‘ಬಿಗ್ ಬಾಸ್’ ಮನೆಯಿಂದ ಮೂರೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿ ನಟಿ ವೈಷ್ಣವಿ ಕೌಂಡಿನ್ಯ, ದೊಡ್ಮನೆಯೊಳಗಿನ ಸಹಸ್ಪರ್ಧಿಗಳ ವರ್ತನೆ ಹಾಗೂ ಆಟದ ವೈಖರಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮನೆಯೊಳಗಿನ ಕೆಲ ಸ್ಪರ್ಧಿಗಳಿಂದ ತಮಗೆ ಮಾನಸಿಕ ಹಿಂಸೆಯಾಗಿದ್ದು, ಇಂತಹ ನಡವಳಿಕೆಯುಳ್ಳ ಜನರನ್ನು ತಮ್ಮ ಜೀವನದಲ್ಲೇ ನೋಡಿರಲಿಲ್ಲ ಎಂದು ಅವರು ನೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ವಿಶ್ವವಾಣಿ ಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮನೆಯೊಳಗಿನ ಅನುಭವ ಹಾಗೂ ತಮ್ಮ ಅಸಮಾಧಾನದ ಹಿಂದಿನ ಕಾರಣಗಳನ್ನು ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.
ಮೊದಲ ವಾರದ ಫ್ಲೈಟ್ ಜರ್ನಿ ಹೇಗಿತ್ತು?
ಮೊದಲ ವಾರದ ‘ಫ್ಲೈಟ್ ಕಾನ್ಸೆಪ್ಟ್’ ದಿನಗಳನ್ನು ಮೆಲುಕು ಹಾಕಿದ ವೈಷ್ಣವಿ, "ನಾವು ಕೇವಲ ಎಂಟು ಮಂದಿ ಸದಸ್ಯರಿದ್ದೆವು. ಪರಸ್ಪರ ಸ್ಕಿಟ್ ಮಾಡಿಕೊಂಡು, ನಮಗೆ ನಾವೇ ಮನರಂಜನೆ ನೀಡಿಕೊಳ್ಳುತ್ತಾ ನಮ್ಮ ಪಾಡಿಗೆ ನಾವಿದ್ದೆವು. ಪ್ರಥಮಾ ಅಕ್ಕ ಕಥಕ್ ನೃತ್ಯಗಾರ್ತಿ, ನಾನು ಭರತನಾಟ್ಯ ಕಲಾವಿದೆ. ಹೀಗಾಗಿ ನಾವಿಬ್ಬರೂ ಶಾಸ್ತ್ರೀಯ ನೃತ್ಯ ಪ್ರದರ್ಶಿಸುತ್ತಾ, ವಿವಿಧ ರೀತಿಯಲ್ಲಿ ಆ ದಿನಗಳನ್ನು ಎಂಜಾಯ್ ಮಾಡಿದೆವು. ಆದರೆ ಅದೇ ಸಂದರ್ಭದಲ್ಲಿ ಸಾಕಷ್ಟು ಕಷ್ಟಗಳನ್ನೂ ಎದುರಿಸಬೇಕಾಯಿತು" ಎಂದು ಆರಂಭಿಕ ದಿನಗಳ ಅನುಭವ ವಿವರಿಸಿದರು.
ನನಗಂತೂ ಆಟವಾಡಲು ಜಾಗವೇ ಸಿಗಲಿಲ್ಲ
ಆದರೆ ಎರಡನೇ ವಾರದಲ್ಲಿ ತಮಗೆ ಆಟವಾಡಲು ಅವಕಾಶವೇ ಸಿಗದಂತೆ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದ ಅವರು, "ಟಾಸ್ಕ್ ಎಂಬುದು ಬಿಗ್ ಬಾಸ್‌ನ ಅವಿಭಾಜ್ಯ ಅಂಗ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಟಾಸ್ಕ್‌ಗಳಿಂದಲೇ ಮನೆಯೊಳಗೆ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಎರಡನೇ ವಾರ ನನಗಂತೂ ಆಟವಾಡಲು ಜಾಗವೇ ಸಿಗಲಿಲ್ಲ, ಬದಲಿಗೆ ಕೇವಲ ಸಂಕೋಲೆಗಳನ್ನು ಮಾತ್ರ ತೊಡಿಸಲಾಯಿತು. 