ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಬಿಗ್ ಬಾಸ್‌’ ಮನೇಲಿ ಮತ್ತೆ ‘ಬಳೆ’ ಕಿರಿಕ್; ʻನಾಲಾಯಕ್‌ ನನ್ ಮಕ್ಳ.. ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ..ʼ ಎನ್ನುತ್ತಾ ಹದ್ದುಮೀರಿ ವರ್ತಿಸಿದ ಕಿರಣ್‌ ಶಾಸ್ತ್ರಿ, ಕೆರಳಿದ ಗಗನ್‌!

‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ನಿಯಮ ಮುರಿದ ಆರೋಪ ಹೊತ್ತ ಕಿರಣ್ ಶಾಸ್ತ್ರಿ, ಉಸ್ತುವಾರಿ ತಾಂಡವ್ ಮೇಲೆ ಆಕ್ರೋಶಗೊಂಡಿದ್ದಾರೆ. ಸಹನೆ ಕಳೆದುಕೊಂಡ ಕಿರಣ್‌, "ಬಳೆ ತೊಟ್ಟುಕೊಳ್ಳಿ" ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಗಗನ್ ಖಡಕ್ ತಿರುಗೇಟು ನೀಡಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಆಟವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸ್ಪರ್ಧಿಗಳ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಆರಂಭದಿಂದಲೂ ಅಗ್ನಿಪರೀಕ್ಷೆಗಳನ್ನು ಎದುರಿಸಿ, ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತಾ ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಕಿರಣ್ ಶಾಸ್ತ್ರಿ ಅವರ ವರ್ತನೆ ಇದೀಗ ಮನೆಯೊಳಗೆ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಟಾಸ್ಕ್ ವೇಳೆ ನಿಯಮ ಉಲ್ಲಂಘಿಸಿದ ಆರೋಪ ಹೊತ್ತ ಕಿರಣ್ ಶಾಸ್ತ್ರಿ, ಉಸ್ತುವಾರಿ ಹಾಗೂ ಸಹ ಸ್ಪರ್ಧಿಗಳ ವಿರುದ್ಧ ಅಸಭ್ಯ ಪದಬಳಕೆ ಮಾಡಿ ಕೆಂಡಾಮಂಡಲವಾಗಿದ್ದು, ಇಡೀ ಮನೆಯನ್ನು ರಣರಂಗವನ್ನಾಗಿ ಪರಿವರ್ತಿಸಿದ್ದಾರೆ. ಸದ್ಯ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರುವ ಈ ಪ್ರೋಮೋ ಭಾರಿ ವೈರಲ್‌ ಆಗುತ್ತಿದೆ.

ರೂಲ್ಸ್‌ ಬ್ರೇಕ್‌ ಮಾಡಿದ ಕಿರಣ್

ಕ್ಯಾಪ್ಟನ್ಸಿ ಟಾಸ್ಕ್‌ಗೂ ಮುನ್ನ ಮನೆಯಲ್ಲಿರುವ ದೇವರ ಮೂರ್ತಿಗೆ ಕೈಮುಗಿದು, "ತಾಯಿ, ಯಾವುದೇ ಅವಘಡಗಳು ಆಗದೆ, ಯಾರಿಗೆ ಯೋಗ್ಯತೆ ಇದೆಯೋ ಅಂತಹವರಿಗೆ ಮಾತ್ರ ಗೆಲುವು ಕೊಡು" ಎಂದು ಪ್ರಾರ್ಥಿಸಿದ್ದ ಕಿರಣ್ ಶಾಸ್ತ್ರಿ, ಆಟದ ಅಖಾಡಕ್ಕೆ ಇಳಿಯುತ್ತಿದ್ದಂತೆ ಸಂಪೂರ್ಣ ಬದಲಾದರು. ಟಾಸ್ಕ್‌ನಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ಎಲ್ಲ ವಸ್ತುಗಳನ್ನು ತಮ್ಮ ಪಂಚೆಯೊಳಗೆ ತುಂಬಿಕೊಳ್ಳುತ್ತಿದ್ದಾರೆ ಎಂದು ಮನೆಯವರೆಲ್ಲರೂ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ತಾಂಡವ್, "ನಿಯಮ ಉಲ್ಲಂಘನೆಯಾಗಿರುವ ಕಾರಣ ಕಿರಣ್ ಶಾಸ್ತ್ರಿಯ ಎಲ್ಲಾ ಪಾಯಿಂಟ್ಸ್ ತೆಗೆದು ಹಾಕ್ತಾ ಇದ್ದೀವಿ" ಎಂದು ನೇರವಾಗಿ ಘೋಷಿಸಿದ್ದಾರೆ.

