ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್ʼ ಮನೆಯಲ್ಲಿ 2ನೇ ವಾರದ ನಾಮಿನೇಷನ್ ಫಿನೀಶ್; ಡೇಂಜರ್ ಝೋನ್‌ಗೆ ಬಿದ್ರು 9 ಮಂದಿ, ನಾಮಿನೇಟ್‌ ಮಾಡುವಾಗಲೂ ಮಂಜನ ಕಿರಿಕ್!‌

Bigg Boss 13 Nominations: ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಬಿರುಗಾಳಿ ಎಬ್ಬಿಸಿದ್ದು, ಒಟ್ಟು 9 ಸ್ಪರ್ಧಿಗಳು ಹೊರಬೀಳುವ ಆತಂಕದಲ್ಲಿದ್ದಾರೆ. ಮುಖಕ್ಕೆ ಫೋಮ್ ಹಚ್ಚುವ ಟಾಸ್ಕ್‌ನಲ್ಲಿ 8 ಮಂದಿ ನಾಮಿನೇಟ್ ಆದರೆ, ಪೈಲಟ್ ಸಂಗೀತಾ ಅವರು ವೈಷ್ಣವಿಯನ್ನು ನೇರವಾಗಿ ನಾಮಿನೇಟ್‌ ಮಾಡಿದರು.

ಬಿಗ್‌ ಬಾಸ್ ಮನೆಯಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ತೀವ್ರ ವಾಕ್ಸಮರ ಹಾಗೂ ಹೈಡ್ರಾಮಾಗಳಿಗೆ ಸಾಕ್ಷಿಯಾಗಿದೆ. ಈ ವಾರ ಸ್ಪರ್ಧಿಗಳ ಮುಖಕ್ಕೆ ಫೋಮ್ ಹಚ್ಚುವ ಮೂಲಕ ನಾಮಿನೇಷನ್‌ ಮಾಡುವ ವಿಶಿಷ್ಟ ಟಾಸ್ಕ್ ನೀಡಲಾಗಿತ್ತು. ಈ ಪ್ರಕ್ರಿಯೆಯ ಅಂತ್ಯಕ್ಕೆ ಒಟ್ಟು 8 ಮಂದಿ ಸ್ಪರ್ಧಿಗಳು ಇತರ ಸದಸ್ಯರಿಂದ ನಾಮಿನೇಟ್ ಆಗಿದ್ದಾರೆ. ಇದಲ್ಲದೆ ಮನೆಯ ಪೈಲಟ್ ಆಗಿರುವ ಸಂಗೀತಾ ಭಟ್ ಅವರಿಗೆ ದೊರೆತ ವಿಶೇಷ ಅಧಿಕಾರವನ್ನು ಬಳಸಿ, ಅವರು ನೇರವಾಗಿ ವೈಷ್ಣವಿ ಕೌಂಡಿನ್ಯ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದರೊಂದಿಗೆ ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 9 ಮಂದಿ ಸ್ಪರ್ಧಿಗಳು ನಾಮಿನೇಷನ್ ಅಂಗಳಕ್ಕೆ ತಳ್ಳಲ್ಪಟ್ಟಿದ್ದಾರೆ.

9 ಮಂದಿಗೆ ನಾಮಿನೇಷನ್‌ ತೂಗುಗತ್ತಿ!

ಈ ವಾರ ಎಲಿಮಿನೇಷನ್ ಭೀತಿಯಲ್ಲಿರುವ ಸ್ಪರ್ಧಿಗಳ ಪಟ್ಟಿಯಲ್ಲಿ ಅವಿನಾಶ್ ಷಠಮರ್ಷಣ, ಕಿರಣ್ ಶಾಸ್ತ್ರಿ, ಕಾವ್ಯ ಗೌಡ, ಮಹಾಕವಿ ಮಂಜ, ಸೌಂದರ್ಯ ಶೆಟ್ಟಿ, ತಾಂಡವ್ ರಾಮ್, ಆಸಿಯಾ ಫಿರ್ದೋಸ್, ಗಗನ್ ಚಿನ್ನಪ್ಪ ಹಾಗೂ ಪೈಲಟ್‌ನಿಂದ ನೇರವಾಗಿ ನಾಮಿನೇಟ್ ಆಗಿರುವ ವೈಷ್ಣವಿ ಕೌಂಡಿನ್ಯ ಸೇರಿದ್ದಾರೆ. ಎರಡನೇ ವಾರದಲ್ಲೇ ಒಟ್ಟು 9 ಪ್ರಮುಖ ಸ್ಪರ್ಧಿಗಳು ನಾಮಿನೇಟ್ ಆಗಿರುವುದು ಮನೆಯೊಳಗಿನ ಸ್ಪರ್ಧೆಯ ತೀವ್ರತೆಯನ್ನು ಹೆಚ್ಚಿಸಿದ್ದು, ವೀಕ್ಷಕರಲ್ಲೂ ಕುತೂಹಲ ಗರಿಗೆದರಿದೆ.

