‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಸ್ಪರ್ಧಿಯಾಗಿ ಮನೆಮಾತಾಗಿರುವ ನಟ ತಾಂಡವ್ ರಾಮ್, ಇದೀಗ ಬೆಳ್ಳಿತೆರೆಯಲ್ಲೂ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿರುವ ಬೆನ್ನಲ್ಲೇ, ನಾಯಕ ನಟನಾಗಿ ಅವರು ಅಭಿನಯಿಸಿರುವ ‘ಬಂಬೂ ಸವಾರಿ’ ಚಿತ್ರದ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಸ್ಯಾಂಡಲ್ವುಡ್ನಲ್ಲಿ ಯಶಸ್ವಿ ಚಿತ್ರಗಳ ಸಾಲು ಮುಂದುವರಿದಿರುವ ಹೊತ್ತಲ್ಲೇ, ಚಿತ್ರತಂಡ ಮೊದಲ ಹೆಜ್ಜೆಯಾಗಿ ಬಿಡುಗಡೆ ಮಾಡಿರುವ ಹೊಸ ಹಾಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ನಾಗೇಂದ್ರ ಪ್ರಸಾದ್ ಬರೆದ ಹಾಡು ಇದು
‘ಬಂಬೂ ಸವಾರಿ’ ಚಿತ್ರದ ‘ಗೋವಿಂದಾ.. ಎಂಟ್ರಾನ್ ಸಾಮಿ ಗೋವಿಂದಾ...’ ಎಂಬ ವಿಶಿಷ್ಟ ಸಾಹಿತ್ಯದ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಂಗೀತಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇಂದಿನ ಯುವಪೀಳಿಗೆಯ ಪ್ರೇಮ, ವಿರಹ ಹಾಗೂ ಪ್ರಾಕ್ಟಿಕಲ್ ಲವ್ ಲೈಫ್ ಫಿಲಾಸಫಿಯನ್ನು ವ್ಯಂಗ್ಯ ಹಾಗೂ ಹಾಸ್ಯದ ಲೇಪನದೊಂದಿಗೆ ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಆಡುಮಾತಿನ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಖ್ಯಾತ ಸಾಹಿತಿ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಆಕರ್ಷಕ ಸಾಹಿತ್ಯ ರಚಿಸಿದ್ದು, ಎ.ಎಂ. ನೀಲ್ ಅವರ ಸಂಗೀತ ಸಂಯೋಜನೆ ಮತ್ತು ಜಿ. ನಂದಕುಮಾರ್ ಅವರ ನೃತ್ಯ ನಿರ್ದೇಶನ ಹಾಡಿನ ತೂಕವನ್ನು ಹೆಚ್ಚಿಸಿದೆ.
Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಹೆಜ್ಜೆ ಹಾಕಿದ ಗಿಲ್ಲಿ ನಟ
ಸದ್ಯ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋದಲ್ಲಿ ನಾಯಕ ತಾಂಡವ್ ರಾಮ್ ಅವರೊಂದಿಗೆ ದೀಪಕ್, ವರ್ಧನ್, ಗಿಲ್ಲಿ ನಟ ಹಾಗೂ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಸ್ವತಃ ಹೆಜ್ಜೆ ಹಾಕಿರುವುದು ವಿಶೇಷ. ಕಥೆಯ ಸಂದರ್ಭಕ್ಕೆ ತಕ್ಕಂತೆ ಮೂಡಿಬರುವ ಈ ಹಾಡು ಕೇಳುಗರಿಗೆ ಮಜಾ ನೀಡುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಕಮೆಂಟ್ಗಳು ಹರಿದುಬರುತ್ತಿವೆ.
ಇದೇ ವರ್ಷ ಸಿನಿಮಾ ರಿಲೀಸ್
ಉದಯದೀಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಆರ್ಯ ಎಂ. ಮಹೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎಸ್. ವೆಂಕಟೇಶ್ ಬಂಡವಾಳ ಹೂಡಿದ್ದು, ಜಿ. ಮುನಿರಾಜು ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ತಾಂಡವ್ ರಾಮ್ ಜತೆಗೆ ವರ್ಧನ್, ದೀಪಕ್, ಗಿಲ್ಲಿ ನಟ, ಡಾ. ವಿ. ನಾಗೇಂದ್ರ ಪ್ರಸಾದ್, ಆದ್ಯಪ್ರಿಯ, ಬಿಂದು ನಾಗರಾಜ್, ಅನುಪ್ರೇಮ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ತಾರಾಗಣವಿದೆ. ಪ್ರಸ್ತುತ ‘ಬಂಬೂ ಸವಾರಿ’ ಚಿತ್ರದ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದೇ ವರ್ಷ ಚಿತ್ರವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ಧತೆ ನಡೆಸುತ್ತಿದೆ.