ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ, ದೆಹಲಿ ಹೈಕೋರ್ಟ್ ಹೇಳಿದ್ದೇನು?

ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಹಾಗೂ ಸಾಲ ಮರುಪಾವತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 3 ತಿಂಗಳ ಸರಳ ಜೈಲು ಶಿಕ್ಷೆ ಮತ್ತು ಕೋಟಿಗಟ್ಟಲೆ ದಂಡ ವಿಧಿಸಿದೆ. ಪದೇಪದೇ ಕೊಟ್ಟ ಭರವಸೆಯನ್ನು ಈಡೇರಿಸದ ನಟ ರಾಜ್‌ಪಾಲ್‌ಗೆ ವಿನಾಯಿತಿ ನಿರಾಕರಿಸಿರುವ ಕೋರ್ಟ್, ಮೇಲ್ಮನವಿಗಾಗಿ 2 ತಿಂಗಳ ಕಾಲ ತೀರ್ಪು ಜಾರಿಗೆ ತಡೆ ನೀಡಿದೆ.

ವಿವಾದವನ್ನು ಇತ್ಯರ್ಥಪಡಿಸುವುದಾಗಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲರಾದ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಸಾಲ ಮರುಪಾವತಿ ಹಾಗೂ ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಟನ ಅಪರಾಧ ನಿರ್ಣಯವನ್ನು ಎತ್ತಿಹಿಡಿದಿರುವ ನ್ಯಾಯಾಲಯವು, 3 ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಏಕಕಾಲದಲ್ಲಿ ಶಿಕ್ಷೆ ಜಾರಿ

ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಪೀಠವು ನಟನ ಮೇಲಿನ ದೋಷಾರೋಪಣೆಯನ್ನು ಖಚಿತಪಡಿಸಿದೆ. ಒಟ್ಟು 7 ಪ್ರಕರಣಗಳ ಪೈಕಿ ಪ್ರತಿಯೊಂದರಲ್ಲೂ ನಟನಿಗೆ 3 ತಿಂಗಳ ಸರಳ ಸಜೆ ವಿಧಿಸಲಾಗಿದ್ದು, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರಲಿವೆ ಎಂದು ಸ್ಪಷ್ಟಪಡಿಸಿದೆ. ಈ ಹಿಂದೆ ವಿಚಾರಣಾ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯಗಳು ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯ ಅವಧಿಯನ್ನು ಹೈಕೋರ್ಟ್ ಇದೀಗ 3 ತಿಂಗಳಿಗೆ ಕಡಿತಗೊಳಿಸಿ ಮಾರ್ಪಡಿಸಿದೆ.

ಕೋಟಿಗಟ್ಟಲೆ ದಂಡ!

ಜೈಲು ಶಿಕ್ಷೆಯ ಜೊತೆಗೆ ಹೈಕೋರ್ಟ್ ಭಾರಿ ಮೊತ್ತದ ದಂಡವನ್ನೂ ವಿಧಿಸಿದೆ. 7 ಪ್ರಕರಣಗಳ ಪೈಕಿ ಪ್ರತಿಯೊಂದರಲ್ಲೂ ದೂರುದಾರರಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ರಾಜ್‌ಪಾಲ್ ಯಾದವ್ ಅವರಿಗೆ ನಿರ್ದೇಶನ ನೀಡಲಾಗಿದೆ. ಹೆಚ್ಚುವರಿಯಾಗಿ ದೂರುದಾರರಿಗೆ 1.04 ಲಕ್ಷ ರೂ. ಮತ್ತು 75,000 ರೂ.ಗಳನ್ನು ಹಾಗೂ ರಾಜ್ಯ ಸರ್ಕಾರಕ್ಕೆ 25,000 ರೂ. ಪಾವತಿಸಲು ಆದೇಶಿಸಿದೆ. ನಟ ರಾಜ್‌ಪಾಲ್‌ ಪತ್ನಿ ರಾಧಾ ಯಾದವ್ ಅವರು ಪ್ರತಿ ಪ್ರಕರಣದಲ್ಲಿ ದೂರುದಾರರಿಗೆ ತಲಾ 5,51,380 ರೂಪಾಯಿಗಳನ್ನು ಪಾವತಿಸಬೇಕಿದೆ. ನಟ ರಾಜ್‌ಪಾಲ್‌ ಈಗಾಗಲೇ ಠೇವಣಿ ಇಟ್ಟಿರುವ 2.25 ಕೋಟಿ ರೂಪಾಯಿಗಳನ್ನು ಅಂತಿಮ ಮೊತ್ತದಲ್ಲಿ ಸರಿದೂಗಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ಏನು, ರಾಜ್‌ಪಾಲ್‌ ಯಾದವ್‌ ಜೈಲಿಂದ ರಿಲೀಸ್‌ ಆದ್ರಾ? 9 ಕೋಟಿ ಸಾಲವನ್ನ ಸಲ್ಮಾನ್‌ ಖಾನ್‌ ತೀರಿಸಿದ್ರಾ? ಇಲ್ಲಿದೆ ನೋಡಿ ಅಸಲಿ ಸತ್ಯ!

