ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಆಟದ ಸ್ವರೂಪ ಬದಲಾಗುತ್ತಿದೆ. ಸ್ಪರ್ಧಿಗಳ ನಡುವಿನ ಸ್ನೇಹ, ನಂಬಿಕೆ ಮತ್ತು ತಂತ್ರಗಾರಿಕೆಗೆ ಹೊಸ ಸವಾಲು ಎದುರಾಗಿದೆ. ಇದೀಗ ಬಿಗ್ ಬಾಸ್ ಪರಿಚಯಿಸಿರುವ ವಿಭಿನ್ನ ಟಾಸ್ಕ್ ಮನೆಯ ವಾತಾವರಣವನ್ನೇ ಬದಲಿಸುವ ಸೂಚನೆ ನೀಡಿದೆ. ಅದರಲ್ಲೂ ಗಾನವಿ ಗೌಡ (Ganavi gowda) ತೆಗೆದುಕೊಂಡ ಒಂದು ನಿರ್ಧಾರ ಗಗನ್ ಚಿನ್ನಪ್ಪ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಗ್ ಬಾಸ್ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಮನೆಯೊಳಗೆ ವಿಶೇಷ ಅತಿಥಿಯ ಆಗಮನವಾಗಿದೆ. ಅದುವೇ ಟೇಪ್ ರೆಕಾರ್ಡರ್! ಸ್ಪರ್ಧಿಗಳು ಯಾರಿಗೂ ಹೇಳಿಕೊಳ್ಳದ ತಮ್ಮ ವೈಯಕ್ತಿಕ ರಹಸ್ಯಗಳನ್ನು ಈ ಟೇಪ್ ರೆಕಾರ್ಡರ್ ಮುಂದೆ ಹಂಚಿಕೊಂಡಿದ್ದಾರೆ. ಆದರೆ ಈ ರಹಸ್ಯಗಳು ಕೇವಲ ತಮ್ಮಲ್ಲೇ ಉಳಿಯುವುದಿಲ್ಲ ಎಂಬುದು ಆಟದ ಅಸಲಿ ಟ್ವಿಸ್ಟ್ ಆಗಿದೆ.
ಬಿಗ್ ಬಾಸ್ ನೀಡಿದ ಸೂಚನೆಯಂತೆ ಪ್ರತಿಯೊಬ್ಬ ಸ್ಪರ್ಧಿಯೂ ಆಕ್ಟಿವಿಟಿ ರೂಮ್ಗೆ ತೆರಳಿ, ತಮ್ಮ ಜೀವನದ ಯಾರಿಗೂ ತಿಳಿಯದ ಸಂಗತಿಗಳನ್ನು ರೆಕಾರ್ಡ್ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಗಗನ್ ಚಿನ್ನಪ್ಪ, ಕಿರಣ್ ಶಾಸ್ತ್ರಿ, ಜಗದೀಶ್, ಆಸಿಯಾ ಫಿರ್ದೋಸ್ ಸೇರಿದಂತೆ ಹಲವು ಸ್ಪರ್ಧಿಗಳು ಭಾಗಿಯಾಗಿದ್ದಾರೆ.
ಈ ಟಾಸ್ಕ್ ಕೇವಲ ರಹಸ್ಯಗಳನ್ನು ಹಂಚಿಕೊಳ್ಳುವುದಕ್ಕೆ ಸೀಮಿತವಾಗಿಲ್ಲ. ಮನೆಯ ಮುಂದಿನ ಕ್ಯಾಪ್ಟನ್ಸಿ ಆಯ್ಕೆಯ ಮೇಲೂ ಪರಿಣಾಮ ಬೀರುವಂತಹ ವಿಶೇಷ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ. ಸ್ಪರ್ಧಿಯೊಬ್ಬರ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ನೇರವಾಗಿ ಕ್ಯಾಪ್ಟನ್ಸಿ ರೇಸ್ಗೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ.
ಗಗನ್ ಚಿನ್ನಪ್ಪನ ಸೀಕ್ರೆಟ್ ಬಯಲು ಮಾಡಿದ ಗಾನವಿ!
ಈ ಟಾಸ್ಕ್ನಲ್ಲಿ ಗಾನವಿ ಗೌಡ ಮತ್ತು ಆಸಿಯಾ ಫಿರ್ದೋಸ್ ಅವರಿಗೆ ವಿಶೇಷ ಅವಕಾಶ ನೀಡಲಾಗಿತ್ತು. ಬಜರ್ ಒತ್ತುವ ಮೂಲಕ ಮೊದಲು ಆಯ್ಕೆ ಪಡೆಯುವ ಸ್ಪರ್ಧಿಗೆ ಕ್ಯಾಪ್ಟನ್ಸಿ ಓಟಕ್ಕೆ ನೇರ ಪ್ರವೇಶ ಸಿಗಲಿದೆ. ಈ ಅವಕಾಶವನ್ನು ಕೈಚೆಲ್ಲದ ಗಾನವಿ ಗೌಡ ಮೊದಲು ಬಜರ್ ಒತ್ತಿದ್ದಾರೆ. ನಂತರ ಯಾರ ರಹಸ್ಯವನ್ನು ಬಹಿರಂಗಪಡಿಸಲು ಬಯಸುತ್ತಾರೆ ಎಂಬ ಪ್ರಶ್ನೆಗೆ ಗಗನ್ ಚಿನ್ನಪ್ಪ ಅವರ ಹೆಸರನ್ನು ಸೂಚಿಸಿದ್ದಾರೆ.
