ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮಹಾನ್ʼ ಸಿನಿಮಾದಲ್ಲಿ ರೈತರ ಕಷ್ಟಗಳಿಗೆ ಧ್ವನಿಯಾದ ʻಬಿಗ್‌ ಬಾಸ್‌ʼ ನಮ್ರತಾ ಗೌಡ; ಫಸ್ಟ್‌ ಲುಕ್‌ ರಿಲೀಸ್‌

ವಿಜಯ ರಾಘವೇಂದ್ರ ನಟನೆಯ ಹಾಗೂ ಪಿ. ಸಿ. ಶೇಖರ್ ನಿರ್ದೇಶನದ ಬಹುನಿರೀಕ್ಷಿತ 'ಮಹಾನ್' ಚಿತ್ರದ ಪ್ರಮುಖ ಪಾತ್ರಧಾರಿಗಳಾದ ನಮ್ರತಾ ಗೌಡ ಮತ್ತು ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಚಿತ್ರದಲ್ಲಿ ನಮ್ರತಾ ಗೌಡ ಹಳ್ಳಿಯ ರೈತರ ಕಷ್ಟಗಳಿಗೆ ಧ್ವನಿಯಾಗುವ ವಿದ್ಯಾವಂತ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.

ಪಿ. ಸಿ. ಶೇಖರ್ ನಿರ್ದೇಶನದಲ್ಲಿ ಹಾಗೂ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ನಿರ್ಮಿಸುತ್ತಿರುವ, ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಮಹಾನ್’ ಚಿತ್ರದ ಪ್ರಮುಖ ಪಾತ್ರಗಳ ಫಸ್ಟ್ ಲುಕ್ ಬಿಡುಗಡೆಯಾಗಿದೆ. 'ಬಿಗ್ ಬಾಸ್' ಖ್ಯಾತಿಯ ನಮ್ರತಾ ಗೌಡ ಹಾಗೂ 'ಹಾಗೆ ಸುಮ್ಮನೆ' ಚಿತ್ರದ ನಟ ಕಿರಣ್ ಶ್ರೀನಿವಾಸ್ ಅವರ ಪಾತ್ರಗಳ ಪೋಸ್ಟರ್‌ಗಳನ್ನು ಚಿತ್ರತಂಡ ಇತ್ತೀಚೆಗೆ ಅನಾವರಣಗೊಳಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ಮೇರು ಕಲಾವಿದರ ಬಳಗವೇ ಇದೆ.

ರೈತರ ಪರ ಧ್ವನಿ ಎತ್ತುವ ವಿದ್ಯಾವಂತೆ: ನಟಿ ನಮ್ರತಾ ಗೌಡ

ತಮ್ಮ ಪಾತ್ರದ ಬಗ್ಗೆ ಸಂತಸ ಹಂಚಿಕೊಂಡ ನಟಿ ನಮ್ರತಾ ಗೌಡ, "ಪಿ.ಸಿ. ಶೇಖರ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಬಹುದಿನಗಳ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಈ ಸಿನಿಮಾದಲ್ಲಿ ನಾನು ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿ, ಹಳ್ಳಿಯ ರೈತರ ಕಷ್ಟಗಳಿಗೆ ಧ್ವನಿಯಾಗುವ ಜವಾಬ್ದಾರಿಯುತ ವಿದ್ಯಾವಂತ ಯುವತಿಯಾಗಿ ಕಾಣಿಸಿಕೊಂಡಿದ್ದೇನೆ. ಶಿವಣ್ಣ, ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ ಅವರಂತಹ ಕಲಾವಿದರ ಜೊತೆ ನಟಿಸಿದ್ದು ಬಹಳ ಖುಷಿ ನೀಡಿದೆ" ಎಂದಿದ್ದಾರೆ.

ಹಳ್ಳಿ-ನಗರದ ನಡುವಿನ ಸವಾಲು

ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಿರಣ್ ಶ್ರೀನಿವಾಸ್ ಮಾತನಾಡಿ, "ಹಳ್ಳಿಯಿಂದ ನಗರಕ್ಕೆ ಬಂದು ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಹಂಬಲವಿರುವ ಯುವಕನ ಪಾತ್ರ ನನ್ನದು. ನಂತರ ಹಳ್ಳಿಗೆ ಮರಳಿ ಆತ ಏನು ಮಾಡುತ್ತಾನೆ ಎಂಬುದೇ ಕಥೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಈ ಅದ್ದೂರಿ ಚಿತ್ರದಲ್ಲಿ ಹಿರಿಯ ಕಲಾವಿದರ ಜೊತೆ ಅಭಿನಯಿಸಿರುವುದು ಸಂತಸ ತಂದಿದೆ" ಎಂದು ತಿಳಿಸಿದರು.

"ಇಬ್ಬರೂ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ": ನಿರ್ದೇಶಕ ಪಿ.ಸಿ. ಶೇಖರ್

"ನಮ್ಮ ಮಹಾನ್ ಚಿತ್ರದಲ್ಲಿ ಕನ್ನಡದ "ಮಹಾನ್" ಕಲಾವಿದರು ಅಭಿನಯಿಸಿರುವುದು ನಿಜಕ್ಕೂ ಸಂತೋಷವಾಗಿದೆ. ನಮ್ಮ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದ್ದೇವೆ. ಈವರೆಗೂ ಮಾಡಿರದ ಪಾತ್ರಗಳಲ್ಲಿ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ "ಮಹಾನ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ" ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

ರೈತರ ಸಮಸ್ಯೆಗೆ ಧ್ವನಿ ಆಗಲಿದ್ದಾರೆ ಶಿವರಾಜ್‌ಕುಮಾರ್: ವಿಜಯ್‌ ರಾಘವೇಂದ್ರ ನಟನೆಯ 'ಮಹಾನ್' ಚಿತ್ರಕ್ಕೆ 'ಕರುನಾಡ ಚಕ್ರವರ್ತಿ' ಎಂಟ್ರಿ

"ನಮ್ಮ ಆಕಾಶ ಪಿಕ್ಚರ್ಸ್‌ ಸಂಸ್ಥೆಯ ಮೊದಲ ನಿರ್ಮಾಣದ ʻಮಹಾನ್ʼ, ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಚಿತ್ರ. ಇದೊಂದು ರೈತರ ಕುರಿತಾದ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವೂ ಹೌದು. ವಿಜಯ ರಾಘವೇಂದ್ರ ನಮ್ಮ ಚಿತ್ರದ ನಾಯಕರಾಗಿ ನಟಿಸಿದ್ದಾರೆ‌‌. ವಿಶೇಷಪಾತ್ರದಲ್ಲಿ ಶಿವರಾಜಕುಮಾರ್ ಅವರು ಅಭಿನಯಿಸಿದ್ದಾರೆ.

ಅಷ್ಟೇ ಅಲ್ಲದೆ ಸಾಕಷ್ಟು ಅನುಭವಿ ಹಾಗೂ ಹೆಸರಾಂತ ಕಲಾವಿದರು ತಾರಾಬಳಗದಲ್ಲಿದ್ದಾರೆ. ಜನಪ್ರಿಯ ಕಲಾವಿದರಾದ ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಅವರು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದು, ಇತ್ತೀಚೆಗೆ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ" ಎನ್ನುತ್ತಾರೆ ನಿರ್ಮಾಪಕ ‌ಪ್ರಕಾಶ್ ಬುದೂರು.