ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಮಯ ಉಲ್ಲಂಘಿಸಿ ಬಂಗಲೆ ನವೀಕರಣ; ನಟ ಅಜಯ್ ದೇವಗನ್‌ಗೆ ಶಾಕ್‌ ನೀಡಿದ ಮುಂಬೈ ಪಾಲಿಕೆ!

Ajay Devgn: ಬಾಲಿವುಡ್‌ ನಟ ಅಜಯ್‌ ದೇವ್‌ಗನ್‌ ಅವರು ತಮ್ಮ ಬಂಗಲೆಯನ್ನು ನಿಯಮ ಉಲ್ಲಂಘಿಸಿ ನವೀಕರಣ ಮಾಡಿಸುತ್ತಿದ್ದ ಹಿನ್ನೆಲೆಯಲ್ಲಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜುಹುವಿನ ಪ್ರತಿಷ್ಠಿತ ಬಂಗಲೆಯಲ್ಲಿ ಅನುಮತಿ ಇಲ್ಲದೆ ನಿರ್ಮಿಸಲಾಗಿದ್ದ ಅನಧಿಕೃತ ಗೋಡೆ ಹಾಗೂ ಕಿಟಕಿಗಳ ಭಾಗಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಬಾಲಿವುಡ್‌ ನಟ ಅಜಯ್ ದೇವಗನ್‌ಗೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಬಿಗ್ ಶಾಕ್‌ ನೀಡಿದ್ದಾರೆ. ಮುಂಬೈನ ಪ್ರತಿಷ್ಠಿತ ಜುಹು ಪ್ರದೇಶದಲ್ಲಿರುವ ಅವರ ಐಷಾರಾಮಿ ಬಂಗಲೆಯಲ್ಲಿ ಯಾವುದೇ ಅಧಿಕೃತ ಅನುಮತಿ ಇಲ್ಲದೆ ಕೈಗೊಂಡಿದ್ದ ನಿಯಮಬಾಹಿರ ನಿರ್ಮಾಣಗಳ ವಿರುದ್ಧ ಬಿಎಂಸಿ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕೆಲ ಅನಧಿಕೃತ ಭಾಗಗಳನ್ನು ನೆಲಸಮಗೊಳಿಸಿದ್ದಾರೆ. ಚಿತ್ರರಂಗದ ಪ್ರಮುಖ ನಟನೊಬ್ಬರ ನಿವಾಸದಲ್ಲೇ ಇಂಥದ್ದೊಂದು ತೆರವು ಕಾರ್ಯಾಚರಣೆ ನಡೆದಿರುವುದು ಇದೀಗ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅನುಮತಿ ಪಡೆಯದೆ ಮಾರ್ಪಾಡು

ಜುಹು ವ್ಯಾಪ್ತಿಯ ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ಅಜಯ್ ದೇವಗನ್ ಅವರಿಗೆ ಸೇರಿದ ಸುಮಾರು 7,802 ಚದರ ಅಡಿ ವಿಸ್ತೀರ್ಣದ ಭವ್ಯ ಬಂಗಲೆಯಿದೆ. ಈ ಕಟ್ಟಡದಲ್ಲಿ ಪಾಲಿಕೆಯ ಅನುಮತಿ ಪಡೆಯದೆ ಹಲವು ಮಾರ್ಪಾಡುಗಳನ್ನು ಮಾಡಲಾಗುತ್ತಿರುವುದು ಪರಿಶೀಲನೆ ವೇಳೆ ಪತ್ತೆಯಾಗಿತ್ತು. ಬಂಗಲೆಯ ಒಳಾಂಗಣದಲ್ಲಿ ಅನಧಿಕೃತವಾಗಿ ವಿಭಜನಾ ಗೋಡೆಗಳನ್ನು ನಿರ್ಮಿಸಿರುವುದು, ಕಿಟಕಿಗಳ ಮೂಲ ವಿನ್ಯಾಸವನ್ನು ಬದಲಾಯಿಸಿರುವುದು ಸೇರಿದಂತೆ ಇನ್ನಿತರ ಪ್ರಮುಖ ಮಾರ್ಪಾಡುಗಳನ್ನು ಕೈಗೊಳ್ಳಲಾಗಿತ್ತು. ಯಾವುದೇ ಕಟ್ಟಡ ನಿಯಮಾವಳಿಗಳಿಗೆ ಒಳಪಡದೆ ಹಾಗೂ ಸೂಕ್ತ ಪರವಾನಗಿ ಇಲ್ಲದೆ ಈ ಕಾಮಗಾರಿಗಳು ಸಾಗುತ್ತಿದ್ದವು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಜಯ್‌ ದೇವ್‌ಗನ್‌ಗೆ ಭರ್ಜರಿ ಗೆಲುವು ತಂದುಕೊಟ್ಟ 'ದೃಶ್ಯಂ 3'; 10 ದಿನಗಳಲ್ಲಿ ವಿಶ್ವಾದ್ಯಂತ ಆದ ಗಳಿಕೆ ಎಷ್ಟು?

ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದ ಅಜಯ್‌ ದೇವ್‌ಗನ್

ಅಕ್ರಮವಾಗಿ ಮಾಡುತ್ತಿದ್ದ ಈ ಮಾರ್ಪಾಡುಗಳ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಎಚ್ಚೆತ್ತ ಬಿಎಂಸಿ ಅಧಿಕಾರಿಗಳು, ಕಳೆದ ಸೆಪ್ಟೆಂಬರ್ 10 ರಂದೇ ಅಜಯ್ ದೇವಗನ್‌ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ನಿಯಮಬಾಹಿರವಾಗಿ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು, ಕೈಗೊಂಡಿರುವ ಬದಲಾವಣೆಗಳಿಗೆ ಸಂಬಂಧಿಸಿದ ಅಧಿಕೃತ ಅನುಮತಿ ಪತ್ರಗಳನ್ನು ಪ್ರಾಧಿಕಾರದ ಮುಂದೆ ಹಾಜರುಪಡಿಸಬೇಕು ಎಂದು ತಾಕೀತು ಮಾಡಿದ್ದರು. ಆದರೆ, ಪಾಲಿಕೆಯ ಎಚ್ಚರಿಕೆಯ ಹೊರತಾಗಿಯೂ ಬಂಗಲೆಯಲ್ಲಿ ನಿರ್ಮಾಣ ಕಾಮಗಾರಿ ನಿರಂತರವಾಗಿ ಮುಂದುವರಿದಿತ್ತು.

ಅಖಾಡಕ್ಕೆ ಇಳಿದ ಪಾಲಿಗೆ ಅಧಿಕಾರಿಗಳು

ನೋಟಿಸ್ ನೀಡಿದರೂ ಯಾವುದೇ ಸೂಕ್ತ ದಾಖಲೆಗಳನ್ನು ನೀಡದೆ, ಕಾಮಗಾರಿಯನ್ನೂ ನಿಲ್ಲಿಸದೇ ಇದ್ದುದನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಸಿ ಅಧಿಕಾರಿಗಳು ಅಂತಿಮವಾಗಿ ತೆರವು ಕಾರ್ಯಾಚರಣೆಗೆ ಇಳಿದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡವು ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿದ್ದ ಕೆಲ ಭಾಗಗಳನ್ನು ಯಂತ್ರಗಳ ಮೂಲಕ ತೆರವುಗೊಳಿಸಿದೆ. ಅಜಯ್‌ ದೇವ್‌ಗನ್‌ ಅವರು ನಿಮಯ ಉಲ್ಲಂಘಿಸಿ ಬಂಗಲೆ ನವೀಕರಣಕ್ಕೆ ಕೈಹಾಕಿ ಪಾಲಿಕೆಯ ಕೆಂಗಣ್ಣಿಗೆ ಗುರಿಯಾಗಿರುವುದು ಸಾರ್ವಜನಿಕ ವಲಯದಲ್ಲೂ ತೀವ್ರ ಕುತೂಹಲ ಮೂಡಿಸಿದೆ.

ಈ ಮಧ್ಯೆ ನಟ ಅಜಯ್ ದೇವಗನ್ ಅವರ ತಂಡ ಅಧಿಕೃತ ಸ್ಪಷ್ಟನೆ ನೀಡಿದ್ದು, ಸದರಿ ಜಾಗವನ್ನು ಬಾಡಿಗೆಗೆ ನೀಡಲಾಗಿದ್ದು, ಅದು ನಟನ ಸ್ವಂತ ನಿವಾಸವಲ್ಲ ಎಂದು ಸ್ಪಷ್ಟಪಡಿಸಿದೆ. "ಈ ವಿಚಾರದಲ್ಲಿ ನಾವು ಸ್ಪಷ್ಟನೆ ನೀಡಲು ಬಯಸುವುದೇನೆಂದರೆ, ವಿವಾದಕ್ಕೆ ಒಳಗಾಗಿರುವ ಆಸ್ತಿಯು ಅಜಯ್ ದೇವಗನ್ ಅವರ ನಿವಾಸವಲ್ಲ, ಬದಲಾಗಿ ಅದು ಬಾಡಿಗೆಗೆ ನೀಡಲಾಗಿರುವ ಪ್ರತ್ಯೇಕ ಕಟ್ಟಡವಾಗಿದೆ. ನಮ್ಮ ಈ ಆಸ್ತಿಗೆ ಸಂಬಂಧಿಸಿದಂತೆ ಅಗತ್ಯವಿರುವ ಅನುಮತಿಗಳಿಗಾಗಿ ನಾವು ಬಿಎಂಸಿಗೆ ಅರ್ಜಿ ಸಲ್ಲಿಸಿದ್ದೇವೆ ಹಾಗೂ ಬಿಎಂಸಿಯ ಎಲ್ಲಾ ನಿಯಮಗಳು, ನಿಬಂಧನೆಗಳು ಮತ್ತು ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದೇವೆ. ಜೊತೆಗೆ, ಬಿಎಂಸಿ ಸೂಚಿಸಿರುವ ಅಗತ್ಯ ಬದಲಾವಣೆಗಳು ಮತ್ತು ಮಾರ್ಪಾಡುಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.