‘ಬಿಗ್ ಬಾಸ್ʼ ಮನೆಯಲ್ಲಿ ವಾಗ್ವಾದಗಳ ಕಾವು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ನಾಮಿನೇಷನ್ ಪ್ರಕ್ರಿಯೆ ಬೆನ್ನಲ್ಲೇ ಸ್ಪರ್ಧಿಗಳ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗ ಕದನವಾಗಿ ಮಾರ್ಪಟ್ಟಿದೆ. ಮಾಡ್ರನ್ ಮಹಾಕವಿ ಮಂಜ ಅವರ ಅತಿರೇಕದ ವರ್ತನೆ ಮತ್ತು ಕೀಳು ಮಾತುಗಳು ಮನೆಯ ಸದಸ್ಯರಷ್ಟೇ ಅಲ್ಲದೆ ವೀಕ್ಷಕರಿಗೂ ತೀವ್ರ ಅಸಮಾಧಾನ ತರಿಸಿತ್ತು.
ನಿನ್ನ ಜನ್ಮ ಜಾಲಾಡಿಬಿಡ್ತೀನಿ
ಮಾತಿಗೆ ಮುಂಚೆ "50 ಪೈಸೆಗೆ ಪ್ರಯೋಜನ ಇಲ್ಲ" ಹಾಗೂ "ಕ್ಯಾರೆಕ್ಟರ್‌ಲೆಸ್" ಎಂಬಂತಹ ನಿಂದನೀಯ ಪದಗಳನ್ನು ಬಳಸುತ್ತಿದ್ದ ಮಂಜನಿಗೆ, ನಾಮಿನೇಷನ್ ಟಾಸ್ಕ್ ವೇಳೆ ಸ್ಪರ್ಧಿ ಕಾವ್ಯ ಗೌಡ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. "ಎಲ್ಲರೂ ಕ್ಯಾರೆಕ್ಟರ್ ಲೆಸ್ಸಾ? ನೀನೊಬ್ಬ ಮಾತ್ರ ಇಲ್ಲಿ ಕ್ಯಾರೆಕ್ಟರ್ ಇರೋನಾ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಕಾವ್ಯ, ಮಂಜನ ವಿರುದ್ಧ ಸಿಡಿದೆದ್ದು "ಯಾಕಾದ್ರೂ ಹುಟ್ಟಿದ್ಯಾ ಅಂತ ನಿನ್ನ ಜನ್ಮ ಜಾಲಾಡಿಬಿಡ್ತೀನಿ" ಎಂದು ರೊಚ್ಚಿಗೆದ್ದು ಮುಖಾಮುಖಿಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಾನು ಬಂಡೆ ಅಂತ ಗೊತ್ತಾಯ್ತಾ?
ಮಂಜನ ಜಗಳದ ಬೆನ್ನಲ್ಲೇ, ಅಗ್ನಿಪರೀಕ್ಷೆ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಮತ್ತೋರ್ವ ಸ್ಪರ್ಧಿ ಕಿರಣ್ ಶಾಸ್ತ್ರಿ ಕೂಡ ಇದೀಗ ಮನೆಯ ಇತರ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ. ಕಾವ್ಯ ಗೌಡ ಅವರ ನಿಲುವನ್ನು ಪ್ರಶ್ನಿಸಿದ ಕಿರಣ್ ಶಾಸ್ತ್ರಿ, "ಕಾವ್ಯ ಅವರು ತಮಗೆ ಎಲ್ಲಿ ಬೇಳೆ ಬೇಯುತ್ತೋ ಅಲ್ಲಿ ಮಾತ್ರ ಧ್ವನಿ ಎತ್ತುತ್ತಾರೆ" ಎಂದು ನೇರವಾಗಿ ಆರೋಪಿಸಿದರು. ಇದಕ್ಕೆ ಕಿಂಚಿತ್ತೂ ಎದೆಗುಂದದೆ ಕೌಂಟರ್ ಕೊಟ್ಟ ಕಾವ್ಯ, "ನನ್ನ ತಲೆ ಗಟ್ಟಿ ಇದೆ ಅನ್ನೋ ಕಾರಣಕ್ಕೆ ಸುಮ್ಮನೆ ಹೋಗಿ ಬಂಡೆಗೆ ಚುಚ್ಚಿಕೊಳ್ಳೋ ಕ್ಯಾರೆಕ್ಟರ್ ನಂದಲ್ಲ" ಎಂದು ತಿರುಗೇಟು ನೀಡಿದರು. ಈ ಮಾತಿಗೆ ಮತ್ತಷ್ಟು ಕೆರಳಿದ ಕಿರಣ್, "ಗೊತ್ತಾಯ್ತಾ ನಾನು ಬಂಡೆ ಅಂತ? ನಾನಿಲ್ಲಿ ಬಂಡೆಯಾಗೇ ಇರ್ತೀನಿ" ಎಂದು ಕಾವ್ಯ ವಿರುದ್ಧ ಆವಾಜ್ ಹಾಕಿದರು.
