ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ʻನನ್ನಿಂದ ಒಳ್ಳೆತನ EXPECT ಮಾಡ್ಬೇಡ್ರೋ..ʼ; ವಾಪಸ್‌ ಬಂದ ತಾಂಡವ್‌ಗೆ ಪ್ರಮೋಷನ್, ಗಗನ್‌ ಕಿಲಕಿಲ, ಮಿಕ್ಕವರು ವಿಲವಿಲ!

Thandav Ram Re-Entry: ನಟ ತಾಂಡವ್‌ ರಾಮ್‌ ಅವರ ರೀ-ಎಂಟ್ರಿ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸಂಚಲನ ಮೂಡಿದೆ. ಮೂರನೇ ವಾರ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್, ಇದೀಗ ನೇರವಾಗಿ ಕ್ಯಾಪ್ಟನ್ ಆಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತಮ್ಮಿಂದ ಇನ್ಮುಂದೆ ಒಳ್ಳೆತನ ನಿರೀಕ್ಷಿಸಬೇಡಿ ಎಂದು ಎಚ್ಚರಿಸಿರುವ ಅವರು, ತಾಯಾಣೆ ನ್ಯಾಯ ಒದಗಿಸುವುದಾಗಿ ಘರ್ಜಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ವೇದಿಕೆಯಲ್ಲಿ ಮಹತ್ತರ ತಿರುವೊಂದು ಎದುರಾಗಿದ್ದು, ವೀಕ್ಷಕರಿಗೆ ಹಾಗೂ ಮನೆಯ ಸ್ಪರ್ಧಿಗಳಿಗೆ ಬಿಗ್‌ ಶಾಕ್‌ ಸಿಕ್ಕಿದೆ. ಮೂರನೇ ವಾರದ ಮಿಡ್‌ವೀಕ್ ಎಮರ್ಜೆನ್ಸಿ ಎಕ್ಸಿಟ್ ಪ್ರಕ್ರಿಯೆಯಲ್ಲಿ ಮನೆಯಿಂದ ಹೊರಬಿದ್ದಿದ್ದ ನಟ ತಾಂಡವ್ ರಾಮ್, ಇದೀಗ ನಾಲ್ಕನೇ ವಾರದಲ್ಲಿ ಕೇವಲ ಸ್ಪರ್ಧಿಯಾಗಿ ಮಾತ್ರವಲ್ಲದೆ, ಇಡೀ ಮನೆಯ ಕ್ಯಾಪ್ಟನ್ಸಿಯನ್ನೇ ‘ಹೈಜಾಕ್’ ಮಾಡುವ ಮೂಲಕ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಒಳಗೆ ಕಾಲಿಡುತ್ತಲೇ ಸಹಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆಯನ್ನೂ ರವಾನಿಸಿರುವ ಅವರು, ದೊಡ್ಮನೆಯಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ವಾಪಸ್‌ ಬಂದ ತಾಂಡವ್‌ ರಾಮ್

3ನೇ ವಾರದಲ್ಲಿ ನಡೆದ ಅನಿರೀಕ್ಷಿತ ಎಮರ್ಜೆನ್ಸಿ ಎಲಿಮಿನೇಷನ್‌ನಲ್ಲಿ ಕ್ಯಾಪ್ಟನ್ ಸಂಗೀತಾ ಭಟ್ ಅವರನ್ನು ಹೊರತುಪಡಿಸಿ ಉಳಿದೆಲ್ಲರೂ ನಾಮಿನೇಟ್ ಆಗಿದ್ದರು. ಕಡೆಗೆ ಕಡಿಮೆ ಮತಗಳ ಆಧಾರದ ಮೇಲೆ ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದರು. ಈ ವೇಳೆ ಅವರ ಬೆಸ್ಟ್‌ ಫ್ರೆಂಡ್‌ ಗಗನ್ ಚಿನ್ನಪ್ಪ, ಕಾವ್ಯಾ ಗೌಡ ಹಾಗೂ ಸಂಗೀತಾ ಭಟ್ ಕಣ್ಣೀರಿಟ್ಟಿದ್ದರು. ವಿಶೇಷವಾಗಿ ಗಗನ್, ತಾಂಡವ್‌ನನ್ನು ಹೊರಗೆ ಕಳುಹಿಸದಂತೆ ಬಿಗ್ ಬಾಸ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದರು.‌

Bigg Boss Kannada 13: ತಾಂಡವ್-ಗಗನ್‍‍ಗೆ ಕಿಚ್ಚನ ತರಾಟೆ! ಜಗದೀಶ್ ವಿಚಾರದಲ್ಲಿ ಗರಂ ಏಕೆ?

ಆದರೆ ವಾರಾಂತ್ಯದ ‘ಕಿಚ್ಚನ ಪಂಚಾಯಿತಿ’ ವೇಳೆ ನಿರೂಪಕ ಸುದೀಪ್ ಅವರು, ‘ನಿಮ್ಮ ಆಟ ಇನ್ನೂ ಮುಗಿದಿಲ್ಲ, ಒಳಗೆ ಹೋಗಿ’ ಎಂದು ತಾಂಡವ್‌ಗೆ ಸೂಚಿಸಿದ್ದರು. ಅಲ್ಲಿಂದ ಸುಮಾರು ನಾಲ್ಕೈದು ದಿನಗಳ ಕಾಲ ಸೀಕ್ರೆಟ್ ರೂಮ್‌ನಲ್ಲಿದ್ದಾರೋ ಅಥವಾ ಎಲ್ಲಿದ್ದಾರೋ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬೆನ್ನಲ್ಲೇ, ತಾಂಡವ್ ಅವರ ಈ ಮರುಪ್ರವೇಶ ಅದ್ಧೂರಿಯಾಗಿ ನಡೆದಿದೆ.

ನ್ಯಾಯ, ನ್ಯಾಯ, ನಮ್ಮ ತಾಯಾಣೆ ನ್ಯಾಯ

ಈ ಅಚ್ಚರಿಯ ಎಂಟ್ರಿಯ ಕುರಿತು ಘೋಷಣೆ ಮಾಡಿದ ಬಿಗ್ ಬಾಸ್, "ಒಬ್ಬ ಹೈಜಾಕರ್ ಮನೆಯ ಕ್ಯಾಪ್ಟನ್ಸಿಯನ್ನು ಹೈಜಾಕ್ ಮಾಡಲು ಬಂದಿದ್ದಾರೆ. ನಿಮ್ಮೆಲ್ಲರ ನೂತನ ಕ್ಯಾಪ್ಟನ್ ಆಗಿ ತಾಂಡವ್ ರಾಮ್ ಮನೆಯನ್ನು ಪ್ರವೇಶಿಸುತ್ತಿದ್ದಾರೆ" ಎಂದು ತಿಳಿಸಿದರು. ತಕ್ಷಣವೇ ಕ್ಯಾಪ್ಟನ್ ರೂಮ್‌ನಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಕುಳಿತಿದ್ದ ತಾಂಡವ್, ಮಾಸ್ಕ್ ಕಳಚಿ ಎದುರಾಗುತ್ತಿದ್ದಂತೆ ಮನೆಯವರೆಲ್ಲರೂ ಒಮ್ಮೆಲೆ ಆಶ್ಚರ್ಯಚಕಿತರಾದರು.

ಒಳಬಂದ ತಕ್ಷಣವೇ ತಮ್ಮ ನೆಚ್ಚಿನ ಗೆಳೆಯ ಗಗನ್ ಅವರನ್ನು ತಬ್ಬಿಕೊಂಡ ತಾಂಡವ್, "ಯಾಕೋ ಡಲ್ ಆಗಿದ್ದೀಯಾ ಮಚ್ಚಾ? ನಾನು ಬಂದಾಯ್ತು. ತುಂಬಾ ಒಳ್ಳೆತನ ತೋರಿಸಿ ನೋವು, ಪೆಟ್ಟು ತಿಂದಿದ್ದೇನೆ, ಅನುಭವಿಸಿದ್ದೇನೆ. ಇನ್ಮೇಲೆ ಈ ಮನೆಯಲ್ಲಿ ನಾನು ಇರೋವರೆಗೂ ನನ್ನಿಂದ ಆ ಒಳ್ಳೆತನವನ್ನು ಎಕ್ಸ್‌ಪೆಕ್ಟ್ ಮಾಡಬೇಡಿ. ನ್ಯಾಯ, ನ್ಯಾಯ, ನಮ್ಮ ತಾಯಾಣೆ ನ್ಯಾಯ!" ಎಂದು ಅಬ್ಬರಿಸುವ ಮೂಲಕ ತಮ್ಮ ಆಟದ ಹೊಸ ಪಥವನ್ನು ಸ್ಪಷ್ಟಪಡಿಸಿದರು.

ಯಾರಿಗೆಲ್ಲಾ ಬಿಸಿ ಮುಟ್ಟಿಸ್ತಾರೋ ತಾಂಡವ್?

ವಾಸ್ತವವಾಗಿ, ಈ ವಾರ ಮಂಜ ಹಾಗೂ ಲಿಖಿತ್ ಮಾಡಿದ ಎಡವಟ್ಟಿನಿಂದಾಗಿ ಕ್ಯಾಪ್ಟನ್ಸಿ ಓಟವೇ ರದ್ದಾಗಿತ್ತು. ಆದರೆ ಬಿಗ್ ಬಾಸ್, ವಾಪಸ್ ಬಂದ ತಾಂಡವ್‌ಗೆ ಪ್ರಮೋಷನ್‌ ನೀಡಿ ಮನೆಯ ಹೊಸ ಕ್ಯಾಪ್ಟನ್ ಆಗಿ ಘೋಷಿಸಿದ್ದಾರೆ. ಈ ಬೆಳವಣಿಗೆಯಿಂದ ಆಪ್ತ ಗೆಳೆಯ ಗಗನ್ ಮುಖದಲ್ಲಿ ಮಂದಹಾಸ ಮೂಡಿದ್ದರೆ, ಉಳಿದ ಸಹಸ್ಪರ್ಧಿಗಳಲ್ಲಿ ನಡುಕ ಶುರುವಾಗಿದೆ. ಪೆಟ್ಟು ತಿಂದ ಹುಲಿಯಂತೆ ಕಮ್‌ಬ್ಯಾಕ್ ಮಾಡಿರುವ ತಾಂಡವ್, ಇನ್ಮುಂದೆ ಯಾರಿಗೆಲ್ಲ ಬಿಸಿ ಮುಟ್ಟಿಸಲಿದ್ದಾರೆ ಎಂಬುದು ದೊಡ್ಮನೆಯ ಮುಂದಿನ ಕದನಕ್ಕೆ ಭರ್ಜರಿ ವೇದಿಕೆ ಕಲ್ಪಿಸಿದೆ.