ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Lakshmiputhra Review: ʻಲಕ್ಷ್ಮೀಪುತ್ರʼನ ಅಡ್ಡದಲ್ಲಿ ಹಾಸ್ಯವೇ ಹೈಲೈಟು, ಅದಕ್ಕಿಂತ ಜಾಸ್ತಿಯಿದೆ ಮದರ್‌ ಸೆಂಟಿಮೆಂಟ್‌!

Lakshmiputhra Kannada Movie Review: ನಟ ಚಿಕ್ಕಣ್ಣ, ವಂದಿತಾ, ತಾರಾ ಅನುರಾಧಾ ಮುಂತಾದವರು ಮುಖ್ಯಭೂಮಿಕೆಯಲ್ಲಿರುವ ‘ಲಕ್ಷ್ಮೀಪುತ್ರ’ ಸಿನಿಮಾ ಈ ವಾರ (ನ.27) ತೆರೆಕಂಡಿದೆ. ಕಾಮಿಡಿಯ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರು ಇಷ್ಟಪಡುವ ಮದರ್‌ ಸೆಂಟಿಮೆಂಟ್ ಕೂಡ ಈ ಸಿನಿಮಾದಲ್ಲಿದೆ.

ಸಿನಿಮಾ: ಲಕ್ಷ್ಮೀಪುತ್ರ

ತಾರಾಗಣ: ಚಿಕ್ಕಣ್ಣ, ವಂದಿತಾ, ತಾರಾ ಅನುರಾಧ, ಧರ್ಮಣ್ಣ ಕಡೂರು, ಕುರಿ ಪ್ರತಾಪ್‌, ಮಿತ್ರ, ಮಂಜುನಾಥ್‌ ಹೆಗಡೆ, ಶಿವರಾಜ್‌ ಕೆ.ಆರ್.‌ ಪೇಟೆ, ಮನೋಹರ್‌

ನಿರ್ದೇಶನ: ವಿಜಯ್‌ ಎಸ್‌. ಸ್ವಾಮಿ

ಸಂಗೀತ: ಅರ್ಜುನ್‌ ಜನ್ಯ

ನಿರ್ಮಾಣ: ಎ.ಪಿ.‌ ಅರ್ಜುನ್

ಅವಧಿ: 2 ಗಂಟೆ 28 ನಿಮಿಷ

ರೇಟಿಂಗ್: 3/5

ಹಾಸ್ಯ ನಟನಾಗಿ ಕನ್ನಡಿಗರ ಮನಗೆದ್ದಿದ್ದ ಚಿಕ್ಕಣ್ಣ, ʻಉಪಾಧ್ಯಕ್ಷʼ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಬಡ್ತಿ ಪಡೆದು ಮೊದಲ ಪ್ರಯತ್ನದಲ್ಲೇ ಭರ್ಜರಿ ಯಶಸ್ಸು ಗಳಿಸಿದ್ದರು. ಇದೀಗ ʻಲಕ್ಷ್ಮೀಪುತ್ರʼ ಸಿನಿಮಾದ ಮೂಲಕ ಮತ್ತೊಮ್ಮೆ ನಾಯಕನಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಎ.ಪಿ. ಅರ್ಜುನ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಎಷ್ಟರಮಟ್ಟಿಗೆ ತಲುಪಿದೆ? ಇಲ್ಲಿದೆ ಸಂಪೂರ್ಣ ವಿಮರ್ಶೆ.

ʻಲಕ್ಷ್ಮೀಪುತ್ರʼನ ಕಥಾಹಂದರ ಏನು?

ತಾನು ಮದುವೆಯಾದರೆ ಅದು ʻಲವ್ ಮ್ಯಾರೇಜ್ʼ ಮಾತ್ರ ಆಗಿರಬೇಕು ಎಂಬುದು ಹಳ್ಳಿ ಯುವಕ ಕೃಷ್ಣನ (ಚಿಕ್ಕಣ್ಣ) ಅಚಲ ನಿರ್ಧಾರ. ಮಗನ ಪ್ರತಿಯೊಂದು ಹೆಜ್ಜೆಗೂ ಬೆಂಗಾವಲಾಗಿ ನಿಲ್ಲುವ ಪ್ರೀತಿಯ ತಾಯಿ ಲಕ್ಷ್ಮೀ (ತಾರಾ). ಮಗನಿಗೊಂದು ಒಳ್ಳೆಯ ಹೆಣ್ಣು ನೋಡಿ ಮದುವೆ ಮಾಡಿ, ತಾನೊಮ್ಮೆ ಕಾಶಿ ಯಾತ್ರೆಗೆ ಹೋಗಿ ಬರಬೇಕು ಎಂಬುದು ಆಕೆಯ ಮಹದಾಸೆ. ಇದಕ್ಕಾಗಿ ಹತ್ತಾರು ಹುಡುಗಿಯರನ್ನು ನೋಡಿದರೂ ಕೃಷ್ಣ ಮಾತ್ರ "ಲವ್ ಮ್ಯಾರೇಜ್‌ಗಷ್ಟೇ ನನ್ನ ಓಟು" ಎಂದು ಪಟ್ಟು ಹಿಡಿಯುತ್ತಾನೆ. ಈ ನಡುವೆ ಸುಂದರ ಯುವತಿಯೊಬ್ಬಳ ಮೇಲೆ ಕೃಷ್ಣನಿಗೆ ಪ್ರೇಮಾಂಕುರವಾಗುತ್ತದೆ.

ಪ್ರೀತಿ, ಹಾಡು-ಹಸೆ ಅಂತೆಲ್ಲಾ ಕಥೆ ಸುಸೂತ್ರವಾಗಿ ಸಾಗುತ್ತಾ, ಅಬ್ಬಾ, ನಮ್ ಕೃಷ್ಣನ್‌ ಲೈಫ್‌ ಸೆಟಲ್‌ ಆಯ್ತು ಎಂದು ಪ್ರೇಕ್ಷಕರು ನಿರಾಳರಾಗಿ ಸೀಟಿಗೆ ಒರಗಿಕೊಳ್ಳುವ ಹೊತ್ತಿಗೇ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಆ ಟ್ವಿಸ್ಟ್‌ಗಳು ಪ್ರೇಕ್ಷಕನನ್ನು ಸೀಟಿನ ತುದಿಗೆ ಕೂರಿಸುತ್ತವೆ! ಅಷ್ಟಕ್ಕೂ ಆ ಟ್ವಿಸ್ಟ್‌ಗಳೇನು? ಕೃಷ್ಣನ ಪ್ರೀತಿ ಮತ್ತು ತಾಯಿಯ ಆಸೆ ಈಡೇರುತ್ತದೆಯೇ? ಎಂಬುದನ್ನು ಬೆಳ್ಳಿತೆರೆಯ ಮೇಲೆಯೇ ನೋಡಬೇಕು.

ಕಲಾವಿದರ ಅಭಿನಯ ಹೇಗಿದೆ?

ಮೂಲತಃ ಹಳ್ಳಿಯಿಂದ ಬಂದಿರುವ ಚಿಕ್ಕಣ್ಣ, ಕೃಷ್ಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಕಾಮಿಡಿ ಟೈಮಿಂಗ್ ಬಗ್ಗೆ ಎರಡು ಮಾತಿಲ್ಲ. ಆದರೆ, ಈ ಬಾರಿ ಕೇವಲ ನಗಿಸುವುದಷ್ಟೇ ಅಲ್ಲದೆ, ಲವರ್ ಬಾಯ್ ಆಗಿ ಮಿಂಚಿದ್ದಾರೆ ಮತ್ತು ಭಾವನಾತ್ಮಕ ದೃಶ್ಯಗಳಲ್ಲಿ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ನಟಿಸಿ ಗಮನ ಸೆಳೆಯುತ್ತಾರೆ. ತಾಯಿ ಲಕ್ಷ್ಮೀ ಪಾತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧ ಎಂದಿನಂತೆ ತಮ್ಮ ಅನುಭವದ ನಟನೆಯಿಂದ ನೋಡುಗರನ್ನು ಭಾವುಕರನ್ನಾಗಿಸುತ್ತಾರೆ. ಚಿಕ್ಕಣ್ಣ ಮತ್ತು ತಾರಾ ನಡುವಿನ ತಾಯಿ-ಮಗನ ಎಮೋಷನಲ್‌ ದೃಶ್ಯಗಳು ಚಿತ್ರದ ಜೀವಾಳ.

ಚಿಕ್ಕಣ್ಣ ಹುಟ್ಟುಹಬ್ಬಕ್ಕೆ 'ಲಕ್ಷ್ಮೀಪುತ್ರ' ಚಿತ್ರತಂಡದ ಸ್ಪೆಷಲ್ ಗಿಫ್ಟ್: ಸರಿಗಮಪ ಪ್ರತಿಭೆಗಳಿಗೆ ʻಇನ್ಮೇಲೆʼ ಸಾಂಗ್‌ನಲ್ಲಿ ಚಾನ್ಸ್‌

ನಾಯಕಿ ವಂದಿತಾ ತಮ್ಮ ಸವಾಲಿನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಧರ್ಮಣ್ಣ ಕಡೂರು, ಕುರಿ ಪ್ರತಾಪ್, ಶಿವರಾಜ್ ಕೆ.ಆರ್. ಪೇಟೆ ಹಾಗೂ ಮನೋಹರ್ ತಮ್ಮ ಹಾಸ್ಯದ ಮೂಲಕ ಚಿತ್ರಕ್ಕೆ ಮತ್ತಷ್ಟು ರಂಗು ತುಂಬಿದ್ದಾರೆ. ವಿಶೇಷ ಹಾಡೊಂದರಲ್ಲಿ ತೇಜಸ್ವಿನಿ ಶರ್ಮಾ ಹೆಜ್ಜೆ ಹಾಕಿದ್ದು, ಪಡ್ಡೆ ಹೈಕಳ ಮನಸ್ಸನ್ನು ತಣಿಸುತ್ತಾರೆ.

ನಿರ್ದೇಶನ & ಮೇಕಿಂಗ್‌ ಹೇಗಿದೆ?

ಎ.ಪಿ. ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಎಸ್. ಸ್ವಾಮಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಮೊದಲ ಪ್ರಯತ್ನದಲ್ಲೇ ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾ ಕಟ್ಟಿಕೊಡುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಎಪಿ ಅರ್ಜುನ್‌ ಅವರು ಸಂಪೂರ್ಣ ಸ್ಕ್ರಿಪ್ಟ್‌ ಕಡೆಗೆ ಗಮನ ನೀಡಿದ್ದಾರೆ. ಮೊದಲಾರ್ಧವನ್ನು ಹಾಸ್ಯ, ತುಂಟತನ ಮತ್ತು ಪ್ರೀತಿಗೆ ಮೀಸಲಿಟ್ಟರೆ, ದ್ವಿತೀಯಾರ್ಧದಲ್ಲಿ ಮದರ್ ಸೆಂಟಿಮೆಂಟ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇಂಟರ್‌ವಲ್‌ನಲ್ಲಿ ಬರುವ ಫೈಟ್ ಸನ್ನಿವೇಶಕ್ಕೆ ಇನ್ನಷ್ಟು ಗಟ್ಟಿಯಾದ ಹಿನ್ನೆಲೆ ನೀಡಬಹುದಿತ್ತು ಎನಿಸುತ್ತದೆ.

ಚಿತ್ರದ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಸಂಭಾಷಣೆ. ಎ.ಪಿ. ಅರ್ಜುನ್, ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಬರೆದಿರುವ ಸಂಭಾಷಣೆಗಳಲ್ಲಿ ಹಾಸ್ಯದ ಜೊತೆಗೆ ಬದುಕಿನ ಮೌಲ್ಯಗಳೂ ಇವೆ. "ನೂರು ಎಕರೆ ಇರೋ ಹುಡುಗಿಗಿಂತ ಅಕ್ಕರೆ ನೀಡೋ ಅಮ್ಮ ಮುಖ್ಯ", "ಅಮ್ಮ ಅಂದರೇನೆ ಚೆಂದ" ಎಂಬಂತಹ ಸಾಲುಗಳು ಕುಟುಂಬ ಸಮೇತ ಸಿನಿಮಾ ನೋಡುವವರಿಗೆ ನೇರವಾಗಿ ತಲುಪುತ್ತವೆ. ಆದರೆ ಫಸ್ಟ್‌ಹಾಫ್‌ನಲ್ಲಿ ಬರುವ ಒಂಚೂರು ಡಬಲ್‌ ಮೀನಿಂಗ್‌ ಮಾತುಗಳನ್ನು ತುಸು ಕಡಿಮೆ ಮಾಡಬೋದಿತ್ತು.

ತಾಂತ್ರಿಕವಾಗಿ ಗಿರೀಶ್ ಗೌಡ ಅವರ ಛಾಯಾಗ್ರಹಣ ಹಳ್ಳಿಯ ಸೊಗಡನ್ನು ಅಂದವಾಗಿ ಸೆರೆಹಿಡಿದಿದೆ. ದೀಪು ಎಸ್. ಕುಮಾರ್ ಸಂಕಲನ ಅಚ್ಚುಕಟ್ಟಾಗಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ʻಇನ್ಮೇಲೆ ಇನ್ಮೇಲೆʼ ಹಾಡು ಗುನುಗುವಂತಿದ್ದರೆ, ಕ್ಲೈಮ್ಯಾಕ್ಸ್‌ನಲ್ಲಿ ಬರುವ ತಾಯಿ ಸೆಂಟಿಮೆಂಟ್ ಗೀತೆ ಮನಸ್ಸನ್ನು ಕಾಡುತ್ತದೆ.

ಒಟ್ಟಾರೆಯಾಗಿ, ಸಣ್ಣಪುಟ್ಟ ಓರೆಕೋರೆಗಳನ್ನು ಬದಿಗೊತ್ತಿ, ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಕುಳಿತು ನೋಡಬಹುದಾದ, ನಗುವಿನ ಜೊತೆಗೆ ಭಾವುಕತೆಯನ್ನೂ ಉಣಬಡಿಸುವ ಮನರಂಜನಾತ್ಮಕ ಚಿತ್ರವಾಗಿ ʻಲಕ್ಷ್ಮೀಪುತ್ರʼ ಮೂಡಿಬಂದಿದೆ.