Bigg Boss Kannada 13: ‘ಬಿಗ್‌ ಬಾಸ್‌ ಅಗ್ನಿಪರೀಕ್ಷೆಗೆ’ ಸೆಲೆಕ್ಟ್‌ ಆದವರು ಇವರೇ; ಕನಸುಗಳಿಗೆ ಇಲ್ಲಿ age limit ಇಲ್ಲಪ್ಪೋ!

ಯೋಗ್ಯತೆ ಇಲ್ಲದ ನಾಲಾಯಕ್ ನನ್ ಮಕ್ಕಳು

ಈ ನಿರ್ಧಾರದಿಂದ ರೊಚ್ಚಿಗೆದ್ದ ಕಿರಣ್ ಶಾಸ್ತ್ರಿ, ಸಹನೆ ಕಳೆದುಕೊಂಡಿದ್ದಾರೆ. "ಟಾಸ್ಕ್ ಅರ್ಥ ಮಾಡಿಕೊಳ್ಳುವ ಕೆಪಾಸಿಟಿ ಇಲ್ಲದೆ ಬಂದಿದ್ದೀಯಾ? ದೊಡ್ಡವನಾ ನೀನು? 50 ಪೈಸೆ ಅಲ್ಲ, 10 ಪೈಸೆಗೂ ಯೋಗ್ಯತೆ ಇಲ್ಲದ ನಾಲಾಯಕ್ ನನ್ ಮಕ್ಕಳು.. ಥೂ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ" ಎಂದು ಆಕ್ರೋಶ ಹೊರಹಾಕಿದರು.‌

ನಾಲಾಯಕ್ ನನ್‌‌ ಮಕ್ಳಾ.. ಬಳೆ ಹಾಕೊಂಡು ಕೂತಿರಿ!



ಕಿರಣ್ ಅವರ ಈ ದುರ್ವರ್ತನೆಗೆ ತಕ್ಷಣವೇ ತಿರುಗೇಟು ನೀಡಿದ ಗಗನ್ ಚಿನ್ನಪ್ಪ, "ಕರೆಕ್ಟಾಗಿ ಮಾತಾಡು ಶಾಸ್ತ್ರಿ, ಹೇಳ್ತಾ ಇದ್ದೀನಿ" ಎಂದು ಖಡಕ್ ಎಚ್ಚರಿಕೆ ಕೊಟ್ಟರು. ಆದರೆ ಕಿರಣ್ ಶಾಸ್ತ್ರಿ ಮತ್ತಷ್ಟು ಕೆಣಕಿ, "ಎಲ್ಲರೂ ಬಳೆ ತೊಟ್ಕೊಂಡು ಕೂತ್ಕೊಂಡುಬಿಡ್ರಿ" ಎಂದು ಹದ್ದುಮೀರಿ ಆಡಿದ ಮಾತು ಗಗನ್ ಸೇರಿದಂತೆ ಮನೆಯ ಸದಸ್ಯರನ್ನು ಇನ್ನಿಲ್ಲದಂತೆ ಕೆರಳಿಸಿದೆ. ಇಂದಿನ (ಸೆ.15) ಸಂಚಿಕೆಯಲ್ಲಿ ಇದರ ಬಗ್ಗೆ ಪೂರ್ಣ ವಿವರ ಸಿಗಲಿದೆ.

ವಿನಯ್‌ - ಸಂಗೀತಾ ಮಧ್ಯೆ ನಡೆದಿತ್ತು ಬಳೆ ಜಗಳ

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ನಡುವೆ ನಡೆದಿದ್ದ ‘ಬಳೆ’ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿ, ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗಿತ್ತು. ಇದೀಗ ಅದೇ ಇತಿಹಾಸ ಮತ್ತೆ ಪುನರಾವರ್ತನೆಯಾಗಿದ್ದು, ಕಿರಣ್ ಶಾಸ್ತ್ರಿ ಆಡಿದ ಮಾತು ಯಾವ ರೋಚಕ ತಿರುವು ನೀಡಲಿದೆ ಮತ್ತು ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಈ ‘ಬಳೆ’ ವಿವಾದಕ್ಕೆ ಯಾವ ರೀತಿಯ ತಪರಾಕಿ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.