ಮಂಜನ ವಿರುದ್ಧ ಒಗ್ಗಟ್ಟಾದ ಮಹಿಳಾ ಸದಸ್ಯರು

ಇನ್ನು, ನಾಮಿನೇಷನ್ ಪ್ರಕ್ರಿಯೆಯ ವೇಳೆ ಮಹಾಕವಿ ಮಂಜ ಆಡಿದ ಮಾತು ಮನೆಯೊಳಗೆ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಸೌಂದರ್ಯ ಶೆಟ್ಟಿ ಅವರನ್ನು ನಾಮಿನೇಟ್ ಮಾಡುವಾಗ ಮಾತಿನ ಭರದಲ್ಲಿ ಮಂಜ, "ಕ್ಯಾರೆಕ್ಟರ್‌ಲೆಸ್" ಎಂಬ ಗಂಭೀರ ಪದವನ್ನು ಬಳಸಿದ್ದು, ಇದು ಮನೆಯೊಳಗಿನ ಮಹಿಳಾ ಸ್ಪರ್ಧಿಗಳನ್ನು ಕೆರಳಿಸಿದೆ. ವ್ಯಕ್ತಿತ್ವಕ್ಕೆ ಕಳಂಕ ತರುವಂತಹ ಮಾತನ್ನಾಡಿದ್ದಕ್ಕೆ ಸೌಂದರ್ಯ ಶೆಟ್ಟಿ ತೀವ್ರವಾಗಿ ನೊಂದುಕೊಂಡು ಕಣ್ಣೀರು ಹಾಕಿದರು. ಮಂಜನ ಈ ಅಸಭ್ಯ ಹೇಳಿಕೆಯನ್ನು ಖಂಡಿಸಿ ಮನೆಯ ಎಲ್ಲಾ ಮಹಿಳಾ ಸದಸ್ಯರು ಒಗ್ಗಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದರು.

Bigg Boss 13: ‘ನೀನೇ ನೆಟ್ಟಗಿಲ್ಲ, ಇನ್ನೊಬ್ರಿಗೆ ಏನು ಹೇಳೋಕೆ ಬರ್ತೀಯಾ..?’; ವೈಷ್ಣವಿ, ಕಾವ್ಯ ಗೌಡ ವಿರುದ್ಧ ಗುಡುಗಿದ ಕಿರಣ್ ಶಾಸ್ತ್ರಿ!

ಸ್ಪರ್ಧಿ ಆಸಿಯಾ ಫಿರ್ದೋಸ್ ಅವರು ಮಂಜನಿಗೆ ತಪ್ಪಿನ ಅರಿವು ಮೂಡಿಸಲು ಪ್ರುಯತ್ನಿಸಿದರು. ಅಲ್ಲದೆ, ಇತರೆ ಸ್ಪರ್ಧಿಗಳ ಬಳಿ ಬಂದು, "ಮಂಜ ಅವರನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ, ಇಂಥ ಮನಸ್ಥಿತಿ ಇರುವವರು ಪೈಲಟ್ ರೇಸ್‌ನಿಂದ ಹೊರಬಿದ್ದಿದ್ದೇ ಒಳ್ಳೆಯದಾಯಿತು" ಎಂದು ಆಸಿಯಾ ನೇರವಾಗಿಯೇ ಅಸಮಾಧಾನ ಹೊರಹಾಕಿದರು. ಒಟ್ಟಿನಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆಯು ಬಿಗ್‌ ಬಾಸ್ ಮನೆಯಲ್ಲಿ ಹಲವು ವೈಮನಸ್ಸು ಹಾಗೂ ಹೊಸ ಸಂಘರ್ಷಗಳಿಗೆ ಮುನ್ನುಡಿ ಬರೆದಿರುವುದಂತೂ ಸತ್ಯ.