ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಕೋಲ್ಕತ್ತಾದ ಸೆಂಟ್ರಲ್ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ದಸರಾ ಮಹೋತ್ಸವದಲ್ಲಿ ಚಿತ್ರದ ಪ್ರಮುಖ ಕಲಾವಿದರಾದ ರಣಬೀರ್ ಕಪೂರ್ ಮತ್ತು ಯಶ್ ಅವರೊಂದಿಗೆ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ಅವರು ಈ ಪ್ರಮುಖ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ.
ರಾಮಾಯಣ ಚಿತ್ರಕ್ಕೆ ತೆರಿಗೆ ವಿನಾಯಿತಿ
ರಾಜ್ಯದಲ್ಲಿ ‘ರಾಮಾಯಣ’ ಚಿತ್ರವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಸಿಎಂ ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದರು. ಈ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಹಾಗೂ ‘ದಿ ಬೆಂಗಾಲ್ ಫೈಲ್ಸ್’ ಚಿತ್ರಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯ ಮಾದರಿಯಲ್ಲೇ ‘ರಾಮಾಯಣ’ ಚಿತ್ರಕ್ಕೂ ಈ ರಿಯಾಯಿತಿ ಅನ್ವಯವಾಗಲಿದೆ ಎಂದರು.
ಭಾರತೀಯ ಪರಂಪರೆ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಮುಂಬರುವ ದಿನಗಳಲ್ಲಿ ಪ್ರೇಕ್ಷಕರು ಶ್ರೀಕೃಷ್ಣ, ಅರ್ಜುನ ಹಾಗೂ ಮಹಾಭಾರತದಂತಹ ಮಹಾಕಾವ್ಯಗಳ ಆಧಾರಿತ ಕಥಾಹಂದರಗಳನ್ನು ಬೆಳ್ಳಿಪರದೆಯ ಮೇಲೆ ಕಣ್ತುಂಬಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲೇ ಹೆಚ್ಚಿನ ಕಲೆಕ್ಷನ್
ಇನ್ನೊಂದೆಡೆ, ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭವಾಗುತ್ತಿದ್ದಂತೆಯೇ ಬಾಕ್ಸ್ ಆಫೀಸ್ನಲ್ಲಿ ಟಿಕೆಟ್ಗಳ ಭರ್ಜರಿ ಮಾರಾಟವಾಗುತ್ತಿದೆ. ನವೆಂಬರ್ 5ರ ಮೊದಲ ದಿನದ ಪ್ರದರ್ಶನಕ್ಕಾಗಿ ದೇಶಾದ್ಯಂತ ಈಗಾಗಲೇ ಬರೋಬ್ಬರಿ 1.53 ಕೋಟಿ ರೂ. ಮೌಲ್ಯದ ಟಿಕೆಟ್ಗಳು ಮಾರಾಟವಾಗಿವೆ. ಈಗಾಗಲೇ ಚಿತ್ರವು 63.32 ಲಕ್ಷ ರೂ. ನಿವ್ವಳ ಗಳಿಕೆ ದಾಖಲಿಸಿದೆ.
ನಗರವಾರು ಲೆಕ್ಕಾಚಾರದಲ್ಲಿ ಮುಂಬೈ ಮುಂಚೂಣಿಯಲ್ಲಿದ್ದರೆ, ರಾಜ್ಯವಾರು ಪಟ್ಟಿಯಲ್ಲಿ 57.09 ಲಕ್ಷ ರೂ. ಗಳಿಕೆಯೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಗುಜರಾತ್ (17.87 ಲಕ್ಷ ರೂ.) ಮತ್ತು ದೆಹಲಿ (15.10 ಲಕ್ಷ ರೂ.) ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.
ವಿಶೇಷವಾಗಿ ಚಿತ್ರದ 3D ಆವೃತ್ತಿಗೆ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ ದೊರೆತಿದೆ. ಹಿಂದಿ 3D ಶೋಗಳಿಂದಲೇ 1.16 ಕೋಟಿ ರೂ. ಸಂಗ್ರಹವಾಗಿದ್ದು, ಇದು ಒಟ್ಟು ಮುಂಗಡ ಬುಕಿಂಗ್ನ ಶೇ.76 ರಷ್ಟಾಗಿದೆ. ಈ ಸಿನಿಮಾವು IMAX, 4DX, Dolby, ICE ಮತ್ತು EPIQ ನಂತಹ ಪ್ರೀಮಿಯಂ ಸ್ಕ್ರೀನ್ಗಳಲ್ಲೂ ರಿಲೀಸ್ ಆಗಲಿದೆ.
Ramayana Movie: ಅದ್ಭುತವಾಗಿ ರಾವಣ ತಾಂಡವ ಮಾಡಿರುವ ಯಶ್; ಹೊಸ ಹಾಡು ರಿಲೀಸ್
ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಹಾಗೂ ನಟ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಅದ್ದೂರಿ ಬಜೆಟ್ನಲ್ಲಿ ನಿರ್ಮಿಸುತ್ತಿವೆ. ಮೊದಲ ಭಾಗವು ನವೆಂಬರ್ 5ರಂದು ಜಾಗತಿಕ ಮಟ್ಟದಲ್ಲಿ ತೆರೆಕಾಣಲಿದ್ದು, ಎರಡನೇ ಭಾಗವನ್ನು 2027ರ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ತಾರಾಗಣದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಜೀವ ತುಂಬಲಿದ್ದಾರೆ. ಜೊತೆಗೆ ರವಿ ದುಬೆ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಅರುಣ್ ಗೋವಿಲ್, ಇಂದಿರಾ ಕೃಷ್ಣನ್ ಮತ್ತು ಲಾರಾ ದತ್ತಾ ಸೇರಿದಂತೆ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ.