ಮುಂಬೈ: ಬಾಲಿವುಡ್ ಹಿರಿಯ ನಟ ಗೋವಿಂದ (Govinda) ಒಂದು ಕಾಲದಲ್ಲಿ ಬಹು ಬೇಡಿಕೆಯ ನಟರಾಗಿದ್ದರು. ಕಾಮಿಡಿ ಪಾತ್ರಗಳಲ್ಲಿ ಅತೀ ಹೆಚ್ಚು ಮಿಂಚಿದ್ದ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇತ್ತೀಚೆಗೆ ಸಿನಿಮಾದಿಂದ ದೂರ ಉಳಿದ ಅವರು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪತ್ನಿ ಜತೆಗೆ ವೈಮನಸ್ಸು ಹೊಂದಿದ್ದಾರೆ ಎಂಬ ವಿಚಾರಕ್ಕೆ ಅವರು ಆಗಾಗ ಸುದ್ದಿಯಲ್ಲಿರುತ್ತಿದ್ದರು. ಈ ಮಧ್ಯೆ ಅವರ ಆರೋಗ್ಯ ಸ್ಥಿತಿ ಏರುಪೇರಾಗಿದ್ದು ಮನೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಮುಂಬೈಯ ಜುಹುವಿನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ಗೋವಿಂದ ಅವರಿಗೆ ಏನಾಗಿದೆ? ಅವರ ಆರೋಗ್ಯದ ಸ್ಥಿತಿ ಈ ಹೇಗಿದೆ? ಎಂಬ ವಿಚಾರದ ಬಗ್ಗೆ ಅವರ ಸ್ನೇಹಿತರಾದ, ಕಾನೂನು ಸಲಹೆಗಾರ ಲಲಿತ್ ಬಿಂದಾಲ್ (Lalit Bindal) ಮತ್ತು ಮ್ಯಾನೇ ಜರ್ ಶಶಿ ಸಿನ್ಹಾ (Shashi Sinha) ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಗೋವಿಂದ ಅವರ ಆರೋಗ್ಯದ ಕುರಿತು ಬಿಂದಾಲ್ ಮಾತನಾಡಿ, ʼʼಗೋವಿಂದ ತಮ್ಮ ನಿವಾಸದಲ್ಲಿ ರಾತ್ರಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಳಿಕ ಅವರ ಮನೆಯಿಂದ ನನಗೆ ಕರೆ ಬಂದಿದ್ದು ನಾನು ಕೂಡಲೇ ಅವರನ್ನು ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಿದ್ದೇನೆ. ಸದ್ಯ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಳ್ಲಲಿದ್ದಾರೆʼʼ ಎಂದರು.
ಶಶಿ ಸಿನ್ಹಾ ಈ ಬಗ್ಗೆ ಮಾತನಾಡಿ, ʼʼಅವರಿಗೆ ತೀವ್ರ ತಲೆನೋವು ಇತ್ತು. ಆಗಾಗ ತಲೆಯಲ್ಲಿ ಭಾರ ವಿದ್ದಂತೆ ಫೀಲ್ ಆಗುತ್ತದೆ ಎಂದು ಕೂಡ ಹೇಳಿಕೊಳ್ಳುತ್ತಿದ್ದರು. ಒಂದೆರೆಡು ಸಲ ತಲೆ ತಿರುಗಿತ್ತು ಎಂದು ಹೇಳಿಕೊಂಡಿದ್ದು ಇದೆ. ಹಾಗಾಗಿ ಇದೇ ಕಾರಣದಿಂದಾಗಿ ಅವರು ಮೂರ್ಛೆ ಹೋಗಿರಬಹುದು. ಈ ಸಮಸ್ಯೆಗೆ ಅವರನ್ನು ನರವಿಜ್ಞಾನಿಗಳನ್ನು ಭೇಟಿ ಮಾಡಲು ಸೂಚಿಸಿದ್ದಾರೆʼʼ ಎಂದು ತಿಳಿಸಿದರು.
ಇದನ್ನು ಓದಿ:GST Movie: ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ʼGSTʼ ಚಿತ್ರದ ಟ್ರೇಲರ್ ಔಟ್; ನ.28ಕ್ಕೆ ಸಿನಿಮಾ ರಿಲೀಸ್
ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಧರ್ಮೇಂದ್ರ ಅವರನ್ನು ನೋಡಲು ಗೋವಿಂದ ಹೋಗಿದ್ದರು. ಅದಾಗಿ ಒಂದು ದಿನದ ನಂತರ ಗೋವಿಂದ ಅವರಿಗೂ ತಲೆನೋವಿನ ಸಮಸ್ಯೆ ತೀವ್ರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ . ಅವರು ಆಸ್ಪತ್ರೆಗೆ ತಮ್ಮದೆ ಕಾರಿನಲ್ಲಿ ತೆರಳುತ್ತಿದ್ದ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ನಟ ಗೋವಿಂದ ಕಳೆದ ಒಂದು ವರ್ಷದಲ್ಲಿ ಎರಡು ಸಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಗಿದ್ದರು. ಅವರ ಮೊಣಕಾಲಿನ ಕೆಳಗೆ ಗಾಯವಾಗಿದ್ದು ಗುಂಡನ್ನು ಸುರಕ್ಷಿತವಾಗಿ ತೆಗೆದು ಹಾಕಲಾಗಿತ್ತು. ಸದ್ಯ ನಟ ಗೋವಿಂದ ಅವರನ್ನು ಡಿಸ್‌ಚಾರ್ಚ್ ಮಾಡಲಾಗಿದ್ದು ಹೆವಿ ವರ್ಕೌಟ್ ಮಾಡುದಕ್ಕಿಂತಲೂ ಯೋಗ, ಪ್ರಾಣಾಯಾಮ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.