ್ರಥಮಾ ಪ್ರಸಾದ್, ಮುಖ್ಯ ಮನೆಯೊಳಗೆ ಕಾಲಿಡಲಾಗದೆ ಮೊದಲ ವಾರದಲ್ಲೇ ನಿರ್ಗಮಿಸಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.