24 ಗಂಟೆಗಳ ಲೈವ್ ವೀಕ್ಷಿಸಿದವರಿಗೆ ನಾನು ಸಾಕಷ್ಟು ಕಾಣಿಸಿಕೊಂಡಿದ್ದೇನೆ, ಆದರೆ ಟಿವಿಯಲ್ಲಿ ಟೆಲಿಕಾಸ್ಟ್ ಆದ ಸಂಚಿಕೆಗಳಲ್ಲಿ ನನ್ನನ್ನು ಹೆಚ್ಚಾಗಿ ತೋರಿಸಲೇ ಇಲ್ಲ. ಮನೆಯೊಳಗೆ ಕೇವಲ ಗಲಾಟೆ, ಬೊಬ್ಬೆ, ಕಿರುಚಾಟಗಳೇ ತುಂಬಿಕೊಂಡಿದ್ದವು. ನಾವಾದರೂ ಎಷ್ಟು ಅಂತ ಗಲಾಟೆ ಮಾಡಲು ಸಾಧ್ಯ? ಕೊಳಚೆಗೆ ಎಷ್ಟು ಅಂತ ಕಲ್ಲು ಹಾಕುತ್ತಿರಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ಅವರು ನೀಡುತ್ತಿದ್ದ ಕಾಟ ಅಷ್ಟಿಷ್ಟಲ್ಲ
ಇದೇ ವೇಳೆ ಮನೆಯೊಳಗಿನ ಕೆಲ ಸ್ಪರ್ಧಿಗಳ ವಿರುದ್ಧ ನೇರ ವಾಗ್ದಾಳಿ ನಡೆಸಿದ ವೈಷ್ಣವಿ, "ಕಾಮನರ್ಸ್ ಆಗಿ ಬಂದವರ ವರ್ತನೆ ಅಕ್ಷರಶಃ ಮೆಂಟಲ್ ಟಾರ್ಚರ್ ಆಗಿತ್ತು. ಇಂಥವರ ಜೊತೆ ನಾವೇಕೆ ಇರಬೇಕು ಎನ್ನುವ ಪ್ರಶ್ನೆ ಪದೇಪದೇ ಕಾಡುತ್ತಿತ್ತು. ಧನುಷ್ ಅವರಲ್ಲಿ ಎಷ್ಟೋ ಉತ್ತಮವಾಗಿದ್ದರು, ಆದರೆ ಸ್ನೇಹಿತರ ಗುಂಪು ಎಂಬ ಕಾರಣಕ್ಕೆ ಅವರು ಕೆಲವೊಮ್ಮೆ ಆ ಗುಂಪನ್ನೇ ಬೆಂಬಲಿಸುತ್ತಿದ್ದರು. ಆದರೆ ಆ ಮೂವರು (ಮಂಜ, ಶಾಸ್ತ್ರಿ, ಲಿಖಿತ್) ನೀಡುತ್ತಿದ್ದ ಕಾಟ ಅಷ್ಟಿಷ್ಟಲ್ಲ. ತಮಗೆ ಸಿಗಲಿಲ್ಲವೆಂದರೆ ಬೇರೆ ಯಾರಿಗೂ ಸಿಗಬಾರದು ಎನ್ನುವ ಮನಸ್ಥಿತಿ, ಸಿಕ್ಕಿದ್ದನ್ನು ತಾವೇ ತಿಂದು ತೇಗುವುದು, ಬಾಯಿ ಬಡಿದುಕೊಳ್ಳುವುದು ಮತ್ತು ಕುತಂತ್ರ ಮಾಡುವುದೇ ಅವರ ನಿತ್ಯದ ಕಾಯಕವಾಗಿತ್ತು" ಎಂದು ಗುಡುಗಿದರು.
'ಕಾಮನರ್‌ಗಳು ಮೂರನ್ನು ಬಿಟ್ಟು ಬಿಗ್ಬಾಸ್‌ಗೆ ಬಂದಿದ್ದಾರೆ!'
ಇಂತಹ ಕುತಂತ್ರಿಗಳನ್ನು ನಾನೆಲ್ಲೂ ನೋಡಿಲ್ಲ
ಸ್ಪರ್ಧಿಗಳ ನಡವಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವೈಷ್ಣವಿ ಅವರು, "ಲಿಖಿತ್ ಆದರೂ ಒಂದು ಹಂತಕ್ಕೆ ಪರವಾಗಿಲ್ಲ, ಆದರೆ ಮಂಜು ಮತ್ತು ಶಾಸ್ತ್ರಿ, ಅದರಲ್ಲೂ ಮುಖ್ಯವಾಗಿ ಶಾಸ್ತ್ರಿ ಅವರಂತವರನ್ನು ನೋಡಿ 'ಪ್ರಪಂಚದಲ್ಲಿ ಇಂಥ ಮನುಷ್ಯರೂ ಇರುತ್ತಾರಾ?' ಎನಿಸಿತು. ಇಷ್ಟು ಕೆಳಮಟ್ಟದಲ್ಲಿ ವರ್ತಿಸುವ ಕುತಂತ್ರಿಗಳನ್ನು ನಾನೆಲ್ಲೂ ಕಂಡಿರಲಿಲ್ಲ. ನಟನೆಯ ಕ್ಷೇತ್ರಕ್ಕೆ ಬಂದರೆ ಶೂಟಿಂಗ್ ಸೆಟ್‌ನಲ್ಲಿ ಕಲಾವಿದರು ಒಂದು ಘನತೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುತ್ತಾರೆ, ನಾವೂ ಅಂತಹ ಗೌರವಯುತ ಪರಿಸರದಲ್ಲೇ ಕೆಲಸ ಮಾಡಿದವರು. ಆದರೆ ಇಲ್ಲಿ ಕೆಲವರು ನಾಚಿಕೆ-ಮಾನವನ್ನೆಲ್ಲ ಬಿಟ್ಟು ಬಂದವರಂತೆ ವರ್ತಿಸುತ್ತಿದ್ದರು. ಅಂಥವರಿಗೆ ನಾವೇನೂ ಮಾಡಲು ಸಾಧ್ಯವಿಲ್ಲ" ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.