ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸುದೀಪ್‌ ನಟನೆಯ ಸಿನಿಮಾಗಳು ತಡವಾಗುತ್ತಿರುವುದಕ್ಕೆ ಕಾರಣಗಳೇನು? ತಮ್ಮ ಪ್ಲಾನಿಂಗ್‌ ಬಗ್ಗೆ ಖಡಕ್‌ ರಿಪ್ಲೈ ನೀಡಿದ ʻಕಿಚ್ಚʼ!

ಸಿನಿಮಾಗಳ ಬಿಡುಗಡೆ ತಡವಾಗುತ್ತಿರುವ ಕುರಿತ ಪ್ರಶ್ನೆಗೆ ನಟ ಸುದೀಪ್ ಭಾವುಕ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ತಡವಾದರೆ ತಮಗೇ ಹೆಚ್ಚು ನೋವಾಗುತ್ತದೆ ಎಂದಿರುವ ಅವರು, ಯಾವುದೇ ನಿರ್ಲಕ್ಷ್ಯ ವಹಿಸದೆ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದ ಸುದೀಪ್, ಹುಟ್ಟುಹಬ್ಬದಂದು ‘ಬಿಲ್ಲ ರಂಗ ಭಾಷಾ’ ಚಿತ್ರದ ಫಸ್ಟ್ ಕಟ್ ಬಿಡುಗಡೆಯಾಗಲಿದೆ ಎಂದು ಹಂಚಿಕೊಂಡಿದ್ದಾರೆ.

ಈಚೆಗೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರಿಗೆ ಮುಂದಿನ ಸಿನಿಮಾಗಳ ಅಪ್ಟೇಟ್‌ ಬಗ್ಗೆ ಕೇಳಲಾಯಿತು. "ಬೆಳ್ಳಿತೆರೆಯಲ್ಲಿ ನಿಮ್ಮನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಮುಂದೆ ನಿಮ್ಮ ಚಿತ್ರಗಳ ಯೋಜನೆ ಹೇಗಿರಲಿದೆ? ವರ್ಷಕ್ಕೆ ಕನಿಷ್ಠ 2 ಸಿನಿಮಾ ಬೇಕೇ ಬೇಕು ಎಂದು ನಿಮ್ಮ ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ಲಾನಿಂಗ್ ಏನು?" ಎಂದು ಕಿಚ್ಚ ಸುದೀಪ್ ಅವರಿಗೆ ಪ್ರಶ್ನಿಸಲಾಯಿತು.

ಎಲ್ಲರಿಗಿಂತ ಹೆಚ್ಚು ನಾನೇ ಸಂಕಟಪಡುತ್ತೇನೆ

ಈ ಪ್ರಶ್ನೆಗೆ ಉತ್ತರಿಸಿದ ʻಕಿಚ್ಚʼ ಸುದೀಪ್‌, "ತುಂಬಾ ಒಳ್ಳೆಯ ಯೋಜನೆಯೇ ಇದೆ. ಅತ್ಯುತ್ತಮ ಪ್ಲಾನಿಂಗ್ ನಡೆಯುತ್ತಿದೆ. ಯಾವುದಾದರೂ ವರ್ಷ ನನ್ನ ಸಿನಿಮಾ ಬಿಡುಗಡೆಯಾಗಲಿಲ್ಲ ಅಥವಾ ನನ್ನಿಂದ ಹೊಸ ಸಿನಿಮಾ ಕೊಡಲು ಸಾಧ್ಯವಾಗಲಿಲ್ಲ ಎಂದ, ನನ್ನ ಮಾತು ನಂಬಿ, ನನಗಿಂತ ಹೆಚ್ಚು ಬೇಸರ ಯಾರಿಗೂ ಆಗುವುದಿಲ್ಲ. ಎಲ್ಲರಿಗಿಂತ ಹೆಚ್ಚು ನಾನೇ ಸಂಕಟಪಡುತ್ತೇನೆ. ದುರದೃಷ್ಟವಶಾತ್ ನಾನೂ ಒಬ್ಬ ಸಾಮಾನ್ಯ ಮನುಷ್ಯ ಎಂಬುದನ್ನು ಮರೆಯಬೇಡಿ; ನನಗೂ ಹಲವಾರು ಜವಾಬ್ದಾರಿಗಳಿವೆ" ಎಂದು ಹೇಳಿದ್ದಾರೆ.

