ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇವಲ ಐದೇ ದಿನಕ್ಕೆ ‘ತೆಲುಗು ಬಿಗ್ ಬಾಸ್’ ಮನೆಯಿಂದ ಹೊರಬಿದ್ದ ಕನ್ನಡತಿ ಚೈತ್ರಾ ರೈ: ಶಾಕಿಂಗ್ ಎಲಿಮಿನೇಷನ್‌ಗೆ ಕಾರಣವೇನು?

Chaithra Rai Eviction: ತೆಲುಗು ಬಿಗ್‌ಬಾಸ್ ಮೊದಲ ವಾರವೇ ಸಂಚಲನ ಮೂಡಿಸಿದೆ. ಕೇವಲ ಐದೇ ದಿನಕ್ಕೆ ಕನ್ನಡತಿ ಚೈತ್ರಾ ರೈ ಅನಿರೀಕ್ಷಿತ ಮಿಡ್-ವೀಕ್ ಎಲಿಮಿನೇಷನ್ ಮೂಲಕ ಹೊರಬಿದ್ದಿದ್ದಾರೆ. ಹಸುಗೂಸನ್ನು ಬಿಟ್ಟು ವೃತ್ತಿಬದುಕಿನ ಹೊಸ ಕನಸುಗಳೊಂದಿಗೆ ದೊಡ್ಮನೆ ಪ್ರವೇಶಿಸಿದ್ದ ಚೈತ್ರಾಗೆ ಆಘಾತ ಎದುರಾಗಿದೆ.

ತೆಲುಗು ‘ಬಿಗ್ ಬಾಸ್ ತೆಲುಗು’ ರಿಯಾಲಿಟಿ ಶೋ ಆರಂಭವಾದ ಮೊದಲ ವಾರದಲ್ಲೇ ಭಾರೀ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಸ್ಪರ್ಧಿಗಳ ಯಾವುದೇ ಲೆಕ್ಕಾಚಾರಕ್ಕೂ ಸಿಗದಂತೆ ವಾರದ ಮಧ್ಯದಲ್ಲೇ ಎಲಿಮಿನೇಷನ್ ಶಾಕ್ ನೀಡುತ್ತಿರುವ ಬಿಗ್ ಬಾಸ್, ವೀಕ್ಷಕರಿಗೆ ಸತತ ಅಚ್ಚರಿ ಮೂಡಿಸುತ್ತಿದ್ದಾರೆ.

ಮೊದಲ ಸ್ಪರ್ಧಿಯಾಗಿ ಚರಣ್ ಮನೆಯಿಂದ ಹೊರಬಿದ್ದ ಬೆನ್ನಲ್ಲೇ, ಇದೀಗ ಕನ್ನಡತಿ, ಖ್ಯಾತ ಕಿರುತೆರೆ ನಟಿ ಚೈತ್ರಾ ರೈ ಕೇವಲ ಐದೇ ದಿನಕ್ಕೆ ದೊಡ್ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ. ಮೊದಲ ವಾರದಲ್ಲೇ ಇಬ್ಬರು ಸ್ಪರ್ಧಿಗಳು ‘ಮಿಡ್-ವೀಕ್ ಎಲಿಮಿನೇಷನ್’ ಮೂಲಕ ನಿರ್ಗಮಿಸಿರುವುದು ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

ಮಂಗಳೂರು ಮೂಲದ ನಟಿ ಚೈತ್ರಾ ರೈ ಕನ್ನಡ ಕಿರುತೆರೆಯಲ್ಲಿ ‘ಕುಸುಮಾಂಜಲಿ’, ‘ಬೊಂಬೆಯಾಟವಯ್ಯಾ’, ‘ಯುಗಾದಿ’, ‘ಗೆಜ್ಜೆಪೂಜೆ’, ‘ನಾಗಮಣಿ’, ‘ರಾಧಾ ಕಲ್ಯಾಣ’ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳಲ್ಲಿ ನಟಿಸಿ ಅಪಾರ ಪ್ರೇಕ್ಷಕರನ್ನು ಸಂಪಾದಿಸಿದವರು. ಸುಮಾರು ಹತ್ತು ವರ್ಷಗಳ ಹಿಂದೆ ಪ್ರಸನ್ನ ಶೆಟ್ಟಿ ಅವರನ್ನು ವಿವಾಹವಾಗಿದ್ದ ಚೈತ್ರಾ, ಮೊದಲ ಮಗಳು ನಿಷ್ಕಾ ಶೆಟ್ಟಿ ಜನನದ ಬಳಿಕ ಇತ್ತೀಚೆಗಷ್ಟೇ ಎರಡನೇ ಹೆಣ್ಣು ಮಗು ಪ್ರಿಷ್ಕಾ ಶೆಟ್ಟಿಗೆ ಜನ್ಮ ನೀಡಿದ್ದರು.

10 ತಿಂಗಳ ಹಸುಗೂಸನ್ನು ಗಂಡನ ಮಡಿಲಿನಲ್ಲಿಟ್ಟು ತೆಲುಗು ‘ಬಿಗ್ ಬಾಸ್‌ 10’ ಶೋಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಕನ್ನಡತಿ ಚೈತ್ರಾ ರೈ!

ಇನ್ನೂ ವರ್ಷ ತುಂಬದ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ತೆಲುಗು ಕಿರುತೆರೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಅವರು, ತಮ್ಮ ಕರಿಯರ್‌ನಲ್ಲಿ ಹೊಸ ಅವಕಾಶಗಳನ್ನು ಪಡೆಯುವ ಹಾಗೂ ಕಿರುತೆರೆಯಲ್ಲಿ ತನ್ನನ್ನು ನೋಡಿ ಮಕ್ಕಳು ಹೆಮ್ಮೆಪಡಬೇಕು ಎನ್ನುವ ಉದ್ದೇಶದಿಂದ ಈ ರಿಯಾಲಿಟಿ ಶೋ ಪ್ರವೇಶಿಸಿದ್ದರು.

ಆದರೆ, ಮನೆಯೊಳಗೆ ನಡೆದ ಟ್ವಿಸ್ಟ್‌ಗಳೇ ಅವರ ಪಾಲಿಗೆ ಮುಳುವಾದವು. ಆರನೇ ದಿನದ ಸಂಚಿಕೆಯಲ್ಲಿ ನಡೆದ ಅಗ್ನಿಪರೀಕ್ಷೆಯಲ್ಲಿ ನಿಯಮಗಳು ಸಂಪೂರ್ಣ ಬದಲಾಗಿದ್ದವು. 'ನೋ ರಿಸ್ಕ್' ವಲಯ ತಲುಪಲು ನೀಡಲಾದ ಸುಲಭದ ‘ರನ್ ರಾಜಾ ರನ್’ ಟಾಸ್ಕ್‌ನಲ್ಲಿ ರಾಮ್ ಪ್ರಸಾದ್ ಜಯಗಳಿಸಿ ಸೇಫ್ ಆದರೆ, ತಮಗಿದ್ದ ಅಧಿಕಾರ ಬಳಸಿ ಅಮನ್ ಮಸೂದ್ ಅವರನ್ನು ‘ಹೈ ರಿಸ್ಕ್’ ವಲಯಕ್ಕೆ ತಳ್ಳಿದರು. ಇನ್ನೊಂದೆಡೆ, ಕಷ್ಟದ ಟಾಸ್ಕ್ ಆಯ್ದುಕೊಂಡಿದ್ದ ಸುಧೀರ್ ಹಾಗೂ ನಿರೂಪಕಿ ವರ್ಷಿಣಿಗೆ ಕೇಕ್ ಸಂಬಂಧಿತ 'ಸೀಕ್ರೆಟ್ ಟಾಸ್ಕ್' ನೀಡಲಾಗಿತ್ತು.

ಆದರೆ ಮನೆಯ ಸದಸ್ಯರಾದ ರಾಮ್ ಪ್ರಸಾದ್, ವಂಶಿ ಹಾಗೂ ಮುಖೇಶ್ ಗೌಡ ಎದುರು ಇವರ ನಾಟಕ ಬಯಲಾಯಿತು. ಯಾವುದೇ ಗಂಭೀರತೆ ಇಲ್ಲದೆ ವರ್ತಿಸಿದ ಕಾರಣಕ್ಕೆ ಸಿಟ್ಟಾದ ಬಿಗ್ ಬಾಸ್, ಸುಧೀರ್ ಹಾಗೂ ವರ್ಷಿಣಿ ಇಬ್ಬರನ್ನೂ ನೇರವಾಗಿ ‘ಹೈ ರಿಸ್ಕ್’ ವಲಯಕ್ಕೆ ದೂಡಿದರು.

ಇದರ ಪರಿಣಾಮವಾಗಿ ಸುಧೀರ್, ವರ್ಷಿಣಿ, ಅಮನ್ ಮಸೂದ್ ಹಾಗೂ ಮೊದಲೇ ರಿಸ್ಕ್‌ನಲ್ಲಿದ್ದ ಚೈತ್ರಾ ರೈ ಸೇರಿ ನಾಲ್ವರು ಅಂತಿಮ ಎಲಿಮಿನೇಷನ್ ಕಂಟಕಕ್ಕೆ ಸಿಲುಕಿದರು. ಈ ನಾಲ್ವರ ಪೈಕಿ ಒಬ್ಬರನ್ನು ಎಲಿಮಿನೇಟ್ ಮಾಡಲು ನಡೆದ ಮತದಾನ ಪ್ರಕ್ರಿಯೆಯಲ್ಲಿ ವರ್ಷಿಣಿ, ಸುಧೀರ್ ಮತ್ತು ಅಮನ್ ಮೂವರೂ ಒಗ್ಗಟ್ಟಾಗಿ ಚೈತ್ರಾ ರೈ ಅವರನ್ನು ‘ಅನ್‌ಫಿಟ್’ ಎಂದು ಹೆಸರಿಸಿ ಮತ ಚಲಾಯಿಸಿದರು.

ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಚೈತ್ರಾ, "ನನ್ನ ಸಾಮರ್ಥ್ಯ ಸಾಬೀತುಪಡಿಸಲು ನನಗೆ ಯಾವುದೇ ಸರಿಯಾದ ಟಾಸ್ಕ್ ಸಿಗಲೇ ಇಲ್ಲ. ಅವಕಾಶವೇ ಸಿಗದಿರುವಾಗ ನನ್ನನ್ನು ಆಟಕ್ಕೆ ಅನ್‌ಫಿಟ್ ಎಂದು ತೀರ್ಮಾನಿಸುವುದು ಎಷ್ಟು ಸರಿ?" ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಅಂತಿಮವಾಗಿ ಬಹುಮತದ ನಿರ್ಧಾರದಿಂದಾಗಿ ಚೈತ್ರಾ ರೈ ಅವರು ಕೇವಲ ಐದೇ ದಿನಕ್ಕೆ ದೊಡ್ಮನೆಯಿಂದ ಹೊರಬೀಳುವಂತಾಯಿತು.