ಪ್ರಕರಣದ ಹಿನ್ನೆಲೆ ಏನು?

ರಾಜ್‌ಪಾಲ್ ಯಾದವ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ 'ಅತಾ ಪತಾ ಲಾಪತಾ' ಚಿತ್ರದ ನಿರ್ಮಾಣಕ್ಕಾಗಿ 2010 ರಲ್ಲಿ ದೆಹಲಿ ಮೂಲದ ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ, 2012ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಯನೀಯವಾಗಿ ಸೋತಿತು. ಇದರಿಂದಾಗಿ ನಟನಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮುಂದುವರಿದಿತ್ತು. ಸಾಲದ ಬಾಕಿ ಮೊತ್ತವು ಬಡ್ಡಿ ಸೇರಿ ಸುಮಾರು 9 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ನಟ ನೀಡಿದ್ದ ಚೆಕ್‌ಗಳು ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆದ ಹಿನ್ನೆಲೆಯಲ್ಲಿ ಸಂಸ್ಥೆಯು 'ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್'ನ ಸೆಕ್ಷನ್ 138 ರ ಅಡಿಯಲ್ಲಿ ದೂರು ದಾಖಲಿಸಿತ್ತು.‌

ರಾಜ್‌ಪಾಲ್‌ ಯಾದವ್‌ ಬದುಕಿಗೆ ಮುಳ್ಳಾದ ʻಆ ಒಂದುʼ ಸಿನಿಮಾ! ʻಸ್ನೇಹಿತರಿಲ್ಲ, ದುಡ್ಡೂ ಇಲ್ಲ, ನಾನೇನು ಮಾಡಲಿʼ ಎನ್ನುತ್ತಾ ತಿಹಾರ್‌ ಜೈಲು ಸೇರಿದ ನಟ!

ವಿನಾಯಿತಿ ನಿರಾಕರಣೆ, ಮೇಲ್ಮನವಿಗೆ ಅವಕಾಶ

'ಅಪರಾಧಿಗಳ ಪರಿವರ್ತನಾ ಕಾಯ್ದೆ'ಯ ಅಡಿಯಲ್ಲಿ ತಮಗೆ ವಿನಾಯಿತಿ ನೀಡಬೇಕು ಎಂಬ ಯಾದವ್ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಹಣ ಪಾವತಿಸುವುದಾಗಿ ಲಿಖಿತ ಭರವಸೆ ನೀಡಿದ್ದರೂ ಪದೇಪದೇ ಅವರು ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಆದಾಗ್ಯೂ, ನಟ ರಾಜ್‌ಪಾಲ್‌ ಉನ್ನತ ನ್ಯಾಯಾಲಯದಲ್ಲಿ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ದೆಹಲಿ ಹೈಕೋರ್ಟ್ ತನ್ನ ತೀರ್ಪಿನ ಜಾರಿಯನ್ನು 2 ತಿಂಗಳ ಕಾಲ ತಡೆಹಿಡಿದಿದೆ.