ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಸ್ನಾನ ಮಾಡಲ್ಲ..ʼ ಎಂದು ಹಿಯಾಳಿಸಿದವರಿಗೆ ʻಬಿಗ್ ಬಾಸ್ʼ ಕುಮಾರಿ ಖಡಕ್ ಉತ್ತರ; ಆರೋಗ್ಯ ಸಮಸ್ಯೆ ಬಗ್ಗೆ ಬಿಚ್ಚಿಟ್ಟ ಸತ್ಯವೇನು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಸ್ಪರ್ಧಿಯಾಗಿದ್ದ ಲಾವಣ್ಯಾ ಕುಮಾರಿ ತಮ್ಮ ವಿರುದ್ಧದ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಟ್ರೋಲ್‌ಗಳಿಂದ ತುಂಬಾ ನೊಂದಿರುವ ಅವರು, ತಾವು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿ, ಕೆಲವೇ ದಿನಗಳಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದ ಲಾವಣ್ಯಾ ಕುಮಾರಿ, ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು ಹಾಗೂ ವೈಯಕ್ತಿಕ ಆರೋಪಗಳಿಗೆ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಾವು ಸರಿಯಾಗಿ ಸ್ನಾನ ಮಾಡುತ್ತಿರಲಿಲ್ಲ ಎಂಬ ಟೀಕೆಗಳಿಗೆ ಹಾಗೂ ತಮ್ಮ ಮುಗ್ಧತೆಯನ್ನು ನಾಟಕವೆಂದು ಬಿಂಬಿಸಿದವರಿಗೆ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿ ಲಕ್ಷ್ಮೀ ಗೌಡ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕುಮಾರಿ ಅವರು ಬಿಗ್ ಬಾಸ್ ಮನೆಯಲ್ಲಿ ಸರಿಯಾಗಿ ಸ್ನಾನವೇ ಮಾಡುತ್ತಿರಲಿಲ್ಲ, ಅವರು ಅಪರೂಪಕ್ಕೊಮ್ಮೆ ಸ್ನಾನ ಮಾಡಿದರೆ ಮನೆಯವರೆಲ್ಲಾ ಹಬ್ಬದಂತೆ ಸಂಭ್ರಮಿಸುತ್ತಿದ್ದರು ಹಾಗೂ ಅವರ ವರ್ತನೆ ತಮಗೆ ಅಸಹ್ಯ ಎನಿಸಿತ್ತು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಲಾವಣ್ಯಾ ಅವರ ವಿಡಿಯೋಗಳಿಗೆ ಅನೇಕರು "ಇವತ್ತಾದರೂ ಸ್ನಾನ ಮಾಡಿದ್ದೀಯಾ?" ಎಂದು ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಲಾವಣ್ಯಾ, ವಯಸ್ಸಿನಲ್ಲಿ ದೊಡ್ಡವರಾದವರಿಗೆ 'ಅಕ್ಕ' ಎಂಬ ಸ್ಥಾನ ಮತ್ತು ಮರ್ಯಾದೆ ನೀಡಿದ್ದೇನೆ, ಆದರೆ ಅವರು ದೊಡ್ಡತನ ತೋರಿಸಬೇಕೇ ಹೊರತು ಸಣ್ಣ ಬುದ್ಧಿ ತೋರಿಸಬಾರದು ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅಲ್ಲದೆ, ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ಅರಿವಿರಲಿ ಎಂದು ಕಿವಿಮಾತು ಹೇಳಿದ್ದಾರೆ.

