ಸಿನಿಮಾ: ಚಂದ್ರಹಾಸ
ತಾರಾಗಣ: ಹರೀಶ್ ಹಿರಿಯೂರು, ಛಾಯಶ್ರೀ ಉಮೇಶ್, ನಿಂಗರಾಜು ಮಂಡ್ಯ, ಸಂತೋಷ್ ಕೇರಿ, ಜ್ಯೋತಿ ಮಂಗಳೂರು ಮುಂತಾದವರು
ನಿರ್ದೇಶನ: ಆನಂದ್ ಎಸ್ ಕಲಕಬಂಡಿ
ನಿರ್ಮಾಣ: ಬಸವಂತಗೌಡ ಪಾಟೀಲ್
ಸಂಗೀತ: ಪೂರ್ಣಚಂದ್ರ ತೇಜಸ್ವಿ
ಅವಧಿ: 2 ಗಂಟೆ 8 ನಿಮಿಷ
ರೇಟಿಂಗ್: 3/5
ಜೀ ಕನ್ನಡ ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ಶೋ ಮೂಲಕ ಖ್ಯಾತಿ ಪಡೆದ ರಂಗಭೂಮಿ ಪ್ರತಿಭೆ ಹರೀಶ್ ಹಿರಿಯೂರು ಅವರು ಇದೇ ಮೊದಲ ಬಾರಿಗೆ ಹೀರೋ ಆಗಿ ʻಚಂದ್ರಹಾಸʼ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲೇ ಒಂದು ಸಿಂಪಲ್ ಕಥೆಯೊಂದನ್ನು ಆಯ್ಕೆ ಮಾಡಿಕೊಡಿದ್ದಾರೆ. ಉತ್ತರ ಕರ್ನಾಟಕದ ಮೂಲದವರಾದ ಹರೀಶ್, ಆ ಭಾಗದ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಆನಂದ್ ಕಲಕಬಂಡಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಕೌಟುಂಬಿಕ ಸಮಸ್ಯೆಗಳ ಜೊತೆಗೆ ಸಾಮಾಜಿಕ ಸಂದೇಶವನ್ನೂ ಹೇಳುವುದಕ್ಕೆ ಪ್ರಯತ್ನಿಸಿರುವುದು ಇದರ ಹೆಚ್ಚುಗಾರಿಕೆ.
ʻಚಂದ್ರಹಾಸʼ ಸಿನಿಮಾದ ಕಥೆ ಏನು?
ಉತ್ತರ ಕರ್ನಾಟಕದ ಯಲಬುರ್ಗಾ ಭಾಗದಲ್ಲಿ ನಡೆಯುವಂತಹ ಕಥೆ ಇದಾಗಿದ್ದು, ಇದರಲ್ಲಿನ ಕಥಾನಾಯಕ ಸೋಮಶೇಖರ (ಹರೀಶ್) ಯಾವುದೇ ಜವಾಬ್ದಾರಿಗಳಿಗೆ ಕಟ್ಟುಬೀಳುವವನಲ್ಲ. ವಿಧವೆ ಅಕ್ಕ, ವಯಸ್ಸಾದ ತಾಯಿಯನ್ನು ತಾನೇ ನೋಡಿಕೊಳ್ಳಬೇಕು ಎಂಬು ಪರಿವೇ ಆತನಿಗೆ ಇರೋದಿಲ್ಲ. ಮಗನನ್ನು ತಿದ್ದುವ ತಾಯಿಯ ಪ್ರಯತ್ನವೂ ಕೈಗೂಡುವುದಿಲ್ಲ. ಹೀಗಿರುವಾಗ ಮದುವೆ ಮಾಡಿದ್ರೆ ಮಗ ಸರಿಹೋಗಬಹುದೇನೋ ಎಂಬ ಆಲೋಚನೆ ತಾಯಿಗೆ ಬರುತ್ತದೆ. ಕೆಲಸವೇ ಇಲ್ಲದೇ ನಿರುದ್ಯೋಗಿ ಹರೀಶನಿಗೆ ಯಾರು ಹೆಣ್ಣನ್ನು ಕೊಡುತ್ತಾರೆ. ಕೊನೆಗೆ ಎಲ್ಲಾ ಕಡೆ ಹುಡುಕಿ, ಸೋದರಮಾವನ ಮಗಳನ್ನೇ ಮನವೊಲಿಸಿ ಮದುವೆ ಆಗುತ್ತಾನೆ. ಆದರೆ ಅಲ್ಲಿಂದ ಸೋಮನ ಬಾಳಿನಲ್ಲಿ ಬಗೆಬಗೆಯ ತಿರುವುಗಳು ಶುರುವಾಗುತ್ತವೆ. ಇದರ ಮಧ್ಯೆ ಬೆಟ್ಟಿಂಗ್ ಗೀಳು ಕೂಡ ಅವನಿಗೆ ಅಂಟಿಕೊಳ್ಳುತ್ತದೆ.
ಕಷ್ಟುಬಿದ್ದು ಕೆಲಸವನ್ನೇ ಮಾಡದ ಸೋಮ ಹೇಗೆ ಕುಟುಂಬವನ್ನು ಸಲಹುತ್ತಾನೆ? ಬೆಟ್ಟಿಂಗ್ನಿಂದ ಅವನ ಬದುಕು ದಿಕ್ಕಾಪಾಲಾಗುತ್ತದಾ? ತಾಯಿ-ಹೆಂಡತಿಯ ಕಥೆ ಏನು? ಇಂತಹ ಪ್ರಶ್ನೆಗಳೊಂದಿಗೆ ಈ ಸಿನಿಮಾ ಸಾಗುತ್ತದೆ.
