ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಭೂತಕಾಲ ನನ್ನನ್ನು ಕಾಡುತ್ತಲೇ ಇದೆ..ʼ; ಚಂದನ್ ಶೆಟ್ಟಿಗೆ ಟಾಂಗ್‌ ನೀಡಿದ್ರಾ ನಿವೇದಿತಾ ಗೌಡ? ಏನಾಯ್ತು ಅಂಥದ್ದು..?

Niveditha Gowda Vs Chandan Shetty: ಚಂದನ್ ಶೆಟ್ಟಿ ಅವರ ‘ಮೈಮಾಟ’ ಹಾಡಿನ ಸಾಲುಗಳು ವೈರಲ್ ಆಗುತ್ತಿದ್ದಂತೆಯೇ, ನಿವೇದಿತಾ ಗೌಡ ಟಾಂಗ್‌ ಕೊಟ್ರಾ ಅನ್ನೋ ಪ್ರಶ್ನೆ ಮೂಡಿದೆ. ಹಳೆಯ ಕಹಿ ನೆನಪುಗಳು ತನ್ನನ್ನು ಸದಾ ಕಾಡುತ್ತಿವೆ ಎಂದಿರುವ ನಿವೇದಿತಾ ಗೌಡ ಅವರ ಮಾತುಗಳು ಚರ್ಚೆ ಆಗುತ್ತಿವೆ.

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಮತ್ತು ಗಾಯಕ ಚಂದನ್ ಶೆಟ್ಟಿ ಪರಸ್ಪರ ಸಮ್ಮತಿಯೊಂದಿಗೆ ವಿಚ್ಛೇದನ ಪಡೆದು ತಮ್ಮ ತಮ್ಮ ವೃತ್ತಿಜೀವನದಲ್ಲಿ ಮುಂದುವರಿದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಇವರ ಕುರಿತಾದ ಚರ್ಚೆಗಳು ಮಾತ್ರ ನಿಲ್ಲುತ್ತಿಲ್ಲ. 2024ರಲ್ಲಿ ಕಾನೂನುಬದ್ಧವಾಗಿ ಬೇರ್ಪಟ್ಟ ಈ ಜೋಡಿ, ಮಾಧ್ಯಮಗಳ ಮುಂದೆ ಸೌಹಾರ್ದಯುತವಾಗಿಯೇ ಮಾತನಾಡುತ್ತಾ, ವೈಯಕ್ತಿಕ ಕಾರಣಗಳಿಂದ ದೂರಾಗುತ್ತಿದ್ದರೂ ಪರಸ್ಪರ ಗೌರವವನ್ನು ಸದಾ ಉಳಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದರು.

ಡಿವೋರ್ಸ್ ನಂತರವೂ ಇಬ್ಬರೂ ಬಹಿರಂಗವಾಗಿ ಒಬ್ಬರನ್ನೊಬ್ಬರು ದೂಷಿಸದೆ ಪ್ರಬುದ್ಧತೆ ಮೆರೆದಿದ್ದರು. ಆದರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ನಡುವೆ ಶುರುವಾಗಿರುವ ಪರೋಕ್ಷ ನಡೆ-ನುಡಿಗಳು ಅಭಿಮಾನಿಗಳಲ್ಲಿ ಮತ್ತೆ ಹೊಸ ಸಂಚಲನ ಸೃಷ್ಟಿಸಿವೆ.

ಈ ಸಾಹಿತ್ಯ ಸಂಪೂರ್ಣ ಕಾಲ್ಪನಿಕ

ಈ ಚರ್ಚೆಗೆ ಕಿಡಿ ಹೊತ್ತಿಸಿದ್ದು ಚಂದನ್ ಶೆಟ್ಟಿ ಅವರ ಹೊಸ ಹಾಡು ʻಮೈಮಾಟʼದಲ್ಲಿನ ಸಾಲುಗಳು. ಚಂದನ್ ಅವರ ಇತ್ತೀಚಿನ ಹಾಡಿನಲ್ಲಿ ಬರುವ ‘ಏನೇ ನಿನ್ನ ಮೈಮಾಟದಾಟ, ಇನ್ನೇಳು ಜನುಮಕೆ ಕಲಿಸಿದಿಯ ಪಾಠ..’ ಎಂಬ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನು ಕೇಳಿದ ನೆಟ್ಟಿಗರು, ಈ ಸಾಲುಗಳು ನಿವೇದಿತಾ ಗೌಡ ಅವರನ್ನು ಉದ್ದೇಶಿಸಿಯೇ ಬರೆದದ್ದು ಎಂದು ವ್ಯಾಖ್ಯಾನಿಸಿ ಕಾಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಹಾಡಿನ ಆರಂಭದಲ್ಲೇ "ಈ ಸಾಹಿತ್ಯ ಸಂಪೂರ್ಣ ಕಾಲ್ಪನಿಕ" ಎಂದು ಚಂದನ್ ಶೆಟ್ಟಿ ಮುನ್ನೆಚ್ಚರಿಕೆಯ ಸ್ಪಷ್ಟನೆ ನೀಡಿದ್ದರೂ, ನೆಟ್ಟಿಗರ ಅನುಮಾನ ಮಾತ್ರ ತಣ್ಣಗಾಗಿರಲಿಲ್ಲ.

