ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಈ ಬಾರಿ ನಿರ್ದೇಶಕ, ನಟ ಓಂ ಪ್ರಕಾಶ್ ರಾವ್ ಅವರು ಆಗಮಿಸಿರುವುದು ಗೊತ್ತೇ ಇದೆ. ಅಂದಹಾಗೆ, ಅವರು ಬಿಗ್ ಬಾಸ್‌ಗೆ ಹೋಗುವುದಕ್ಕೂ ಕೆಲ ದಿನಗಳ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಆಗ ಅವರು ಎಲ್ಲಿಯೂ ಬಿಗ್ ಬಾಸ್ ಶೋಗೆ ಕಾಲಿಡುವ ಬಗ್ಗೆ ಸಣ್ಣ ಸುಳಿವನ್ನು ಕೂಡ ಬಿಟ್ಟುಕೊಟ್ಟಿರಲಿಲ್ಲ.
2-3 ತಿಂಗಳು ಲಾಕ್ ಆಗಿಬಿಡುತ್ತೇನೆ
"ನೀವು ಈ ಸಲ ಬಿಗ್ ಬಾಸ್ ಶೋಗೆ ಹೋಗುತ್ತಿದ್ದೀರಂತೆ?" ಎಂದು ಕೇಳಿದ್ದಕ್ಕೆ, "ನಂಗೆ ಡೌಟಿದೆ. ಕೈಯಲ್ಲಿ ಸಾಕಷ್ಟು ಕೆಲಸಗಳಿವೆ ಮತ್ತು ಪ್ರಮುಖ ಕಮಿಟ್‌ಮೆಂಟ್‌ಗಳಿವೆ. ಸಿನಿಮಾ ಪ್ರಾಜೆಕ್ಟ್‌ಗಳ ಜವಾಬ್ದಾರಿಯನ್ನು ನಾನು ಅತ್ಯಂತ ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ. ಬಿಗ್ ಬಾಸ್‌ಗೆ ಹೋದರೆ ಎರಡರಿಂದ ಮೂರು ತಿಂಗಳು ಪೂರ್ತಿಯಾಗಿ ಲಾಕ್ ಆಗಿಬಿಡುತ್ತೇನೆ" ಎಂದು ಹೇಳುವ ಮೂಲಕ ದೊಡ್ಮನೆ ಪ್ರವೇಶದ ವದಂತಿಯನ್ನು ತಳ್ಳಿಹಾಕಿದ್ದರು. ಆದರೆ, ಇದೀಗ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ಸ್ವತಃ ಅವರೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿರುವುದು ಎಲ್ಲರ ಹುಬ್ಬೇರಿಸಿದೆ.
ಇದು ಎರಡನೇ ಬಾರಿ ಪ್ರವೇಶ
ಅಂದಹಾಗೆ, ಓಂ ಪ್ರಕಾಶ್ ರಾವ್ ಅವರಿಗೆ ಬಿಗ್ ಬಾಸ್ ಹೊಸದೇನಲ್ಲ. ಈ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 4’ರಲ್ಲೂ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶಿಸಿ, ತಮ್ಮ ಹಾಸ್ಯಪ್ರಜ್ಞೆ ಹಾಗೂ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಆದರೆ ಆ ಸೀಸನ್‌ನಲ್ಲಿ ತೀವ್ರ ಕಾಲು ನೋವಿನಿಂದ ಬಳಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದ್ದರಿಂದ ಅವರು ಶೋ ಅರ್ಧದಲ್ಲೇ ಹೊರಬರಬೇಕಾಯಿತು.
ಈ ಬಾರಿ ಮತ್ತೊಮ್ಮೆ ಬಿಗ್ ಬಾಸ್ ವೇದಿಕೆ ಮೇಲೆ ಅವರನ್ನು ಕಂಡ ಕಿಚ್ಚ ಸುದೀಪ್, "ಕೆಲವರು ಬಿಗ್ ಬಾಸ್‌ಗೆ 20-20 ಮ್ಯಾಚ್ ತರಹ ಬಂದು ಹೋಗ್ತಾರೆ. ಇನ್ನು ಕೆಲವರಿಗೆ 50 ಓವರ್‌ಗಳ ಇನ್ನಿಂಗ್ಸ್. ಆದರೆ ನೀವು ಮಾತ್ರ ಇದನ್ನ ಟೆಸ್ಟ್ ಮ್ಯಾಚ್ ಮಾಡಿಕೊಂಡು ಬಿಟ್ಟಿದ್ದೀರಿ" ಎಂದರು. ಅಲ್ಲದೆ, ಓಂ ಪ್ರಕಾಶ್ ಅವರ ಆಗಮನದಿಂದ 'ಬಿಗ್ ಬಾಸ್' ಮನೆಯಲ್ಲಿ ನಗುವಿನ ಸುರಿಮಳೆಯಾಗುವುದು ಖಂಡಿತ, ಅವರ ಪ್ರತಿಯೊಂದು ಮಾತು ಮತ್ತು ಎಲ್ಲರಿಗೂ ಮಾರ್ಗದರ್ಶನ ನೀಡುವ ಗುಣ ಮನೆಗೆ ಹೊಸ ಮೆರುಗು ನೀಡುತ್ತದೆ ಎಂದು ಸುದೀಪ್ ತಮಾಷೆ ಮಾಡಿದ್ದರು.
ಓಂ ಪ್ರಕಾಶ್ ರಾವ್ ಸಿನಿ ಸಾಧನೆ
ಓಂ ಪ್ರಕಾಶ್ ರಾವ್ ಅಂದಾಕ್ಷಣ ನೆನಪಾಗುವುದು 'ಎಕೆ 47', 'ಸಿಂಹದ ಮರಿ' ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳು ನೆನಪಾಗುತ್ತವೆ. ದೇವರಾಜ್ ಅವರಿಗೆ ಸ್ಟಾರ್‌ಡಮ್ ತಂದುಕೊಟ್ಟ 'ಲಾಕಪ್ ಡೆತ್', ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿಜೀವನವನ್ನೇ ಬದಲಿಸಿದ 'ಕಲಾಸಿಪಾಳ್ಯ', ಹಾಗೂ ಸುದೀಪ್ ಅವರಿಗೆ ಬಿಗ್ ಬ್ರೇಕ್ ನೀಡಿದ 'ಹುಚ್ಚ' ಸಿನಿಮಾಗಳನ್ನು ನಿರ್ದೇಶಿಸಿದವರು ಇವರೇ.
'ಲಾಕಪ್ ಡೆತ್' ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಇವರು, 'ಡಕೋಟಾ ಎಕ್ಸ್‌ಪ್ರೆಸ್' ಚಿತ್ರದಲ್ಲಿನ ನಟನೆಯ ಮೂಲಕವೂ ಕನ್ನಡಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು. ಈಗ ಇಂತಹ 'ಮಲ್ಟಿ ಟ್ಯಾಲೆಂಟೆಡ್' ವ್ಯಕ್ತಿ ಬಿಗ್ ಬಾಸ್ ಮನೆಗೆ ಹೋಗಿರುವುದು ಮನೆಯೊಳಗಿನ ಇತರ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿರುವುದಂತೂ ನಿಜ!