Bigg Boss Kannada 13: ಅಧಿಕ ಪ್ರಸಂಗ ಬೇಡ, ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್ ವಾರ್ನಿಂಗ್
ನೀನೇ ಇಲ್ಲಿ ನೆಟ್ಟಿಗಿಲ್ಲ!
ಇವರಿಬ್ಬರ ಮಾತಿನ ಚಕಮಕಿ ನಡೆದ ಮೇಲೆ ನಂತರ ಕಿರಣ್ ಅವರ ನಡೆಯನ್ನು ವೈಷ್ಣವಿ ಕೌಂಡಿನ್ಯ ಖಂಡಿಸಿದರು. "ಇವರಿಗೆ ಇಲ್ಲಿ ಎಲ್ಲರೂ ವಿಲನ್, ತಾವೊಬ್ಬರೇ ಹೀರೋ ಅನ್ನೋ ಭಾವನೆ ತಲೆಯಲ್ಲಿ ತುಂಬಿಕೊಂಡಿದೆ" ಎಂದು ಕಿರಣ್‌ಗೆ ಚುಚ್ಚಿದರು. ಇದರಿಂದ ರೊಚ್ಚಿಗೆದ್ದ ಕಿರಣ್ ಶಾಸ್ತ್ರಿ, ನೇರವಾಗಿ ವೈಷ್ಣವಿ ಅವರ ಮೇಲೆಯೇ ಮುಗಿಬಿದ್ದರು. "ನೀನೇ ಇಲ್ಲಿ ನೆಟ್ಟಿಗಿಲ್ಲ, ಇನ್ನೊಬ್ಬರಿಗೆ ಬುದ್ಧಿ ಹೇಳೋಕೆ ಬರ್ತೀಯಾ? ನಿನಗೇನು ಶಕ್ತಿಯೂ ಇಲ್ಲ, ಸಾಮರ್ಥ್ಯವೂ ಇಲ್ಲ. ನಡಿ ಮನೆಗೆ ಅಂತ ಗೇಟ್ ಹತ್ರ ನಿಲ್ಲಿಸಿದ್ದಾರೆ.." ಎಂದು ವೈಷ್ಣವಿ ವಿರುದ್ಧ ಏಕವಚನದಲ್ಲೇ ಕಿರುಚಾಡಿ ಅಬ್ಬರಿಸಿದರು.
ವೈಷ್ಣವಿ ವಿರುದ್ಧ ಕುಹಕ ಕಿರಣ್ ಶಾಸ್ತ್ರಿ ಕಿರುಚಾಟ
ಸದ್ಯ ಕಿರಣ್ ಶಾಸ್ತ್ರಿ, ಕಾವ್ಯ ಗೌಡ ಹಾಗೂ ವೈಷ್ಣವಿ ನಡುವಿನ ಈ ಕಿತ್ತಾಟವು ಬಿಗ್ ಬಾಸ್ ಮನೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಈ ಜಗಳ ಯಾವ ಹಂತ ತಲುಪಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಈ ಎಲ್ಲದರ ಬಗ್ಗೆ ಇಂದಿನ (ಸೆ.16) ಸಂಚಿಕೆಯಲ್ಲಿ ಪೂರ್ಣ ಮಾಹಿತಿ ಸಿಗಲಿದೆ.