ʻಬಿಗ್ ಬಾಸ್ʼ ಮನೆಯಲ್ಲಿ ಅರ್ಧ ಮಂದಿ ಇನ್ನೂ ವಿಮಾನದಲ್ಲಿದ್ದರೆ, ಉಳಿದವರು ಮನೆಯಂಗಳಕ್ಕೆ ಬಂದಿಳಿದಿದ್ದಾರೆ. ಆದರೆ, ಈ ಮಧ್ಯೆ ಫ್ಲೈಟ್‌ನಲ್ಲಿರುವ ಒಂದಷ್ಟು ಮಂದಿ ಗಾಸಿಪ್ ಮಾಡಲು ಮುಂದಾಗಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಈ ಗಾಸಿಪ್ ಕುರಿತ ಚರ್ಚೆ ಕೇಳಿಬಂದಿದೆ. "ಬನ್ನಿ, ಎಲ್ಲರ ಬಗ್ಗೆ ಗಾಸಿಪ್ ಮಾಡೋಣ" ಎಂದು ಸ್ವತಃ ಪ್ರಥಮಾ ಪ್ರಸಾದ್ ಕರೆ ನೀಡಿದ್ದಾರೆ. ಹಾಗಾದರೆ, ಇವರು ಯಾರ ಬಗ್ಗೆ ಏನೆಂದು ಗಾಸಿಪ್ ಮಾಡಿದರು? ಮುಂದೆ ಓದಿ.
ತಾಂಡವ್ ರಾಮ್‌ಗೆ 'ಖಾಲಿ ಪಲಾವ್' ಎಂದಿದ್ದು ಯಾರು?
ಪ್ರಥಮಾ ಅವರು ಒಬ್ಬೊಬ್ಬರೇ ಸ್ಪರ್ಧಿಗಳ ಹೆಸರನ್ನು ಹೇಳುತ್ತಾ ಹೋದಂತೆ, ಉಳಿದವರು ಅವರಿಗೆ ಟಾಂಗ್ ಕೊಡಲು ಶುರುಮಾಡಿದ್ದಾರೆ. ಪ್ರಥಮಾ ತೆಗೆದುಕೊಂಡ ಮೊದಲ ಹೆಸರೇ ತಾಂಡವ್ ರಾಮ್ ಅವರದ್ದು. ತಾಂಡವ್ ಹೆಸರು ಕೇಳುತ್ತಿದ್ದಂತೆಯೇ, ವೈಷ್ಣವಿ ಕೌಂಡಿನ್ಯ ಅವರು "ಬುದ್ಧಿ" ಎಂದು ಹೇಳಿದ್ದಾರೆ. ಆದರೆ ಕಿರಣ್ ಶಾಸ್ತ್ರಿ ಮಾತ್ರ, "ತಾಂಡವ್ ಖಾಲಿ ಪಲಾವ್" ಎಂದಿದ್ದಾರೆ. ಅದಕ್ಕೆ ಪ್ರಥಮಾ, "ಯಾಕೆ ಆ ರೀತಿ ಹೇಳುತ್ತಿದ್ದೀರಿ?" ಎಂದು ಕೇಳಿದಾಗ, "ತಾಂಡವ್ ತಮ್ಮನ್ನು ತಾವು ಪಲಾವ್ ಎಂದುಕೊಂಡಿದ್ದಾರೆ, ಆದರೆ ಅವರು ಖಾಲಿ ಪಲಾವ್. ಅವರಲ್ಲಿ ಸ್ಪಿರಿಟ್ ಇಲ್ಲ, ಬರೀ ತಮ್ಮ ಸ್ನೇಹಿತರ ಜೊತೆಗಷ್ಟೇ ಮಾತನಾಡುತ್ತಾರೆ" ಎಂದು ಕಿರಣ್ ಶಾಸ್ತ್ರಿ ಉತ್ತರಿಸಿದ್ದಾರೆ.
ಕಡಲೆಬೀಜ ಇಲ್ಲದಿರುವ ಚಿತ್ರಾನ್ನ
ಅವರು ಬೇರೆಯವರ ಜೊತೆ ಬೆರೆಯುತ್ತಿಲ್ಲ ಎಂಬ ಮಾತನ್ನು ಪ್ರಥಮಾ ಪ್ರಸಾದ್ ಕೂಡ ಒಪ್ಪಿಕೊಳ್ಳುತ್ತಾರೆ. ನಂತರ ಗಗನ್ ಚಿನ್ನಪ್ಪ ಅವರ ಹೆಸರನ್ನು ಪ್ರಥಮಾ ಪ್ರಸ್ತಾಪಿಸುತ್ತಾರೆ. ಆಗ ಲಿಖಿತ್ ಗೌಡ ಅವರು, "ಕೊಳೆತ ಟೊಮೇಟೊ" ಎಂದು ಹೇಳಿದ್ದಾರೆ. ಅದಕ್ಕೆ ಅಲ್ಲಿದ್ದವರೆಲ್ಲ ನಕ್ಕಿದ್ದಾರೆ. ಆಗಲೂ ಮುಂದುವರಿದು ಮಾತನಾಡುವ ಕಿರಣ್ ಶಾಸ್ತ್ರಿ, "ಗಗನ್ ಅವರ ಬಳಿಯೂ ಸ್ಪಿರಿಟ್ ಇಲ್ಲ. ಏನಾದರೂ ಮಾಡುತ್ತೇನೆ ಎಂಬ ಛಲವೇ ಇಲ್ಲ. ಬರೀ ಜಡ್ಜ್ ಆಗುತ್ತೇನೆ, ತೀರ್ಪು ಕೊಡುತ್ತೇನೆ ಅಂತಲೇ ಇರುತ್ತಾರೆ" ಎಂದಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಲಿಖಿತ್, "ಅವರು ಕಡಲೆಬೀಜ ಇಲ್ಲದಿರುವ ಚಿತ್ರಾನ್ನ" ಎಂದು ಕಾಲೆಳೆದಿದ್ದಾರೆ.
ನಂತರ ಪ್ರಥಮಾ ಅವರು ಕಾವ್ಯ ಗೌಡ ಅವರ ಹೆಸರನ್ನು ಹೇಳಿದ್ದಾರೆ. ಅದಕ್ಕೆ ಕಿರಣ್ ಶಾಸ್ತ್ರಿ, "ಯಾರದು ಕಾವ್ಯ?" ಎಂದು ಪ್ರಶ್ನಿಸಿದ್ದಾರೆ. ಆಗ ಧನುಷ್, "ಕಾವ್ಯಾಗೆ ರೂಲ್ಸ್ ಫಾಲೋ ಮಾಡೋಕೆ ಬರಲ್ಲ" ಎಂದಿದ್ದಾರೆ. "ನಾನಂತೂ ಅವರನ್ನು ನೋಡಿಯೇ ಇಲ್ಲ" ಎಂದು ಕಿರಣ್ ಶಾಸ್ತ್ರಿ ಹೇಳಿದ್ದಾರೆ. ಇದು ಇಂದಿನ (ಸೆ.8) ಸಂಚಿಕೆಯ ಪ್ರೋಮೋದಲ್ಲಿ ಕಂಡುಬಂದ ದೃಶ್ಯವಾಗಿದೆ.