Niveditha Gowda: ನಾನು ಮತ್ತು ಚಂದನ್ ದೂರ ಆಗಿರೋ ಕಾರಣ ಇದೇ! ನಿವೇದಿತಾ ಗೌಡ ಹೇಳಿದ್ದೇನು?

ಭೂತಕಾಲದ ನನ್ನನ್ನು ಕಾಡುತ್ತಲೇ ಇದೆ

ಚಂದನ್ ಶೆಟ್ಟಿ ಅವರ ಹಾಡು ಸದ್ದು ಮಾಡುತ್ತಿರುವ ಬೆನ್ನಲ್ಲೇ, ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸಾಲುಗಳು ಈ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿವೆ. ತಮ್ಮ ಪೋಸ್ಟ್‌ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ನಿವಿ, "ನಾನು ಎಲ್ಲೋ ಓದಿದ್ದೆ, ಮಹತ್ವಾಕಾಂಕ್ಷೆಯ ಹುಡುಗಿಗೆ ಅದ್ಭುತ ಸ್ನೇಹಿತರಿರುವುದು ಮತ್ತು ದುರಾದೃಷ್ಟಕರ ಪ್ರೇಮ ಜೀವನ ಇರುವುದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಇದ್ದಂತೆ. ಆದರೆ ನನ್ನದು ಒಂದು ಹಾರರ್ ಕಥೆಯಾಗಿತ್ತು. ಹಳೆಯ ನೆನಪುಗಳು ಹಾಗೂ ಭೂತಕಾಲ ನನ್ನನ್ನು ಒಂಟಿಯಾಗಿ ಬಿಡದೆ ಕಾಡುತ್ತಲೇ ಇವೆ" ಎಂದು ಹೇಳಿದ್ದಾರೆ.

ನಿವೇದಿತಾ ಗೌಡ ಹಂಚಿಕೊಂಡ ಪೋಸ್ಟ್‌



ಸೋಶಿಯಲ್‌ ಮೀಡಿಯಾದಲ್ಲಿ ಬಗೆಬಗೆಯ ಚರ್ಚೆ

ನಿವೇದಿತಾ ಗೌಡ ಅವರ ಈ ಮಾರ್ಮಿಕ ಪೋಸ್ಟ್ ಹೊರಬೀಳುತ್ತಿದ್ದಂತೆಯೇ, ಇದು ಚಂದನ್ ಶೆಟ್ಟಿ ಅವರ ಹೊಸ ಹಾಡಿಗೆ ಮತ್ತು ನೆಟ್ಟಿಗರ ಕಾಮೆಂಟ್‌ಗಳಿಗೆ ನೀಡಿದ ಪರೋಕ್ಷ ತಿರುಗೇಟು ಎಂದೇ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸದ್ಯ ರೀಲ್ಸ್, ಮಾಡೆಲಿಂಗ್, ಫೋಟೋಶೂಟ್ ಹಾಗೂ ಪ್ರವಾಸಗಳಲ್ಲಿ ಸಕ್ರಿಯರಾಗಿರುವ ನಿವೇದಿತಾ ಅವರ ಈ ಮಾತುಗಳು ಇಬ್ಬರ ನಡುವೆ ಆಂತರಿಕವಾಗಿ ಮತ್ತೆ ಜಗಳ ಶುರುವಾಗಿದೆಯೇ ಅಥವಾ ಹಳೆಯ ಕಹಿ ನೆನಪುಗಳ ನೋವು ಇನ್ನೂ ಮಾಸಿಲ್ಲವೇ ಎನ್ನುವ ಕುತೂಹಲವನ್ನು ಸೃಷ್ಟಿಸಿವೆ.