ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಹುಡುಗಿಯರ ಹಿಂದೆ ಬಿದ್ದು ಬಕ್ರಾ ಆಗಬೇಡಿ..’; ಯಶಸ್ - ಸೌಂದರ್ಯ ‘ಫೇಕ್’ ‌ಲವ್‌ ಸ್ಟೋರಿಗೆ ʻಕಿಚ್ಚʼ ಸುದೀಪ್ ಸಖತ್‌ ಕ್ಲಾಸ್!

Bigg Boss Kannada 13: ʻಬಿಗ್‌ ಬಾಸ್‌ʼ ಮನೆಯಲ್ಲಿ ಸೌಂದರ್ಯ ಶೆಟ್ಟಿ ಹಾಗೂ ಯಶಸ್ ನಡುವೆ ದಿಢೀರ್ ಶುರುವಾಗಿರುವ ಲವ್‌ ಸ್ಟೋರಿ ಫೇಕ್‌ ಎಂಬ ಅನುಮಾನ ಮೂಡಿಸಿದೆ. ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಮತ್ತು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿಕೊಳ್ಳಲು ಹೆಣೆದ ತಂತ್ರವೆಂದು ವೀಕ್ಷಕರು ಆಕ್ರೋಶ ಹೊರಹಾಕಿದ್ದಾರೆ. ವಾರದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್, ಹುಡುಗಿಯರ ಬೆನ್ನುಬಿದ್ದು ಆಟ ಹಾಳುಮಾಡಿಕೊಂಡು ಬಕ್ರಾ ಆಗಬೇಡಿ ಎಂದು ಯಶಸ್ ಅವರಿಗೆ ನೇರವಾಗಿಯೇ ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ 13’ ಶೋ ಎಂದರೆ ಅಲ್ಲಿ ಮನರಂಜನೆ, ಜಗಳ, ತಂತ್ರ-ಪ್ರತಿತಂತ್ರಗಳಷ್ಟೇ ಅಲ್ಲದೆ ಲವ್‌ಸ್ಟೋರಿಗಳಿಗೂ ಬರವಿರುವುದಿಲ್ಲ. ಪ್ರತಿ ಸೀಸನ್‌ನಲ್ಲೂ ಪ್ರೇಕ್ಷಕರನ್ನು ಸೆಳೆಯಲು ಇಂತಹ ‘ಲವ್ ಟ್ರ್ಯಾಕ್’ಗಳು ಹುಟ್ಟಿಕೊಳ್ಳುವುದು ತೀರಾ ಸಾಮಾನ್ಯ. ಆದರೆ, ಪ್ರಸ್ತುತ ನಡೆಯುತ್ತಿರುವ 13ನೇ ಸೀಸನ್‌ನಲ್ಲಿ ಸ್ಪರ್ಧಿಗಳಾದ ಸೌಂದರ್ಯ ಶೆಟ್ಟಿ ಹಾಗೂ ಯಶಸ್ ನಡುವೆ ದಿಢೀರನೆ ಚಿಗುರೊಡೆದಿರುವ ಹೊಸ ಬಾಂಧವ್ಯ ವೀಕ್ಷಕರಿಗೆ ತೀರಾ ‘ಕೃತಕ’ ಎನಿಸುತ್ತಿದೆ.

ಈ ಬೆನ್ನಲ್ಲೇ, ವಾರದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಹುಡುಗಿಯರ ಹಿಂದೆ ಹೋಗಿ ಆಟದ ಹಾದಿ ತಪ್ಪುತ್ತಿದ್ದ ಯಶಸ್ ಅವರಿಗೆ ನೇರವಾಗಿಯೇ ಕಿವಿಮಾತು ಹೇಳಿದ್ದಾರೆ.

ನಾವು ಜಸ್ಟ್ ಫ್ರೆಂಡ್ಸ್‌ ಅಷ್ಟೇ

ಇತ್ತೀಚಿನ ಸಂಚಿಕೆಗಳಲ್ಲಿ ಸೌಂದರ್ಯ ಶೆಟ್ಟಿ ಮತ್ತು ಯಶಸ್ ನಡುವಿನ ನಡವಳಿಕೆ ಹಾಗೂ ಮಾತುಕತೆಗಳು ಹಠಾತ್ ಬದಲಾಗಿವೆ. ಯಶಸ್ ತಮಾಷೆಯಾಗಿ ಸೌಂದರ್ಯ ಅವರನ್ನು ‘ಸೌಂದರ್ಯಾ ಗೌಡ’ ಎಂದು ಕರೆದರೆ, ಅದಕ್ಕೆ ಪ್ರತಿಯಾಗಿ ಸೌಂದರ್ಯ ಕೂಡ ಯಶಸ್ ಅವರನ್ನು ‘ಯಶಸ್ ಶೆಟ್ಟಿ’ ಎಂದು ಕರೆದುಕೊಳ್ಳುತ್ತಿದ್ದಾರೆ.

ಹೀಗೆ ಇಬ್ಬರೂ ಪರಸ್ಪರರ ಸರ್‌ನೇಮ್‌ಗಳನ್ನು ಅದಲು-ಬದಲು ಮಾಡಿಕೊಂಡು ಕರೆಯುತ್ತಿರುವುದು ಮನೆಯವರಷ್ಟೇ ಅಲ್ಲದೆ ವೀಕ್ಷಕರಿಗೂ ಹುಬ್ಬೇರಿಸಿದೆ. ಒಂದೆಡೆ ಇಬ್ಬರ ನಡುವೆ ಪ್ರೇಮಕಥೆಯೊಂದು ಚಿಗುರುತ್ತಿರುವಂತೆ ಕಾಣಿಸುತ್ತಿದ್ದರೆ, ಮತ್ತೊಂದೆಡೆ ಸೌಂದರ್ಯ ಅವರು ಯಶಸ್ ತಮ್ಮ ‘ಕೇವಲ ಒಳ್ಳೆಯ ಗೆಳೆಯ’ ಮಾತ್ರ ಎಂದು ಹೇಳುತ್ತಿರುವುದು ಗೊಂದಲ ಮೂಡಿಸಿದೆ.

ಹೆಚ್ಚು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿಕೊಳ್ಳಲು ಗಿಮಿಕ್

ಈ ರೀತಿ ದಿಢೀರನೆ ಕಾಣಿಸಿಕೊಂಡಿರುವ ಆಪ್ತತೆಯ ಹಿಂದೆ ದೊಡ್ಡ ‘ಗೇಮ್ ಪ್ಲಾನ್’ ಅಡಗಿದೆ ಎಂಬುದು ವೀಕ್ಷಕರ ಬಲವಾದ ಅಭಿಪ್ರಾಯ. ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್‌ನಿಂದ ಬಚಾವ್ ಆಗಲು, ಹೆಚ್ಚು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿಕೊಳ್ಳಲು ಹಾಗೂ ಸಾರ್ವಜನಿಕವಾಗಿ ‘ಮೈಲೇಜ್’ ಪಡೆಯುವ ಉದ್ದೇಶದಿಂದಲೇ ಈ ಕೃತಕ ಲವ್ ಸ್ಟೋರಿಯನ್ನು ಹೆಣೆಯಲಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿವೆ. ಮನೆಯಲ್ಲಿ ಹೆಚ್ಚು ದಿನ ಉಳಿದುಕೊಳ್ಳಲು ಇಬ್ಬರೂ ಸೇರಿ ಇಂತಹ ತಂತ್ರ ರೂಪಿಸಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಕಿಚ್ಚು: 'ಘಾಟಿ' ಗಾನವಿ ಎಂಟ್ರಿಗೆ ಬೆದರದ ಯಶಸ್‌ ಕೃಷ್ಣ, ಸೈಲೆಂಟ್ ಆಗಿದ್ದ ಹುಡುಗ ಈಗ ಫುಲ್ ರೆಬೆಲ್!

