ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

50 ಅಡಿ ಎತ್ತರದ ದರ್ಶನ್‌ ಕಟೌಟ್‌ ಎದುರು ಭರ್ಜರಿ ಫೈಟ್‌ ಮಾಡಿದ ʻದೇವಿʼ; ʻಶಾಸ್ತ್ರಿʼ ಮುಂದೆ ಯುವರೈತನ ಆಕ್ಷನ್‌ ಅಬ್ಬರ!

ʻದೇವಿʼ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಬೆಂಗಳೂರಿನ ಚಿತ್ರಮಂದಿರವೊಂದರ ಬಳಿ ಭರದಿಂದ ಸಾಗಿದೆ. ನಟ ದರ್ಶನ್ ಅವರ 50 ಅಡಿ ಕಟೌಟ್ ಎದುರು ಮಂಡ್ಯದ ಯುವ ರೈತ ಚೇತನ್ ಗೌಡ ನಾಯಕನಾಗಿ ಅಬ್ಬರಿಸಿದ್ದಾರೆ. ಭವ್ಯ ಗೌಡ ನಾಯಕಿಯಾಗಿದ್ದು, ಹಳ್ಳಿಯಿಂದ ಬಂದ ಯುವಕ ರೌಡಿಸಂ ಸುಳಿಗೆ ಸಿಲುಕುವ ಕಥಾಹಂದರವನ್ನು ನಿರ್ದೇಶಕ ಪ್ರಕಾಶ್ ಕುಮಾರ್ ಕಟ್ಟಿಕೊಡುತ್ತಿದ್ದಾರೆ.

ಮಂಡ್ಯದ ಯುವ ರೈತ ಚೇತನ್‌ ಗೌಡ ಅವರು ನಾಯಕನಾಗಿ ನಟಿಸುತ್ತಿರುವ ʻದೇವಿʼ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ನಡೆಯುತ್ತಿದೆ. 'ಬಿಗ್ ಬಾಸ್‌' ಖ್ಯಾತಿಯ ಭವ್ಯಗೌಡ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. 'ದೇವಿ' ಶೀರ್ಷಿಕೆಯೊಂದಿಗೆ "ಅಮ್ಮ ಅಂದ್ರೆ ತುಪ್ಪ, ಅಮ್ಮನ್ ಅಂದ್ರೆ ಹಾಲು-ತುಪ್ಪ" ಎನ್ನುವ ಅಡಿಬರಹವಿದೆ. ಚೇತನ್‌ಗೌಡ ಅವರೇ ಕಥೆ ಮತ್ತು ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕೆ ಪ್ರಕಾಶ್‌ಕುಮಾರ್ ಆ್ಯಕ್ಷನ್- ಕಟ್ ಹೇಳುತ್ತಿದ್ದಾರೆ.

50 ಅಡಿ ಎತ್ತರದ ದರ್ಶನ್‌ ಕಟೌಟ್

ಕಳೆದ ಎರಡು ದಿನಗಳಿಂದ ಲಗ್ಗೆರೆಯ ಆಕಾಶ್ ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದ ನಟ ದರ್ಶನ್‌ ಅವರ 50 ಅಡಿ ಎತ್ತರದ ಕಟೌಟ್ ಮುಂದೆ ಸಾಹಸ ದೃಶ್ಯದ ಚಿತ್ರೀಕರಣ ನಡೆಯಿತು. ದಿಲೀಪ್ ಅವರು ಈ ಸಾಹಸ ದೃಶ್ಯವನ್ನು ಸಂಯೋಜಿಸುತ್ತಿದ್ದಾರೆ. ನಾಯಕ ಚೇತನ್‌ಗೌಡ ಹಾಗೂ ನೂರಾರು ಸಹ ಕಲಾವಿದರ ಜೊತೆಗೆ ನಟರಾದ ಹುಲಿ ಕಾರ್ತಿಕ್, ಜಗ್ಗ ಮಮ್ಮಿ, ಕಾಕ್ರೋಚ್ ಸುಧಿ ಹಾಗೂ ಯಶ್ ಶೆಟ್ಟಿ ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ ಜೈಲಿನಲ್ಲಿ ಸಾಹಸ ದೃಶ್ಯದ ಚಿತ್ರೀಕರಣ