ಕೇವಲ ಐದೂವರೆ ತಿಂಗಳಲ್ಲಿ ಸಿನಿಮಾ ಮಾಡಿದ್ದೇನೆ

"ಸಿನಿಮಾ ಕೊಟ್ಟೇ ತೀರಬೇಕು ಎಂದಾಗ ‘ಬಿಲ್ಲ ರಂಗ ಭಾಷಾ’ ಚಿತ್ರದ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಕೇವಲ ಐದೂವರೆ ತಿಂಗಳಲ್ಲಿ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸಿನಿಮಾ (ಮಾರ್ಕ್‌) ಕೊಟ್ಟಿದ್ದೇನೆ. 120 ದಿನಗಳ ನಿರಂತರ ಪರಿಶ್ರಮ ಅದು. 80 ಲೊಕೇಶನ್‌ಗಳು, 22 ಸೆಟ್‌ಗಳಲ್ಲಿ ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ" ಎನ್ನುತ್ತಾರೆ ‌ʻಕಿಚ್ಚʼ ಸುದೀಪ್

ವೈಯಕ್ತಿಕ ಸಮಸ್ಯೆಗಳೂ ಅಡ್ಡಿಯಾಗಬಹುದು

"ನನ್ನ ಬದುಕಿನಲ್ಲಿ ಸಿನಿಮಾಗಿಂತ ದೊಡ್ಡ ಪ್ರೀತಿ ಮತ್ತೊಂದಿಲ್ಲ. ಸಿನಿಮಾ ಮಾಡಿಲ್ಲ ಅಥವಾ ಸಿನಿಮಾ ರಿಲೀಸ್ ಆಗಿಲ್ಲ ಎಂದರೆ ಎಲ್ಲರಿಗಿಂತ ಹೆಚ್ಚು ನೋವಾಗುವುದು ನನಗೆ. ಆದರೆ ವಿಳಂಬವಾಗುವುದರ ಹಿಂದೆ ಹಲವು ಕಾರಣಗಳಿರುತ್ತವೆ. ಕೆಲವೊಮ್ಮೆ ಸಿದ್ಧವಾದ ಸ್ಕ್ರಿಪ್ಟ್‌ಗಳು ರದ್ದಾಗುತ್ತವೆ; ಮನೆಯ ಜವಾಬ್ದಾರಿಗಳು, ವೈಯಕ್ತಿಕ ಸಮಸ್ಯೆಗಳೂ ಅಡ್ಡಿಯಾಗಬಹುದು" ಎಂದರು ಸುದೀಪ್.

ಸಿನಿಮಾವನ್ನು ನಾನು ನಿರ್ಲಕ್ಷಿಸುತ್ತೇನೆ ಎನ್ನಲು ಸಾಧ್ಯವೇ?

"ನಾನು ಸಿನಿಮಾ ಮಾಡುತ್ತಿಲ್ಲ ಎಂದ ತಕ್ಷಣ ಎಲ್ಲೋ ಪ್ರವಾಸದಲ್ಲಿದ್ದೇನೆ ಅಥವಾ ಪಾರ್ಟಿ ಮಾಡಿಕೊಂಡು ಕಾಲ ಕಳೆಯುತ್ತಿದ್ದೇನೆ ಎಂದರ್ಥವಲ್ಲ. ನನ್ನ ಜೀವನವನ್ನು ನಾನೇ ಕಷ್ಟಪಟ್ಟು ರೂಪಿಸಿಕೊಂಡು ಬಂದಿದ್ದೇನೆ. ಹಾಗಿರುವಾಗ ಸಿನಿಮಾವನ್ನು ನಾನು ನಿರ್ಲಕ್ಷಿಸುತ್ತೇನೆ ಎನ್ನಲು ಸಾಧ್ಯವೇ? ನಾನು ನಿರೀಕ್ಷೆಗಿಂತ ಹೆಚ್ಚು ಪ್ರಯತ್ನ ಪಡುತ್ತಿದ್ದೇನೆ. ಸಿನಿಮಾವೇ ನನ್ನ ಸರ್ವಸ್ವ. ಕ್ಯಾಮೆರಾ ಮುಂದೆ ನಿಲ್ಲುವುದೇ ನನಗೆ ಅತ್ಯಂತ ಖುಷಿ ಕೊಡುವ ವಿಚಾರ. ಈ ಬಾರಿ ತುಸು ಹೆಚ್ಚಾಗಿಯೇ ಪ್ಲಾನ್ ಮಾಡಿಕೊಂಡಿದ್ದೇನೆ. ಆದರೆ, ಸಿನಿಮಾ ರಿಲೀಸ್ ಆಗದಿದ್ದಾಗ ನನಗಾಗುವಷ್ಟು ನೋವು ಯಾರಿಗೂ ಆಗುವುದಿಲ್ಲ, ನನ್ನ ಮಾತನ್ನು ನಂಬಿ" ಎಂದು ಕಿಚ್ಚ ಸುದೀಪ್ ಭಾವುಕರಾಗಿ ಉತ್ತರಿಸಿದರು.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ತೀರ್ಪುಗಾರರಿಂದ ಅವಮಾನ; ಸುದೀಪ್​ ಹೇಳಿದ್ದೇನು?

ʻಕಿಚ್ಚʼ ಸುದೀಪ್‌ ಅಭಿನಯದ ಬಹುನಿರೀಕ್ಷಿತ ‘ಬಿಲ್ಲ ರಂಗ ಭಾಷಾ’ ಚಿತ್ರದ ಫಸ್ಟ್ ಕಟ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 1ರ ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆಯಾಗಲಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರದ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ತೆಲುಗಿನ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಜೊತೆಗೆ ಸುದೀಪ್‌ ಒಂದು ಸಿನಿಮಾ ಮಾಡುವ ಸಾಧ್ಯತೆ ಇದೆ.