ನೀವು ಯಶಸ್ ಮನದರಸಿ!

ಮತ್ತೊಂದೆಡೆ, ಈ ಸೀಸನ್‌ನಲ್ಲಿ ಯಶಸ್ ಅವರು ಆಟಕ್ಕಿಂತ ಹೆಚ್ಚಾಗಿ ಮಹಿಳಾ ಸ್ಪರ್ಧಿಗಳೊಂದಿಗೆ ಫ್ಲರ್ಟ್ ಮಾಡುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಮನೆಯಲ್ಲಿ ಆಸಿಯಾ ಹಾಗೂ ಸೌಂದರ್ಯ ಅವರೊಂದಿಗೆ ಅತಿಯಾದ ಆಪ್ತತೆ ತೋರುತ್ತಿರುವ ಯಶಸ್, ಉಳಿದ ಮಹಿಳಾ ಸ್ಪರ್ಧಿಗಳನ್ನು ‘ಅಕ್ಕ-ತಂಗಿ’ ಎಂದು ಕರೆಯುತ್ತಿರುವುದರ ಮೇಲೆ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ಹಾಸ್ಯದ ಚಟಾಕಿ ಹಾರಿಸಿದ್ದಾರೆ. ಇತ್ತೀಚಿನ ಪ್ರೋಮೋದಲ್ಲಿ, "ಆಸಿ, ಆ ಸೌಂದರ್ಯಗಿಂತ ನೀವೇ ವಾಸಿ; ಆದ್ರೆ ಏನ್ ಮಾಡೋದು ನೀವು ಯಶಸ್ ಮನದರಸಿ" ಎಂದು ಮಹಾಕವಿ ಮಂಜ ಹೇಳಿದ ಕವಿತೆಯನ್ನು ಕೇಳಿ ಸುದೀಪ್ ಹಾಗೂ ಮನೆಯ ಸದಸ್ಯರು ನಗೆಗಡಲಲ್ಲಿ ತೇಲಿದ್ದಾರೆ.

ಕೇವಲ ತಮಾಷೆಗೆ ಮಾತ್ರ ಸೀಮಿತವಾಗದೆ, ಯಶಸ್ ಅವರ ಆಟದ ವೈಖರಿಗೆ ಗಂಭೀರ ಎಚ್ಚರಿಕೆಯನ್ನೂ ನೀಡಿದ ಸುದೀಪ್, “ಹುಡುಗಿಯರ ಹಿಂದೆ ಬಿದ್ದು ನೀವು ಬಕ್ರಾ ಆಗಬೇಡಿ, ನೀವು ಬಕ್ರಾ ಆಗ್ತಾ ಇದ್ದೀರಾ...” ಎಂದು ನೇರ ಮಾತುಗಳಲ್ಲಿ ಚಾಟಿ ಬೀಸಿದ್ದಾರೆ. ಒಟ್ಟಿನಲ್ಲಿ ಲವ್ ಟ್ರ್ಯಾಕ್ ಮೂಲಕ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಗಟ್ಟಿಯಾಗಿ ನೆಲೆನಿಲ್ಲಲು ಯಶಸ್ ರೂಪಿಸಿರುವ ಈ ತಂತ್ರ ಅವರಿಗೇ ಮುಳುವಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಮುಂದಿನ ದಿನಗಳಲ್ಲಿ ಈ ಫೇಕ್‌ ಲವ್‌ ಸ್ಟೋರಿ ನಿಜವಾದ ಪ್ರೀತಿಯಾಗಿ ಬದಲಾಗಲಿದೆಯೋ ಅಥವಾ ನಾಮಿನೇಷನ್ ಗಿಮಿಕ್ ಆಗಿಯೇ ಅಂತ್ಯಗೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.