ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' ಈ ಬಾರಿ ಸಾಮಾನ್ಯ ಜನರಿಗೂ ದೊಡ್ಮನೆ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಿಗಳಿಗಾಗಿ 'ಅಗ್ನಿಪರೀಕ್ಷೆ' ಹೆಸರಿನಲ್ಲಿ ಒಟ್ಟು ಎರಡು ಸುತ್ತುಗಳ ಅರ್ಹತಾ ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ಸಂಚಿಕೆಯಲ್ಲಿ ಆಯ್ಕೆಯಾಗಿದ್ದ 60 ಮಂದಿಯ ಪೈಕಿ 8 ಸ್ಪರ್ಧಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಮೊದಲ ಸಂಚಿಕೆಯಲ್ಲಿ ಭಾಗವಹಿಸಿದ ದೀಕ್ಷಾ ಆರ್. ಶೆಟ್ಟಿ, ಮಾಡ್ರನ್ ಕವಿ ಮಂಜ, ಇಶಾ ನವೀನ್, ಯೋಗಿತಾ-ಯೋಗಶ್ರೀ, ರತ್ನಾ ಚಂದ್ರಪ್ಪ, ಕಬಾಬ್ ಮಂಜು, ಚರಣ್ ಶೆಟ್ಟಿ ಹಾಗೂ ಜಿ.ಕೆ. ಪೂರ್ಣಿಮಾ ಅವರ ಪೈಕಿ ಮಾಡ್ರನ್ ಕವಿ ಮಂಜ, ಚರಣ್ ಶೆಟ್ಟಿ, ರತ್ನಾ ಚಂದ್ರಪ್ಪ ಮತ್ತು ಜಿ.ಕೆ. ಪೂರ್ಣಿಮಾ ಯಶಸ್ವಿಯಾಗಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ನಾಲ್ಕೂ ಜ್ಯೂರಿಗಳಿಂದ ಗ್ರೀನ್ ಸಿಗ್ನಲ್
ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸುತ್ತಿರುವ ಜಿ.ಕೆ. ಪೂರ್ಣಿಮಾ ಮೂಲಕ ಮೊದಲ ಸಂಚಿಕೆಯ 'ಸ್ಟಾರ್ ಕಂಟೆಸ್ಟೆಂಟ್' ಆಗಿ ಹೊರಹೊಮ್ಮಿದ್ದಾರೆ. ನೀಡಲಾಗಿದ್ದ 30 ಸೆಕೆಂಡುಗಳ ಬದಲಿಗೆ ಬರೋಬ್ಬರಿ 45 ಸೆಕೆಂಡುಗಳ ಕಾಲ ಬೃಹತ್ ಗಾತ್ರದ ಟೈರ್ ಎತ್ತಿ ಹಿಡಿದು ಸೈ ಎನಿಸಿಕೊಂಡ ಪೂರ್ಣಿಮಾ, ನಂತರ ಮದ್ಯವ್ಯಸನಿಯ ಶೈಲಿಯಲ್ಲಿ ಜ್ಯೂರಿಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡು ಗಮನ ಸೆಳೆದರು. ಇವರ ಅದ್ಭುತ ಪ್ರತಿಭೆಗೆ ನಾಲ್ಕೂ ಜ್ಯೂರಿಗಳು ಗ್ರೀನ್ ಸಿಗ್ನಲ್ ನೀಡುವ ಮೂಲಕ ಮೆಚ್ಚುಗೆ ಸೂಚಿಸಿದರು.