ಗಗನ್ ತಮ್ಮ ಕೈ ಮೇಲಿರುವ ಟ್ಯಾಟೂಗೆ ಸಂಬಂಧಿಸಿದಂತೆ ಈ ಹಿಂದೆ ಯಾರೊಂದಿಗೂ ಹಂಚಿಕೊಳ್ಳದ ವಿಚಾರವೊಂದನ್ನು ರೆಕಾರ್ಡ್ ಮಾಡಿದ್ದರು. ಗಾನವಿ ಅವರ ಆಯ್ಕೆಯಿಂದಾಗಿ ಗಗನ್ ಹೇಳಿಕೊಂಡಿದ್ದ ಈ ವೈಯಕ್ತಿಕ ವಿಚಾರ ಮನೆಯ ಇತರ ಸ್ಪರ್ಧಿಗಳಿಗೂ ಕೇಳಿಸುವಂತಾಗಿದೆ. ಈ ಮೂಲಕ ಗಾನವಿ ಕ್ಯಾಪ್ಟನ್ಸಿ ಓಟಕ್ಕೆ ನೇರವಾಗಿ ಅರ್ಹತೆ ಪಡೆದುಕೊಂಡಿದ್ದಾರೆ.
ಗಾನವಿ ನಿರ್ಧಾರಕ್ಕೆ ಗಗನ್ ಫುಲ್ ಗರಂ!
ಗಾನವಿ ಗೌಡ ಅವರ ನಿರ್ಧಾರ ಗಗನ್ ಚಿನ್ನಪ್ಪ ಅವರಿಗೆ ತೀವ್ರ ಅಸಮಾಧಾನ ಉಂಟುಮಾಡಿದೆ. ವಿಶೇಷವಾಗಿ ಗಾನವಿ ಅವರನ್ನು ಬಿಗ್ ಬಾಸ್ ಮನೆಯ ಮಹಾರಾಣಿಯನ್ನಾಗಿ ಮಾಡುವ ಅವಕಾಶದಲ್ಲಿ ಗಗನ್ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ಆದರೆ ಇದೀಗ ತಮ್ಮ ರಹಸ್ಯವನ್ನೇ ಗಾನವಿ ಬಹಿರಂಗಪಡಿಸಿರುವುದು ಅವರಿಗೆ ಬೇಸರ ತಂದಿದೆ.
ಪ್ರೋಮೋದಲ್ಲಿ ಗಗನ್ ತಮ್ಮ ಕೋಪವನ್ನು ಮುಚ್ಚಿಡದೆ ನೇರವಾಗಿಯೇ ಪ್ರತಿಕ್ರಿಯಿಸಿದ್ದಾರೆ. "ಇನ್ಮೇಲಿಂದ ಎಲ್ಲಿ ಇಡಬೇಕು ಅಲ್ಲಿಯೇ ಇಡುತ್ತೇನೆ. ಗೇಮ್ ಈಗ ಸ್ಟಾರ್ಟ್" ಎಂದು ಹೇಳುವ ಮೂಲಕ ಗಾನವಿ ಅವರಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: Pabbar Movie: ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಚಿತ್ರದ ಸಾಂಗ್ ಔಟ್!
ಇದುವರೆಗೆ ಮನೆಯೊಳಗೆ ಸ್ನೇಹ ಮತ್ತು ಪರಸ್ಪರ ಬೆಂಬಲದೊಂದಿಗೆ ಸಾಗುತ್ತಿದ್ದ ಆಟಕ್ಕೆ ಈ ಹೊಸ ಟಾಸ್ಕ್ ಬೇರೆಯದೇ ತಿರುವು ನೀಡಿದೆ. ಕ್ಯಾಪ್ಟನ್ಸಿ ಪಟ್ಟಕ್ಕೇರಲು ಮತ್ತೊಬ್ಬರ ವೈಯಕ್ತಿಕ ರಹಸ್ಯವನ್ನೇ ಬಹಿರಂಗಪಡಿಸಬೇಕಾದ ಪರಿಸ್ಥಿತಿ ಸ್ಪರ್ಧಿಗಳ ನಡುವೆ ನಂಬಿಕೆಯ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯಿದೆ.