‘ಬಿಗ್‌ಬಾಸ್ ಕನ್ನಡ ಸೀಸನ್ 13’ ಆರಂಭವಾಗಿ ಯಶಸ್ವಿಯಾಗಿ ಮೊದಲ ವಾರ ಪೂರೈಸಿದ್ದು, ಈ ಸೀಸನ್‌ನ ಚೊಚ್ಚಲ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ‘ಕಿಚ್ಚನ ಪಂಚಾಯ್ತಿ’ ನಡೆದಿದೆ. ತಪ್ಪು ಮಾಡಿದ ಕೆಲ ಸ್ಪರ್ಧಿಗಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಳಿ ಬಿಡಿಸಿದರೆ, ಇನ್ನು ಕೆಲವರಿಗೆ ಶಾಕ್ ನೀಡಿದರು. ಆದರೆ, ಗಂಭೀರವಾಗಿದ್ದ ಪಂಚಾಯ್ತಿಯ ವಾತಾವರಣದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ಚಟಾಕಿಯ ಮೂಲಕ ಸ್ವತಃ ಸುದೀಪ್ ಅವರಿಗೇ ಶಾಕ್ ನೀಡಿ ಇಡೀ ವೇದಿಕೆಯನ್ನು ನಗೆಗಡಲಲ್ಲಿ ತೇಲಿಸಿದರು.
‘ಹುಚ್ಚ’ ಸಿನಿಮಾ ಮಾಡುವಾಗ ಇವರು ಸಿಗಲಿಲ್ಲ
ವಾರದ ಆಗುಹೋಗುಗಳ ಬಗ್ಗೆ ಮನೆಯವರ ಅಭಿಪ್ರಾಯ ಸಂಗ್ರಹಿಸುತ್ತಿದ್ದ ಸುದೀಪ್, ಓಂ ಪ್ರಕಾಶ್ ರಾವ್ ಅವರ ಬಳಿ "ಮೊದಲ ವಾರ ಬಿಗ್‌ಬಾಸ್ ಮನೆಯಲ್ಲಿ ಇದ್ದು ಏನನಿಸಿತು?" ಎಂದು ಪ್ರಶ್ನಿಸಿದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಓಂ ಪ್ರಕಾಶ್ ರಾವ್, "ಕರ್ನಾಟಕದಲ್ಲಿ ನೀವೇ ಅತ್ಯುತ್ತಮ ಕಲಾವಿದ, ನಟ ಎಂದುಕೊಂಡಿದ್ದೆ. ಆದರೆ ಖಂಡಿತ ಇಲ್ಲ, ಇಲ್ಲಿರುವ ಕೆಲವರು ನಿಮಗಿಂತಲೂ ಒಳ್ಳೆಯ ನಟರು! ಇವರ ಮುಂದೆ ನೀವೇನೂ ಅಲ್ಲ ಬಿಡಿ, ನಿಮಗಿಂತಲೂ ದೊಡ್ಡ ಕಲಾವಿದರು ಇಲ್ಲಿದ್ದಾರೆ" ಎಂದು ಮನೆಯವರ ಮುಖವಾಡಗಳನ್ನು ಹಾಸ್ಯದ ಧಾಟಿಯಲ್ಲೇ ಕಳಚಿಟ್ಟರು. ಈ ಮಾತು ಕೇಳಿ ಸುದೀಪ್‌ಗೆ ನಗು ತಡೆಯಲಾಗಲಿಲ್ಲ.