ಮೇಕಿಂಗ್ ಹೇಗಿದೆ?
ʻಚಂದ್ರಹಾಸʼ ಒಂದು ಸರಳವಾದ ಸಿಂಪಲ್ ಸಿನಿಮಾ. ಯಾವುದೇ ಅತಿಯಾದ ಅದ್ದೂರಿತನ, ಕಥೆಯಲ್ಲಿ ಯಾರೂ ಊಹಿಸಲಾಗದಂತಹ ಟ್ವಿಸ್ಟ್ಗಳಾಲಿ, ತಲೆಗೆ ಕೆಲಸ ಕೊಡುವಂತಹ ನಿರೂಪಣೆಯಾಗಲಿ ಇಲ್ಲ. ಬಹಳ ಸರಳವಾದ ಮತ್ತು ಪ್ರೇಕ್ಷಕರಿಗೆ ಕನೆಕ್ಟ್ ಆಗುವಂತಹ ಕಥಾಹಂದರವೊಂದನ್ನು ನಿರ್ದೇಶಕ ಆನಂದ್ ಕಲಕಬಂಡಿ ಆಯ್ದುಕೊಂಡಿದ್ದಾರೆ. ಈಗಿನ ಜನರೇಷನ್ನ ಯುವಕರು ಬೆಟ್ಟಿಂಗ್ ಮತ್ತು ಸಹವಾಸ ದೋಷಗಳಿಂದ ಹೇಗೆ ದಾರಿ ತಪ್ಪುತ್ತಾರೆ? ಬದುಕಿನಲ್ಲಿ ಯಾವ ರೀತಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು ಎಂಬ ಸಂದೇಶವನ್ನು ನಿರ್ದೇಶಕರು ಇಲ್ಲಿ ಹೇಳಿದ್ದಾರೆ. ಸಿನಿಮಾದ ಜೀವಂತಿಕೆಯನ್ನು ಹೆಚ್ಚಿಸಿರುವುದು ಇದರ ಸಂಭಾಷಣೆ. ಉತ್ತರ ಕರ್ನಾಟಕ ಭಾಗದ ದೇಸಿ ಸೊಗಡಿನ ಸಂಭಾಷಣೆ ಮುದ ನೀಡುತ್ತವೆ. ಸಂಭಾಷಣೆಯಿಂದಲೇ ಅಲ್ಲಿಲ್ಲಿ ನಗಿಸುವ ಪ್ರಯತ್ನ ಕೂಡ ಆಗಿದೆ.
ಸ್ನೇಹ ಮಾಡಿದರೆ, ಎಂಥವರ ಸ್ನೇಹ ಮಾಡಬೇಕು, ಕೆಟ್ಟ ಮಾರ್ಗದಲ್ಲಿ ಹಣ ಗಳಿಸಲು ಹೋದರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರಕ್ಕೆ ಚಂದ್ರಹಾಸ ಅನ್ನೋ ಟೈಟಲ್ ಯಾಕಿಟ್ಟಿದ್ದಾರೆ ಎಂಬುದನ್ನು ಕುತೂಹಲವನ್ನು ಕೊನೆವರೆಗೂ ಕಾಯ್ದುಕೊಂಡಿರುವುದು ವಿಶೇಷ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯವಿರುವ ಹಾಡುಗಳು ಚಿತ್ರಕ್ಕೆ ಬಲ ತುಂಬಿವೆ. ಶರಣ್ ಮತ್ತು ನವೀನ್ ಸಜ್ಜು ಗಾಯನದಲ್ಲಿ ಹಾಡುಗಳು ಖುಷಿ ನೀಡುತ್ತವೆ. ಮೊದಲರ್ಧ ನಾಯಕನ ಉಡಾಫೆತನದ ದೃಶ್ಯಗಳೇ ಜಾಸ್ತಿ ಇದ್ದರೆ, ದ್ವಿತಿಯಾರ್ಧದಲ್ಲಿ ಆತ ಮಾಡುವ ಎಡವಟ್ಟುಗಳು, ಕೌಟುಂಬಿಕ ಕಲಹಗಳ ಬಗ್ಗೆ ಹೆಚ್ಚು ತೋರಿಸಲಾಗಿದೆ.
ಗಮನಸೆಳೆಯುವ ಹರೀಶ್
ಸೋಮನ ಪಾತ್ರವನ್ನು ನಟ ಹರೀಶ್ ಹಿರಿಯೂರು ಉತ್ತಮವಾಗಿ ನಿಭಾಯಿಸಿದ್ದಾರೆ. ಹಾಸ್ಯ ಮತ್ತು ಗಂಭೀರ ಸನ್ನಿವೇಶಗಳಲ್ಲಿ ಅವರ ನಟನೆ ಹೆಚ್ಚು ಹಿಡಿಸುತ್ತದೆ. ಹರೀಶ್ ತಾಯಿ ಪಾತ್ರ ಮಾಡಿರುವ ಕಲಾವಿದೆಯ ನಟನೆಗೆ ಫುಲ್ ಮಾರ್ಕ್ಸ್ ನೀಡಬಹುದು. ಎರಡು ಶೇಡ್ವುಳ್ಳ ಪಾತ್ರದಲ್ಲಿ ಛಾಯಶ್ರೀ ಉಮೇಶ್ ಇಷ್ಟವಾಗುತ್ತಾರೆ. ಗೆಳೆಯರ ಪಾತ್ರದಲ್ಲಿ ನಿಂಗರಾಜು ಮಂಡ್ಯ ಮತ್ತು ಸಂತೋಷ್ ಕೇರಿ ಕಥೆಗೆ ದೊಡ್ಡ ಟ್ವಿಸ್ಟ್ ನೀಡುತ್ತಾರೆ.