ಆರೋಗ್ಯ ಸಮಸ್ಯೆ ಬಿಚ್ಚಿಟ್ಟ ಕುಮಾರಿ

ತಾವು ಸ್ನಾನ ಮಾಡದಿರಲು ಇದ್ದ ನಿಜವಾದ ಕಾರಣವನ್ನು ಬಿಚ್ಚಿಟ್ಟಿರುವ ಲಾವಣ್ಯಾ, ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ. "ಒಂದು ಹುಡುಗಿಯಾಗಿ ನಾಚಿಕೆ ಬಿಟ್ಟು ಈ ಸತ್ಯ ಹೇಳುತ್ತಿದ್ದೇನೆ. ಬಿಗ್ ಬಾಸ್ ಮನೆಯಿಂದ ಹೊರಬಂದ ದಿನದಿಂದ ದೀಪಾವಳಿ ವಿಡಿಯೋ ಮಾಡಲು ಶುರುಮಾಡುವವರೆಗೂ ನನಗೆ ಸ್ನಾನ ಮಾಡಿಸಿ ಆರೈಕೆ ಮಾಡಿದ್ದು ನನ್ನ ತಾಯಿ. ನನ್ನ ದೇಹ ಅಷ್ಟರಮಟ್ಟಿಗೆ ನಿತ್ರಾಣವಾಗಿತ್ತು, ಮೈ ಮೇಲೆ ನೀರು ಬಿದ್ದರೆ ಇಡೀ ದೇಹ ನಡುಗುತ್ತಿತ್ತು. ನನ್ನ ಆರೋಗ್ಯ ನನಗೆ ಈ ರೀತಿ ಮುಳುವಾಗುತ್ತದೆ ಎಂದು ಮೊದಲೇ ತಿಳಿದಿದ್ದರೆ ನಾನು ಖಂಡಿತವಾಗಿಯೂ ಆ ದೊಡ್ಮನೆಗೆ ಕಾಲಿಡುತ್ತಿರಲಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಕುಮಾರಿಗೆ ಚೆಕ್‌ ಎಂದರೆ ಗೊತ್ತಿಲ್ವಾ?

ಇದೇ ವೇಳೆ, ತಮಗೆ 'ಚೆಕ್' ಅಂದರೆ ಏನು ಎಂಬುದೇ ಗೊತ್ತಿಲ್ಲ ಎಂದು ನಾಟಕವಾಡಿದ್ದಾರೆ ಎಂಬ ಆರೋಪಕ್ಕೂ ಲಾವಣ್ಯಾ ಸ್ಪಷ್ಟನೆ ನೀಡಿದ್ದಾರೆ. "ನಾನು ವೇದಿಕೆಯ ಮೇಲೆ ಕೇಳಿದ್ದು, ಈ ಚೆಕ್ಕನ್ನು ಬ್ಯಾಂಕಿಗೆ ಕೊಟ್ಟರೆ ತಕ್ಷಣ ಹಣ ಕೊಡುತ್ತಾರಾ ಅಥವಾ ಚೆಕ್ ಕೊಟ್ಟವರ ಬಳಿಯೇ ನೀಡಿ ಹಣವನ್ನು ಪಡೆದುಕೊಳ್ಳಬೇಕಾ ಎಂಬುದನ್ನು ಮಾತ್ರ. ಆದರೆ ನಾನು ಚೆಕ್ ಎಂದರೆ ಏನು ಎಂದು ಕೇಳಿಯೇ ಇಲ್ಲ. ನನ್ನ ಜೀವನದಲ್ಲಿ ನನಗಿರುವುದು ನನ್ನ ತಾಯಿ ಮಾತ್ರ, ಆ ತಾಯಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಅಷ್ಟೊಂದು ಕೀಳು ಮಟ್ಟದ ನಾಟಕವನ್ನು ಎಂದಿಗೂ ಮಾಡಿಲ್ಲ" ಎಂದು ತಮ್ಮ ಮೇಲಿನ ಆರೋಪಗಳನ್ನು ಕುಮಾರಿ ತಳ್ಳಿಹಾಕಿದ್ದಾರೆ.

ʼಸ್ನಾನ ಮಾಡಲ್ಲ...ʼ ಅಂದೋರಿಗೆ ಟಾಂಗ್‌ ಕೊಟ್ಟ ಕುಮಾರಿ



ತಮ್ಮ ವಿರುದ್ಧ ಇನ್ನು ಮುಂದೆ ಎಷ್ಟೇ ಕೆಟ್ಟದಾಗಿ ಮಾತನಾಡಿದರೂ ಅದನ್ನು ಎದುರಿಸಲು ತಾವು ಸಿದ್ಧರಿರುವುದಾಗಿ ಲಾವಣ್ಯಾ ಹೇಳಿದ್ದಾರೆ. ತಾವು ಈ ಎಲ್ಲಾ ಸತ್ಯಗಳನ್ನು ಬಹಿರಂಗಪಡಿಸುವ ಮೊದಲೇ ತಮ್ಮನ್ನು ನಂಬಿ, ಪ್ರೀತಿ ತೋರಿಸಿ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಧನ್ಯವಾದ ಹೇಳುವುದು ತುಂಬಾ ಚಿಕ್ಕ ಪದವಾಗುತ್ತದೆ. ಅಭಿಮಾನಿಗಳ ಈ ಪ್ರೀತಿ ಮತ್ತು ಋಣವನ್ನು ಜೀವನಪರ್ಯಂತ ಮರೆಯುವುದಿಲ್ಲ ಎಂದು ಲಾವಣ್ಯಾ ಕುಮಾರಿ ಭಾವುಕರಾಗಿ ಹೇಳಿದ್ದಾರೆ.