ತಕ್ಷಣವೇ ಹಾಸ್ಯ ಪ್ರಜ್ಞೆ ಮೆರೆದ ಸುದೀಪ್, "ನನ್ನ ಪುಣ್ಯ, ನೀವು ‘ಹುಚ್ಚ’ ಸಿನಿಮಾ ಮಾಡುವಾಗ ಇವರೆಲ್ಲ ನಿಮ್ಮ ಕಣ್ಣಿಗೆ ಬೀಳಲಿಲ್ಲ. ಇಲ್ಲವಾಗಿದ್ದರೆ ನಾನು ಹೀರೋ ಆಗುತ್ತಲೇ ಇರಲಿಲ್ಲ!" ಎಂದು ಕಿಚಾಯಿಸಿದರು. ಜೊತೆಗೆ, "ನನಗೆ 12 ಸೀಸನ್‌ಗಳ ಹಿಂದೆಯೇ ಈ ಸತ್ಯ ಗೊತ್ತಾಗಿಬಿಟ್ಟಿದೆ; ಒಳಗೆ ಹೋದವರ ನಟನೆ ಮುಂದೆ ನಮ್ಮ ನಟನೆ ಏನೂ ಅಲ್ಲ" ಎಂದು ಸುದೀಪ್ ಮುಗುಳ್ನಕ್ಕರು.
ಓಂ ಪ್ರಕಾಶ್‌ಗೆ ಮೆಚ್ಚುಗೆ
ಇದೇ ಸಂಭಾಷಣೆಯ ವೇಳೆ ಓಂ ಪ್ರಕಾಶ್ ರಾವ್ ಅವರು ಸಹ-ಸ್ಪರ್ಧಿ ತಾಂಡವ್ ರಾಮ್ ಅವರ ನಾಟಕೀಯ ವರ್ತನೆ ಹಾಗೂ ಯಶಸ್ ಕೃಷ್ಣ ಆಡಿದ ಕೆಲ ಮಾತುಗಳ ಬಗ್ಗೆ ಸುದೀಪ್ ಮುಂದೆ ತಮಾಷೆಯ ಧಾಟಿಯಲ್ಲೇ ದೂರು ತೋಡಿಕೊಂಡರು. ಅದರಲ್ಲೂ ಯಶಸ್ ಹೇಳಿದ ಕೆಲವು ಮಾತುಗಳ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಓಂ ಪ್ರಕಾಶ್ ರಾವ್ ಅವರ ಗ್ರಹಿಸುವ ಶಕ್ತಿ ಮತ್ತು ಆಟದ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸುದೀಪ್, ಮನೆಯಲ್ಲಿ ಅವರು ತರುತ್ತಿರುವ ಜೀವಂತಿಕೆಯನ್ನು ಮೆಚ್ಚಿಕೊಂಡರು.
ಗುರೂಜಿ ಅವತಾರವೆತ್ತಿ ನಗಿಸಿದ್ದ ಓಂ
ಓಂ ಪ್ರಕಾಶ್ ರಾವ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ "ಇವರು ಮನೆಯಲ್ಲಿ ಎಲ್ಲರನ್ನೂ ಬಹಳ ನಗಿಸುತ್ತಾರೆ" ಎಂದು ಸುದೀಪ್ ಭವಿಷ್ಯ ನುಡಿದಿದ್ದರು. ಅದಕ್ಕೆ ತಕ್ಕಂತೆ ಮನೆಯೊಳಗೆ ತಮ್ಮ ಹ್ಯೂಮರ್ ಮೂಲಕ ಮಿಂಚುತ್ತಿರುವ ಅವರು, ಇತ್ತೀಚೆಗಷ್ಟೇ 'ಗುರೂಜಿ' ಅವತಾರವೆತ್ತಿ ಸಹ-ಸ್ಪರ್ಧಿಗಳ ಜೊತೆಗೆ ಇಡೀ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದರು. ಮೊದಲ ಪಂಚಾಯ್ತಿಯಲ್ಲೂ ತಮ್ಮದೇ ಚಮಕ್ ಪ್ರದರ್ಶಿಸಿರುವ ಓಂ ಪ್ರಕಾಶ್ ರಾವ್, ಮುಂಬರುವ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ಕುತೂಹಲ ಕೆರಳಿಸುವ ಮುನ್ಸೂಚನೆ ನೀಡಿದ್ದಾರೆ.