ಈ ವೇಳೆ ಮಾತನಾಡಿದ ನಾಯಕ ನಟ ಚೇತನ್‌ ಗೌಡ, "ಸಾಧನೆ ಮಾಡಲೆಂದು ಹಳ್ಳಿಯಿಂದ ನಗರಕ್ಕೆ ಬಂದ ಹುಡುಗನೊಬ್ಬ ಸಂದರ್ಭದ ಸುಳಿಗೆ ಸಿಕ್ಕು ರೌಡಿಸಂಗೆ ಇಳಿಯುವ ಕಥೆಯಿದು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ನಾನು ದರ್ಶನ್ ಅವರ ಅಭಿಮಾನಿ; ಚಿತ್ರದಲ್ಲೂ ಅವರ ಅಭಿಮಾನಿಯಾಗಿಯೇ ನಟಿಸಿದ್ದೇನೆ. 'ಶಾಸ್ತ್ರಿ' ಸಿನಿಮಾ ಮರುಬಿಡುಗಡೆಯಾದಾಗ, ನಾಯಕ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ಸಂದರ್ಭದಲ್ಲಿ ಖಳನಾಯಕರ ಜೊತೆ ನಡೆಯುವ ಸಾಹಸ ದೃಶ್ಯವನ್ನು ಇಲ್ಲಿ ಚಿತ್ರೀಕರಿಸುತ್ತಿದ್ದೇವೆ. ಶರತ್ ಬಾಬು ಅವರು ಚಿತ್ರದ ಮುಖ್ಯ ಖಳನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಜೈಲಿನಲ್ಲಿಯೂ ಒಂದು ಸಾಹಸ ದೃಶ್ಯದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೇವೆ. 'ಶಾಸ್ತ್ರಿ' ಚಿತ್ರದ ನಿರ್ಮಾಪಕರಾದ ಅಣಜಿ ನಾಗರಾಜ್ ಕೂಡ ನಮಗೆ ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ" ಎಂದು ತಿಳಿಸಿದರು.

Star Saree Fashion 2026: ಭವ್ಯಾ ಗೌಡ ಅವರಂತೆ ಕಾಟನ್‌ ಸೀರೆಯಲ್ಲಿ ಕಾಣಲು ಇಲ್ಲಿವೆ 5 ಸಿಂಪಲ್‌ ಟಿಪ್ಸ್

45 ದಿನಗಳ ಚಿತ್ರೀಕರಣ ಬಾಕಿಯಿದೆ

ನಿರ್ದೇಶಕ ಪ್ರಕಾಶ್‌ಕುಮಾರ್ ಮಾತನಾಡಿ, "ಇದು ಚಿತ್ರದ ಪ್ರಮುಖ ಸಾಹಸ ದೃಶ್ಯ. ಈಗಾಗಲೇ ಏಳೆಂಟು ದಿನಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೂ 45 ದಿನಗಳ ಚಿತ್ರೀಕರಣ ಬಾಕಿಯಿದೆ. ಚಿತ್ರದ ಹೀರೋ ದರ್ಶನ್ ಅವರ ಅಭಿಮಾನಿಯಾಗಿದ್ದು, ಆತನ ಕೈಯಲ್ಲಿ ಮಚ್ಚು ಹಿಡಿಸಿಲ್ಲವಾದರೂ ದರ್ಶನ್ ಅವರ ಮ್ಯಾನರಿಸಂ ಆತನಲ್ಲಿರುತ್ತದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ. ಮಂಡ್ಯದಲ್ಲಿ 10 ದಿನ ಹಾಗೂ ನಂತರ ಮತ್ತೆ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಸಲಾಗುವುದು" ಎಂದರು.

ನಾಯಕಿಯ ಅಣ್ಣನ ಪಾತ್ರದಲ್ಲಿ ಯಶ್ ಶೆಟ್ಟಿ

ನಟ ಯಶ್ ಶೆಟ್ಟಿ ಮಾತನಾಡಿ, "ಚಿತ್ರದಲ್ಲಿ ನಾಯಕಿಯ ಅಣ್ಣನ ಪಾತ್ರ ಮಾಡಿದ್ದೇನೆ. ಆರಂಭದಲ್ಲಿ ಕೆಟ್ಟವನಾಗಿದ್ದರೂ ನಂತರ ಒಳ್ಳೆಯವನಾಗುವ ಪಾತ್ರವಿದು" ಎಂದರು. ಹುಲಿ ಕಾರ್ತಿಕ್ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಯಶಸ್ವಿಯಾಗುವುದೇ ವಿರಳವಾಗಿದೆ. ಇಂತಹ ಸಂದರ್ಭದಲ್ಲಿ ಚೇತನ್‌ ಗೌಡರಂತಹ ನಟ-ನಿರ್ಮಾಪಕರು ಚಿತ್ರರಂಗದಲ್ಲಿ ಬೆಳೆಯಬೇಕು" ಎಂದರು.

ಉಳಿದಂತೆ ಜಗ್ಗ, ಕಾಕ್ರೋಚ್ ಸುಧಿ ಹಾಗೂ ನಾಯಕಿಯ ಸ್ನೇಹಿತೆಯಾಗಿ ನಟಿಸಿರುವ ಶ್ರೇಯಾ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಆ್ಯಕ್ಷನ್ ಹಾಗೂ ತಾಯಿ ಸೆಂಟಿಮೆಂಟ್ ಸೇರಿದಂತೆ ಹಲವು ಆಕರ್ಷಕ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಅಜಿತ್‌ಕುಮಾರ್ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಹಾಗೂ ಮಾಸ್ತಿ ಅವರ ಸಂಭಾಷಣೆಯಿದೆ.