ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್‌ಗೆ ಕ್ಷಣಗಣನೆ ಶುರುವಾಗಿದ್ದು, ಅದಕ್ಕೂ ಮುನ್ನವೇ ಪ್ರಮುಖ ಸ್ಪರ್ಧಿಗಳ ಎಂಟ್ರಿಯ ಪ್ರೋಮೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.
ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ನಟಿ ಸಂಗೀತಾ ಭಟ್ 6ನೇ ಸ್ಪರ್ಧಿಯಾಗಿ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ಕಾವ್ಯಾ ಗೌಡ 7ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಿರುವುದು ಬಹಿರಂಗವಾಗಿದೆ. ಆದರೆ, ಇವರಿಬ್ಬರ ಆಗಮನವು ನಟ ಸುದರ್ಶನ್ ರಂಗಪ್ರಸಾದ್ ಅವರನ್ನು ವೇದಿಕೆ ಮೇಲೆಯೇ ಅಕ್ಷರಶಃ ಪೇಚಿಗೆ ಸಿಲುಕಿಸಿದೆ.
ಪತ್ನಿ ಸಂಗೀತಾ ಭಟ್ ಬಗ್ಗೆ ಏನಂದ್ರು ಸುದರ್ಶನ್?
ವೇದಿಕೆ ಮೇಲೆ ಪತ್ನಿ ಸಂಗೀತಾ ಭಟ್ ಅವರನ್ನು ಪರಿಚಯಿಸುವ ವೇಳೆ ತಮಾಷೆಯಾಗಿ ಕಾಲೆಳೆದ ಪತಿ ಸುದರ್ಶನ್ ರಂಗಪ್ರಸಾದ್, "ನನ್ನ ಹೆಂಡತಿ ಓಸಿಡಿಯಲ್ಲಿ (OCD) ಪಿಎಚ್‌ಡಿ ಮಾಡಿಬಿಟ್ಟಿದ್ದಾಳೆ... ಎಲ್ಲಾದರೂ ಗಲೀಜು ಕಂಡರೆ ಸಾಕು, ತಕ್ಷಣ ಜಗಳ ಶುರು ಮಾಡಿಬಿಡುತ್ತಾಳೆ" ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ ಅವರ ಈ ತಮಾಷೆಯ ಸಂಭ್ರಮ ಕ್ಷಣಾರ್ಧದಲ್ಲೇ ಶಾಕ್ ಆಗಿ ಬದಲಾಯಿತು. ಸಂಗೀತಾ ಭಟ್ ನಂತರ ವೇದಿಕೆಗೆ 7ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದು ಮತ್ತಾರೂ ಅಲ್ಲ, ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುದರ್ಶನ್ (ತಾಂಡವ್ ಪಾತ್ರ) ಅವರಿಗೆ ಆನ್‌ಸ್ಕ್ರೀನ್ ಪತ್ನಿ ‘ಶ್ರೇಷ್ಠಾ’ ಪಾತ್ರ ಮಾಡಿದ್ದ ನಟಿ ಕಾವ್ಯಾ ಗೌಡ.
ದಂಗಾಗಿ ನಿಂತ ಸುದರ್ಶನ್
ವೇದಿಕೆಗೆ ಬರುತ್ತಿದ್ದಂತೆಯೇ ಕಾವ್ಯಾ ಗೌಡ ಅವರು "ಸುದರ್ಶನ್ ಇದ್ದಾನಾ?" ಎಂದು ಹುಡುಕುತ್ತಾ ಎಂಟ್ರಿ ಕೊಟ್ಟಿದ್ದು ಇಡೀ ವೇದಿಕೆಯಲ್ಲಿ ನಗುವಿನ ಅಲೆ ಎಬ್ಬಿಸಿತು. ಒಂದೆಡೆ ರಿಯಲ್ ಲೈಫ್ ಪತ್ನಿ ಸಂಗೀತಾ ಭಟ್, ಮತ್ತೊಂದೆಡೆ ರೀಲ್ ಲೈಫ್ ಪತ್ನಿ ಕಾವ್ಯಾ ಗೌಡ ಇಬ್ಬರನ್ನೂ ಒಟ್ಟಿಗೆ ವೇದಿಕೆ ಮೇಲೆ ಕಂಡ ಸುದರ್ಶನ್ ದಂಗಾಗಿ ನಿಂತರು. ತಕ್ಷಣ ನಿರೂಪಕ ಕಿಚ್ಚ ಸುದೀಪ್ ಅವರತ್ತ ತಿರುಗಿದ ಸುದರ್ಶನ್, "ಆನ್‌ಸ್ಕ್ರೀನ್ ವೈಫ್ ಮತ್ತು ಆಫ್‌ಸ್ಕ್ರೀನ್ ವೈಫ್ ಇಬ್ಬರೂ ಒಟ್ಟಿಗೆ ಸೇರಿದರೆ, ಅವರ ಮಧ್ಯೆ ಏನಾದರೂ ಕಿತ್ತಾಟ ಶುರುವಾದರೆ ನಾನೆಲ್ಲಿ ಸರ್ ಹೋಗಲಿ?" ಎಂದು ತಲೆ ಮೇಲೆ ಕೈಹೊತ್ತು ಕೇಳಿದ್ದು ಸಖತ್ ಮಜಾ ನೀಡಿದೆ.
ಇಂದು (ಸೆ.6) ಸಂಜೆ ಬಿಗ್ ಬಾಸ್ ಸೀಸನ್ 13 ಅಧಿಕೃತವಾಗಿ ಅದ್ದೂರಿಯಾಗಿ ಆರಂಭವಾಗಲಿದ್ದು, ಈ ಇಬ್ಬರು ನಟಿಯರ ಬಿಗ್ ಬಾಸ್ ಪಯಣ ವೀಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿದೆ.