‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ ರಂಗೇರುತ್ತಿರುವ ಬೆನ್ನಲ್ಲೇ, ಜೊತೆಗೆ ಗಣೇಶ ಹಬ್ಬದ ಈ ಹೊತ್ತಿನಲ್ಲಿ ದೊಡ್ಮನೆಯೊಳಗೆ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಮುಖ ಸ್ಪರ್ಧಿ ನಿರ್ದೇಶಕ, ನಟ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದು, ಅವರನ್ನು ತುರ್ತಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯೊಳಗಿನ ತೀವ್ರ ಮಾನಸಿಕ ಒತ್ತಡ ಹಾಗೂ ಆಟ ಕಠಿಣ ವಾತಾವರಣವೇ ಅವರ ಅನಾರೋಗ್ಯಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಮಾನಸಿಕ ಒತ್ತಡ ಕಾರಣ?
ಈಗಾಗಲೇ ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ಓಂ ಪ್ರಕಾಶ್ ರಾವ್ ಅವರು ದೊಡ್ಮನೆಯಲ್ಲಿ ಕುಂಟುತ್ತಲೇ ಓಡಾಡುತ್ತಿದ್ದರು. ಜೊತೆಗೆ ಮನೆಯಲ್ಲಿ ಈ ಬಾರಿ ಸ್ಪರ್ಧಿಗಳಿಗೆ ನೀಡಲಾಗಿರುವ ವಿಮಾನದ ಸೆಟ್ ಒಳಗಿನ ಪರಿಸರದಲ್ಲಿಯೇ ಅವರು ಹೆಚ್ಚು ಕಾಲ ಕಳೆಯುವ ಅನಿವಾರ್ಯತೆ ಎದುರಾಗಿತ್ತು. ಇಂದು ತೀವ್ರ ಮಾನಸಿಕ ಒತ್ತಡ ಮತ್ತು ಆತಂಕಕ್ಕೊಳಗಾದ ಕಾರಣ ಅವರ ಆರೋಗ್ಯ ಸ್ಥಿತಿ ಏರುಪೇರಾಗಿದ್ದು, ತಕ್ಷಣವೇ ಎಚ್ಚೆತ್ತ ಬಿಗ್ ಬಾಸ್ ಟೀಮ್ ಅವರನ್ನು ಚಿಕಿತ್ಸೆಗಾಗಿ ಹೊರಗೆ ಕಳುಹಿಸಿದೆ.
ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಓಂ
ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಓಂ ಪ್ರಕಾಶ್ ರಾವ್ ಅವರನ್ನು ಕಾಡುಮನೆ ಎಸ್ಟೇಟ್ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಸಂಜೆಯ ವೇಳೆಗೆ ತಮ್ಮ ನಿವಾಸಕ್ಕೆ ಮರಳಿದ್ದು, ಶೀಘ್ರದಲ್ಲೇ ಅವರ ಫ್ಯಾಮಿಲಿ ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆ ಹಾಗೂ ಸೂಕ್ತ ತಪಾಸಣೆಗಾಗಿ ಅವರ ರೆಗ್ಯುಲರ್ ಆಗಿ ತೋರಿಸುವ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ವೈದ್ಯರ ಅಧಿಕೃತ ವರದಿಗಾಗಿ ಸದ್ಯ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಾಯುತ್ತಿದ್ದಾರೆ.
ಮತ್ತೆ ದೊಡ್ಮನೆಗೆ ಹೋಗ್ತಾರಾ ಓಂ?
ಈ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 4’ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಓಂ ಪ್ರಕಾಶ್ ರಾವ್ ಅವರು, ಆಗಲೂ ಇದೇ ರೀತಿ ತೀವ್ರ ಅನಾರೋಗ್ಯದ ಕಾರಣದಿಂದಲೇ ಅರ್ಧಕ್ಕೆ ಮನೆಯಿಂದ ಹೊರಬಂದಿದ್ದರು. ಇದೀಗ ಸೀಸನ್ 13 ರಲ್ಲೂ ಆರಂಭಿಕ ಹಂತದಲ್ಲೇ ಮತ್ತೆ ಆರೋಗ್ಯ ಸಮಸ್ಯೆ ಎದುರಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಚಿಕಿತ್ಸೆಯ ನಂತರ ಚೇತರಿಸಿಕೊಂಡು ಅವರು ಮತ್ತೆ ದೊಡ್ಮನೆಗೆ ಮರಳಲಿದ್ದಾರಾ ಅಥವಾ ಈ ಬಾರಿಯೂ ಅವರ ಬಿಗ್ ಬಾಸ್ ಪಯಣ ಅರ್ಧಕ್ಕೆ ಮೊಟಕುಗೊಳ್ಳಲಿದೆಯಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.