ಆ ಇಬ್ಬರು ಸ್ಪರ್ಧಿಗಳು ಹೋಲ್ಡ್
ಇದೇ ವೇಳೆ ಇಬ್ಬರು ಸ್ಪರ್ಧಿಗಳ ಭವಿಷ್ಯ ಸದ್ಯ ಅತಂತ್ರವಾಗಿದ್ದು, ಅವರನ್ನು 'ಹೋಲ್ಡ್'ನಲ್ಲಿ ಇರಿಸಲಾಗಿದೆ. ಮ್ಯಾನೇಜರ್‌ಗೆ ಕರೆ ಮಾಡಿ "ಇಂದಿನಿಂದ ಕೆಲಸಕ್ಕೆ ಬರಲ್ಲ, ರಾಜೀನಾಮೆ ನೀಡುತ್ತಿದ್ದೇನೆ" ಎಂದು ಹೇಳುವ ಕಠಿಣ ಸವಾಲು ಸ್ವೀಕರಿಸಿದ ದೀಕ್ಷಾ ಆರ್. ಶೆಟ್ಟಿ ಹಾಗೂ ತಂದೆ ನೀಡಿದ್ದ ಭಾವನಾತ್ಮಕ ಬೆಲೆಯುಳ್ಳ ಪರ್ಸ್ ಅನ್ನು ಹಾಳುಮಾಡುವ ಟಾಸ್ಕ್ ನಿಭಾಯಿಸಿದ ಇಶಾ ನವೀನ್ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಹೊರಬಿದ್ದ ಕಬಾಬ್ ಮಂಜು
ಮತ್ತೊಂದೆಡೆ, ಅವಳಿ ಸಹೋದರಿಯರಾದ ಯೋಗಿತಾ-ಯೋಗಶ್ರೀ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿ ಹೊರಬಿದ್ದಿದ್ದಾರೆ. ನಿಯಮಾವಳಿ ಪ್ರಕಾರ ಇಬ್ಬರನ್ನೂ ಒಟ್ಟಿಗೆ ಪರೀಕ್ಷಿಸಲು ಸಾಧ್ಯವಿರಲಿಲ್ಲ. ಹಾಗಾಗಿ, ತಂಗಿಗಾಗಿ ಅಕ್ಕ ಶೋನಿಂದ ಹೊರಗುಳಿಯಲು ನಿರ್ಧರಿಸಿದರು. ಆದರೆ, ಜ್ಯೂರಿಗಳು ಅಕ್ಕನನ್ನೇ ಪರೀಕ್ಷಿಸಿದರು. ಆದರೆ ಅವರ ಉತ್ತರಗಳು ಸಮಾಧಾನ ತರದೇ ಇದ್ದಿದ್ದರಿಂದ ಮತ್ತು ಪ್ರಬುದ್ಧತೆಯ ಕೊರತೆ ಕಂಡುಬಂದಿದ್ದರಿಂದ ಅವರನ್ನು ತಿರಸ್ಕರಿಸಲಾಯಿತು.
ಮಂಡ್ಯದ ಮೆಕ್ಯಾನಿಕ್ ಪೂರ್ಣಿಮಾ
ಇನ್ನು ಕುದಿಯುವ ಎಣ್ಣೆಯಲ್ಲಿ ಕೈಹಾಕುವ ಸಾಹಸ ಪ್ರದರ್ಶಿಸಿದ ಕಬಾಬ್ ಮಂಜು, "ಕಳೆದುಹೋದ ತಾಯಿ ಮತ್ತು ತಮ್ಮನನ್ನು ಹುಡುಕಲು ಬಿಗ್ ಬಾಸ್‌ಗೆ ಬರಬೇಕು" ಎಂದು ನೀಡಿದ ಸಮರ್ಥನೆ ಜ್ಯೂರಿಗಳಿಗೆ ಸೂಕ್ತವೆನಿಸದ ಕಾರಣ ಅವರು ಸ್ಪರ್ಧೆಯಿಂದ ಹೊರಬಿದ್ದರು.
ಅಂತಿಮ ನಿರ್ಧಾರ ಯಾರದ್ದು?
ಈ ಆಯ್ಕೆ ಪ್ರಕ್ರಿಯೆಯಲ್ಲಿ ವಿನಯ್ ಗೌಡ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ ಹಾಗೂ ನಟಿ ಶ್ರುತಿ ತೀರ್ಪುಗಾರರಾಗಿರದೆ, ಮುಖ್ಯ ವೇದಿಕೆಗೆ ಅರ್ಹರನ್ನು ಕಳುಹಿಸುವ ಜ್ಯೂರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂವರು ಜ್ಯೂರಿಗಳು ಗ್ರೀನ್ ಸಿಗ್ನಲ್ ನೀಡಿದರೆ ನೇರ ಆಯ್ಕೆ, ಇಬ್ಬರು ಗ್ರೀನ್ ಮತ್ತು ಇಬ್ಬರು ರೆಡ್ ಸಿಗ್ನಲ್ ನೀಡಿದರೆ 'ಹೋಲ್ಡ್', ಹಾಗೂ ಮೂವರು ರೆಡ್ ಸಿಗ್ನಲ್ ನೀಡಿದರೆ ನೇರ ತಿರಸ್ಕಾರವಾಗುವ ನಿಯಮ ರೂಪಿಸಲಾಗಿದೆ.
ಜ್ಯೂರಿಗಳ ಪರೀಕ್ಷೆ ಮುಗಿದ ನಂತರ ಆರಂಭವಾಗುವ ಎರಡನೇ ಸುತ್ತಿನಲ್ಲಿ ಅಂತಿಮ ತೀರ್ಮಾನ ವೀಕ್ಷಕರ ಕೈಯಲ್ಲಿದ್ದು, ಮತದಾನದ ಮೂಲಕ ಯಾರು ದೊಡ್ಮನೆ ಪ್ರವೇಶಿಸಬೇಕು ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ.