ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮನೆಯಲ್ಲಿ ಇದೀಗ ಕಾವೇರಿದ ಜಗಳ ಹಾಗೂ ವಾಕ್ಸಮರ ತಾರಕಕ್ಕೇರಿದೆ. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯರು ‘ಮಾಡರ್ನ್ ಮಹಾಕವಿ’ ಖ್ಯಾತಿಯ ಮಂಜುನಾಥ್ ಅವರನ್ನು ಎಲಿಮಿನೇಷನ್ ಪಟ್ಟಿಗೆ ಗುರಿಯಾಗಿಸುತ್ತಿದ್ದಂತೆ, ಮನೆಯೊಳಗೆ ಹೈ-ವೋಲ್ಟೇಜ್ ಡ್ರಾಮಾ ಸೃಷ್ಟಿಯಾಗಿದೆ. ಸಹ-ಸ್ಪರ್ಧಿಗಳು ಒಟ್ಟಾಗಿ ತನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನೇರ ಆರೋಪ ಹೊರಿಸಿದ ಮಂಜ, ಇಡೀ ಮನೆಯ ಸದಸ್ಯರ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ.
ಮನೆಯಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ
ನಾಮಿನೇಷನ್ ವೇಳೆ ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಬಹಿರಂಗವಾಗಿಯೇ ಸಿಡಿದೆದ್ದ ಮಂಜ, "ಇಲ್ಲಿ ಪ್ರತಿಯೊಂದನ್ನೂ ಟಾರ್ಗೆಟ್ ಮಾಡಲಾಗ್ತಿದೆ. ಮನೆಯೊಳಗೆ ಸ್ಪಷ್ಟವಾಗಿ ಪಾರ್ಷಿಯಾಲಿಟಿ ನಡೀತಾ ಇದೆ. ಏನ್ ಮಾತಾಡ್ತೀರಾ ನೀವು? ಅಷ್ಟೇ ಅಲ್ಲ, ಅಲ್ಲಿ ನೀವು ಹಿಂಬದಿಯಲ್ಲಿ ಮಾತಾಡಿಕೊಳ್ಳುತ್ತಿರುವುದನ್ನೆಲ್ಲ ನಾವು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇವೆ. ಇಂಥವರು ಈ ಮನೆಯಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ, ಯೋಗ್ಯರೇ ಅಲ್ಲ" ಎಂದು ಉಳಿದ ಸ್ಪರ್ಧಿಗಳ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದರು.
ನಾನಿಲ್ಲಿಂದ ಟ್ರೋಫಿ ಗೆದ್ದುಕೊಂಡೇ ಹೋಗೋದು
ವಾದ-ವಿವಾದಗಳು ಹೆಚ್ಚಾಗುತ್ತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಮಂಜ, "ಬರೀ ನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ? ಇಲ್ಲಿರೋ ಪ್ರತಿಯೊಬ್ಬರೂ ಕೇವಲ ಚಪ್ಪಾಳೆ ತಟ್ಟೋದಕ್ಕಷ್ಟೇ ಲಾಯಕ್ಕು. ಅಂಥವರನ್ನೆಲ್ಲ ಚಪ್ಪಾಳೆ ತಟ್ಟೋ ಜಾಗಕ್ಕೆ ರವಾನಿಸಿಬಿಡಿ. ಅಯ್ಯೋ... ಇಲ್ಲಿರೋ ಒಬ್ಬರಿಂದಲೂ ಬಿಗ್ ಬಾಸ್ ಶೋಗೆ ಕಿಂಚಿತ್ತೂ ಪ್ರಯೋಜನವಿಲ್ಲ" ಎಂದು ವ್ಯಂಗ್ಯವಾಡಿ ಲೇವಡಿ ಮಾಡಿದರು. ಸ್ಪರ್ಧಿಗಳ ಯಾವುದೇ ಟಾರ್ಗೆಟ್‌ಗೆ ಜಗ್ಗದ ಅವರು, "ನಿಮ್ಮನ್ನೆಲ್ಲ ಒಬ್ಬೊಬ್ಬರಾಗಿ ಮನೆಯಿಂದ ಆಚೆ ಕಳಿಸಿ, ನಾನಿಲ್ಲಿಂದ ಟ್ರೋಫಿ ಗೆದ್ದುಕೊಂಡೇ ಹೋಗೋದು" ಎಂದು ಇಡೀ ಮನೆಮಂದಿಗೆ ನೇರ ಸವಾಲು ಎಸೆದಿದ್ದಾರೆ. ಎಲ್ಲರ ಮುಂದೆ ತೊಡೆ ತಟ್ಟಿದ್ದಾರೆ. ಈ ಪ್ರೋಮೋ ನೋಡಿದ ವೀಕ್ಷಕರು ಹಿಂದಿನ ಸೀಸನ್‌ನ ರಜತ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಇಂದಿನ ಸಂಚಿಕೆಯ ಟಾಸ್ಕ್ ವೇಳೆ ಸದಸ್ಯರು ಪ್ರದರ್ಶಿಸಿದ ಪಕ್ಷಪಾತದ ವಿರುದ್ಧ ಮಂಜುನಾಥ್ ಎತ್ತಿದ ದನಿ ಹಾಗೂ ಅದಕ್ಕೆ ಪ್ರತಿಯಾಗಿ ಇಡೀ ಮನೆಯ ಸದಸ್ಯರ ನಡುವೆ ನಡೆದ ಈ ಭಾರೀ ಮುಖಾಮುಖಿ, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸದ್ಯ ಬಿಗ್ ಬಾಸ್ ಮನೆಯ ಈ ರಣರಂಗದ ಕ್ಷಣಗಳು ಇಂದಿನ (ಸೆ.10) ಸಂಚಿಕೆಗೆ ಭರ್ಜರಿ ಮನರಂಜನೆಯ ಕಿಚ್ಚು ಹಚ್ಚಿವೆ.